ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲುವು

ನೋಡಿದೆನು ಮುಂದೆ ಮಲೆನಾಡ ನದಿಗಳ ದೇವಿ
ಗಂಭೀರ ಹಾಸದಲಿ ನಭವ ತೊರೆದು,
 ನಡುಗೆ ಜಗ, ಪಾತಾಳದೆಡೆಗೆ ಹಾರುವ ಝಳವ;
ನೋಡಿ ಮರೆದೆನು ಮರಳಿ ನನ್ನ ನಾನು.
 ನರಕುರಿಯ ಪದವಿ ಪದವಿಯೆ ಇದರ ಮುಂದೆ?
 ಅಣು ತೃಣಕೆ ಜಲಕಣಕೆ ಕಡಿಮೆ ಅವನೆಂದೆ.


 ನಿನ್ನ ಆಕೃತಿ ಎನಿತು ಚೆನ್ನ ವಾದರು ಕಿರಿದು;
ಭೀಮ ಸುಂದರ ಬೃಹದ್ರೂಪ ಪಾತ,
 ಮೂರು ದಿನದಲಿ ನಿನ್ನ ತೌರ ಮರುಗಿಸಿ ಬಾಡಿ
ಕಾಡಿನಭಿಮನ್ಯು ನೀ ಮರೆವೆ ನೋಡೆ;
 ಯುಗ ಯುಗದ ಹರಿವನರಿಯದೆ ತನ್ನ ಯೋಗ
 ಕಲಕದಿರುವುದಲೇ ಶರಾವತಿಯ ಜೋಗ,



ಆದರಂದಿನ ಮೊದಲು ಸೋದರ್ಯದಲಿ ನೀವು
ಜೊತೆಯಲ್ಲಿ ಸುಳಿಯುವಿರಿ ನನ್ನ ಮನಕೆ;
 ನೆನೆಯುವೆನೆ ಜಲಪಾತವನ್ನು ತರುವುದದು ನಿನ್ನ;
ನಿನ್ನ ನೆನೆವೆನೆ ಅದನು ತರುವೆ ನೀನು;
 ನೀನದರೊಳದುನಿನ್ನೊಳೊಂದಾಗಿ ಬೆರೆದು
ಒಳಗಣ್ಣ ಮುಂದೆ ನಿಲುವಿರಿ ಭೇದ ತೊರೆದು.

೩೦