ಈ ಪುಟವನ್ನು ಪ್ರಕಟಿಸಲಾಗಿದೆ

೧೩೮ | ಜಾಗರ
ಸರಿ, ಯಾವ ಸಂದರ್ಭವನ್ನು ವಾದಕ್ಕೆ ಆಯ್ದು ಕೊಂಡನೆನ್ನುವುದು ಅರ್ಥಧಾರಿಯ ಪರಿಣತಿಯ ದ್ಯೋತಕವಾಗಿರುವುದು.
ಅರ್ಥಗಾರಿಕೆ ಎಂದರೆ ಬರೇ ವಾದವಲ್ಲ, ತರ್ಕನೈಪುಣ್ಯ ಅರ್ಥಧಾರಿಗಿರ ಬೇಕಾದ ಹಲವು ಗುಣಗಳಲ್ಲಿ ಒಂದು ಅಷ್ಟೆ. ಅದು 'ಹತ್ತರಲ್ಲಿ ಒಂದು' ಮಾತ್ರ. ಬೇರೆ ಒಂಬತ್ತು ಅದಕ್ಕಿಂತ ಮುಖ್ಯ. ವಾದದ ಗೆಲುವೇ ಅರ್ಥದ ಗೆಲುವಲ್ಲ. ಒಂದು ಪಾತ್ರ ನಿರ್ವಹಣೆ ವಾದದಲ್ಲಿ ಸೋತು ಕೂಡಾ ಯಶಸ್ವಿಯಾಗಬಲ್ಲುದು.
ವಾದದ ಮಿತಿಯನ್ನು ಕಂಡುಕೊಳ್ಳಲು ಪಾತ್ರಧಾರಿಗಳಲ್ಲಿ ಪೂರ್ವಸಮಾ ಲೋಚನೆ ನಡೆಸಬೇಕಾದ ಅಗತ್ಯವಿದೆ. ಯಕ್ಷಗಾನವು ಒಂದು ಪರೀಕ್ಷಾರಂಗವಲ್ಲ, ಅದು ಪ್ರದರ್ಶನ. ಆದ್ದರಿಂದ ಮಾತಿನ ಚೌಕಟ್ಟನ್ನು ಮೊದಲೇ ಸ್ಕೂಲವಾಗಿ ನಿರ್ಧರಿಸಿಕೊಂಡರೆ ತಪ್ಪೇನೂ ಇಲ್ಲ.
ಇದೀಗ ಹೊಸತಲೆಮಾರಿನ ಅರ್ಥಧಾರಿಗಳಲ್ಲಿ ವಾದವು ಸುಸಂಬದ್ಧವಾಗಿ ರುವುದು ಆಶಾದಾಯಕ ಅಂಶವಾಗಿರುವುದು. ವಾದವು ಸಂವಾದ ರೂಪದಲ್ಲಿ ಬೆಳೆ ಯುತ್ತಿದ್ದು, ಹಿತಮಿತವಾದ, ಸ್ವಾರಸ್ಯಕರ ಚುಟುಕು ಚುರುಕು ಸಂಭಾಷಣೆಯ ರೂಪ ತಳೆದುದು ಕಂಡು ಬರುತ್ತಿದೆ. ಪೂರ್ವಸಮಾಲೋಚನೆಯಿಂದ ಮಾತು ಗಾರಿಕೆ ಸೊಗಸಾಗಿ ಸಾಗಬಲ್ಲುದೆಂಬುದು ನನ್ನ ಹಾಗೂ ಕೆಲ ಸಹಕಲಾವಿದರ ಪ್ರಾಯೋಗಿಕ ಅನುಭವ.
ಅರ್ಥಗಾರಿಕೆಯಲ್ಲಿ ವಾದವೆಂಬುದು ಸೌಂದರ್ಯ ಪ್ರಜ್ಞೆಯಿಂದ ಕೂಡಿ ಸಾಗಿದಾಗ - ಆಕರಗ್ರಂಥಗಳಲ್ಲಿ ಕಾಣುವ ಸಂದೇಹ ಸಮಸ್ಯೆಗಳ ಬಗೆಗೆ ಸ್ವಾರಸ್ಯಕರ ವಾದ ಚರ್ಚೆ ಆಗಬಲ್ಲುದು. ಪಾತ್ರ ಮತ್ತು ಘಟನೆಗಳ ಮೌಲ್ಯ ಪ್ರಪಂಚವನ್ನು ಅದು ತೆರೆದಿಡಬಲ್ಲುದು, ಪುರಾಣಕಾಲದ ವಿವಿಧ ಜೀವನ ಸಿದ್ದಾಂತಗಳ ದರ್ಶನ, ಇಂದಿನ - ಹಿಂದಿನ ಜೀವನ ದೃಷ್ಟಿಗಳ ಸಾಮ್ಯ - ವೈಷಮ್ಯಗಳ ನೋಟ ನೀಡಬಲ್ಲು ದು. ಪ್ರಸಂಗದ ಕವಿಯ ಕಲ್ಪನೆಗಳ, ರಚನಾಸಾಮರ್ಥ್ಯದ ದರ್ಶನ ಕೊಡಬಲ್ಲುದು. ಅರ್ಥಧಾರಿಯ ಅಧ್ಯಯನದಲ್ಲಿ ಸಿಕ್ಕಿದ ವಿಷಯ ವೈವಿಧ್ಯ ಪ್ರೇಕ್ಷಕನಿಗೆ ಒಂದು ಅನುಭವವಾಗಿ ವರ್ಗಾಯಿಸಲ್ಪಡಲು ಸಾಧ್ಯ.
ವಾದವೆಂಬುದು ಅರ್ಥಗಾರಿಕೆಯ ಸ್ವಾರಸ್ಯಕ್ಕೆ ಅವಶ್ಯವಾದ, ರಸಿಕರು ಬಯಸುವ ಒಂದು ಅಂಗ. ಅದರ ಬಳಕೆ, ಪ್ರಸಂಗದ, ಜೀವನ ದರ್ಶನದ, ಪಾತ್ರ ಸ್ವಭಾವದ, ಔಚಿತ್ಯದ, ನಾಟಕೀಯ ಪರಿಣಾಮದ, 'ಕಾವ್ಯನ್ಯಾಯ'ದ ಒಟ್ಟು ಹಿನ್ನೆಲೆ ಯಲ್ಲಿ ಪ್ರಕಟವಾದ ಕಲೆಯ ಅಂಗವಾಗುತ್ತದೆ.
'ಪಾರಿಜಾತ' ಮಣಿಪಾಲ ಸಾಹಿತ್ಯ ಸಂಘದ ವಾರ್ಷಿಕೋತ್ಸವ ಸಂಚಿಕೆ ಏಪ್ರಿಲ್ 1976