ಈ ಪುಟವನ್ನು ಪ್ರಕಟಿಸಲಾಗಿದೆ
ಅರಿಕೆ

 ಏನ ನೋಡಿದೆನೋ ನೋಡಲಿಲ್ಲವೋ-
 ಏನ ಕಂಡೆನೋ ಕಾಣಲಿಲ್ಲವೋ-
 ಏನ ಕಂಡು ಇನ್ನೇನಗೆತ್ತೆನೋ-
 ಕಾಣದಾವುದನ್ನು ಕಂಡೆನೆಂಬೆನೋ-

 ನಾನು ಅರಿಯೆನಿದ ನೋಡಬಂದವನು;
 ನೀನೆ ಬಲ್ಲೆಯೈ ತೋರತಂದವನು;
 ಕಾಣಲೆಂದು ಕಣ್ಮನವ ಕೊಟ್ಟವನು ;
 ಜ್ಞಾನ ಸಾಧನವನೆನ್ನೊಳಿಟ್ಟವನು.


 ಹೈದನೊಬ್ಬನನು ಕರೆದು ಕೈಯಲ್ಲಿ
 ಕೈದನಿಟ್ಟು ಗೆಲುಹೋಗು ಎಂದೊಡೆ
 ಕಾದಿ ಶತ್ರುವನು ಕೊಂದು ಬರ್ಪನೋ ?
 ಕೊಯ್ದು ಕೊಂಬನೋ ತಾನೆ ತನ್ನನು ?


 ಕೊಟ್ಟ ಓಜಸಿದ ನೋಡದಿರ್ದೊಡೆ
 ಕೆಟ್ಟದಾಗದೆಂತಿಹುದು ಬಾಲಗೆ?
 ನೆಟ್ಟಿನೊಳ್ಳಿದಕೆ ನಡೆವೆನೆಂತುಟು ?
 ಹುಟ್ಟು ಬಣ್ಣವೇ ಸತ್ಯ ಮನುಜಗೆ ?

೬೨