ಈ ಪುಟವನ್ನು ಪ್ರಕಟಿಸಲಾಗಿದೆ
ಕೆನ್ನೈದಿಲೆ

ಜೋಗವನು ನೋಳ್ಪುದಕೆ ಹೋಗುತಿರೆ ನಾನಂದು
ಮಲೆಯ ನಡುವಣ ಕರಿಯ ನೀರಹರಹ
 ದೂರದ ಉಪಾಂತದಿಂ ಸಾರಿ ನಿನ್ನಯ ಕಾಂತಿ
ಹೊಳೆ ಹರಿದು ನನ್ನ ಕಣ್ಣನು ತುಂಬಿತು.
 ನೀಲ ಜಲದಿಂದೆದ್ದು ನಭದೆದೆಯ ತಿವಿದು
 ಅಲಗಂತೆ ನಿಂತೆ ನೈದಿಲೆ ಜಯವ ಸವಿದು.

ಎಂಥ ಕೆಂಪಿದು, ಎತ್ತ, ಇಂತುಂಟೆ ಲೋಕದಲಿ,
ಎಂದು ಮೋಹಿಸಿ ಕಣ್ಣು ಸಿಟ್ಟಿಸಿರಲು,
 ಮಲೆಯಿಲ್ಲ, ಮರವಿಲ್ಲ, ಜಲವಿಲ್ಲ, ವನವಿಲ್ಲ,
ನಾನಿಲ್ಲ; ಉಳಿದೆ ನೈದಿಲೆಯೊರ್ವ ನೀ.
 ಎನ್ನಾತ್ಮವಾಕ್ಷಣದಿ ನಿನ್ನಲ್ಲಿ ಕೆತ್ತು
 ತನ್ನ ಮರೆದುದು ; ಶೂನ್ಯವಾಯಿತಾ ಸುತ್ತು.

ಇಲ್ಲ; ಶೂನ್ಯವಲ್ಲ; ಎಲ್ಲವನ ನನ್ನಂತೆ
ತಾ ಬಗೆದ ಸೊಗಸು ರೂಪಾಂತುದೆಂದು
 ನಿನ್ನ ನೋಡುವ ಭರದಿ ತನ್ನ ಮರೆದುದು ತಾನು
ಕೆನ್ನ ದೀಧಿತಿಯ ಹೊಳೆಯಲ್ಲಿ ಮಿಂದು ;
 ಮನೆ ಮಾತ ಮರೆಯಿಸುವ ಸತಿಯ ನಗೆಯಂತೆ,
 ಬಾನ ಮರೆಯಿಸುವ ರವಿಯಂತೆ ನೀನಿಂತೆ.

೨೯