ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ಹೊರಗದಾವುದೊ ಚೆಲುವ ಮುಗುಳರಳುತಿಹುದು ;
ಒಳಗರಳುತಿಹುದಂತೆ ಅದನರಿವ ಶಕ್ತಿ;
 ನಿರುತವೂ ನಡೆವವೀ ಎರಡು ವಿನ್ಯಾಸ,
ಬೆಳೆವುದಿಂತನವರತ ಚೆಲುವಿನ ವಿಕಾಸ;
 ಅಂದಂದು ಕಾಂಬ ಚೆಲು ಹಿರಿದೆನಲು ಒಪ್ಪು;
 ಮುಂದುವರಿಯದು ಇನ್ನಿ ದೆನಲು ಅದು ತಪ್ಪು.


ಅದುಮೊದಲು ಆಗಾಗ ಒಮ್ಮೊಮ್ಮೆ ನಾನು
ಅಂದಿನಿಂದವನು ನೆನೆವೆನು ಮನದಿ ಮರಳಿ ;
 ಕದಲದಿಹುದಾ ಚೆಲುವೆ ಹೊಳೆಗಿಳಿದು ಬಂದ
ಒಂದು ನಿಮಿಷದ ಚಿತ್ರ ಎಲ್ಲವನು ಮರೆಸಿ,
 ಕೊಳೆ ಸೋಕದೊಂದು ಮೆಚ್ಚುಗೆ ಉಕ್ಕಿ ಹರಿದು
 ಒಳಗ ಬೆಳಗುವುದು ಬಣ್ಣಿಪ ನುಡಿಯ ಜರೆದು.


ಮನದ ಬಾಂದಳಕಿಂಥ ನೆನವು ನಕ್ಷತ್ರ;
ತಾನೊಂದು ಬೆಳಗುವುದು ದೆಸೆಯೊಂದನೆಲ್ಲ.
 ಮನುಜನನು ಗೆಲುವ ಚೆಲುವಿನ ತತ್ತ್ವ, ಜಗದ
ಮಾನವತೆಯೆಂದೆನಗೆ ಕಲಿಸಿತಾ ಸಂಜೆ;
 ಮರೆಯ ಪರಮಾತುಮದ ಲೀಲೆಯೊಳಸಂಚು
 ತೆರೆಯ ಮುಂದೆಸೆವೆಲ್ಲ ಚೆಲುವ ಸೆಳೆಮಿಂಚು.

______