ಈ ಪುಟವನ್ನು ಪ್ರಕಟಿಸಲಾಗಿದೆ

472

ಸೇತುವೆ

ಇರ್‍ತಾರೆ. ನೀವು ನನ್ನನ್ನ ತಪ್ಪು ತಿಳಕೊಂಡಿರಿ..."
ಇನ್ನಷ್ಟು ಎಚ್ಚರಿಕೆಯಿಂದ ಜಯದೇವನೊಡನೆ ಆ ಪ್ರಸ್ತಾಪ ಮಾಡಬೇಕಾ
ಗಿತ್ತು_ಎಂದು ನಂಜುಂಡಯ್ಯ ತಮ್ಮೊಳಗೆ ಹಲುಬಿದರು.
ಇನ್ಸ್ ಪೆಕ್ಟರ ಜಾತಿಯ ವಿಷಯ ಉಳಿದಿಬ್ಬರು ಉಪಾಧ್ಯಾಯರಿಗೂ ತಿಳಿಯಿತು.
ಲಕ್ಕಪ್ಪಗೌಡರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಎಲ್ಲರನ್ನೂ
ಉಪೇಕ್ಷಿಸುತ್ತ ಬಿಂಕದಿಂದ ಅತ್ತಿತ್ತ ಚಲಿಸಿದರು.
ರಾಮಾಚಾರಿ ಶಾಲೆಯ ಹಿಂಬದಿಗೆ ಹೋಗಿ ಸಿಗರೇಟು ಸೇದಿ ಬಂದು, ಜಯ
ದೇವನೊಡನೆ ಗೊಣಗಿದ:
"ಹೊಲೆಯ ಬಂದು ನಮ್ಮ ಯೋಗ್ಯತೇನ ಅಳೀಬೇಕೆ? ಇಂಥ ಗತಿ ಒದಗ್ಬೇಕೆ
ನಮಗೆ?"
ಬಲು ಬೇಸರದಿಂದ ಜಯದೇವ ನುಡಿದ:
"ಮನುಷ್ಯ ಯಾವನಾದರೇನು? ಯೋಗ್ಯ ವಿದ್ವತ್ತಿದ್ದರೆ ಪರೀಕ್ಷೆ ಮಾಡೋ
ಅರ್ಹತೆ ಆತನಿಗೆ ಇದ್ದೇ ಇರುತ್ತೆ."
ಈ ಇನ್ಸ್ ಪೆಕ್ಟರಿಗೆ ಅಂತಹ ಅರ್ಹತೆ ಇತ್ತು. ನಡೆ ನುಡಿ ಮೆತ್ತಗಿದ್ದರೂ
ವಿದ್ಯಾರ್ಥಿಗಳನ್ನೂ ಉಪಾಧ್ಯಾಯರನ್ನೂ ಪರೀಕ್ಷಿಸುವುದರಲ್ಲಿ ಅವರು ಜಾಣ್ಮೆ
ತೋರಿದರು.
"ಶ್ರಮದಾನದ ವಿಷಯದಲ್ಲಿ ಹುಡುಗರಿಗೆ ಸಾಕಷ್ಟು ಆಸಕ್ತಿ ಇದೆಯೊ?" ಎಂದು
ಅವರು ಉಪಾಧ್ಯಾಯರನ್ನು ಕೇಳಿದರು.
"ಆ ವಿಭಾಗವನ್ನು ಜಯದೇವರು ನೋಡ್ಕೊಳ್ತಿದಾರೆ," ಎಂದರು
ನಂಜುಂಡಯ್ಯ.
ಇನ್ಸ್ ಪೆಕ್ಟರು ಮುಗುಳು ನಕ್ಕರು.
ಜಯದೇವನೆಂದ:
"ಮುಖ್ಯವಾಗಿ ಕೆಲಸ ಯಾವುದು ಅನ್ನೋದರ ಮೇಲೆ ಅದು ಹೊಂದಿಕೊಂಡಿ
ರುತ್ತೆ. ಹಾಗೆಯೇ ಆ ವಿಷಯದಲ್ಲಿ ಉಪಾಧ್ಯಾಯರು ಉತ್ಸಾಹ ಹುಟ್ಟೋ ಹಾಗೆ
ಮಾಡಿದರೆ, ಹೆಚ್ಚು ಆಸಕ್ತಿ ತೋರಿಸ್ತಾರೆ. ಎರಡೂ ಇಲ್ದೆ ಇದ್ದಾಗ ಅದು ಗುಲಾಮೀ
ಚಾಕರಿಯಾಗುತ್ತೆ. ಮನೇಲಿ ತಾಯ್ತ೦ದೆಯರಿಗೆ ದೂರು ಕೊಡ್ತಾರೆ. ಏನಾದರೂ
ನೆಪ ಹೇಳಿ ತಪ್ಪಿಸ್ಕೊಳ್ತಾರೆ."
ಇನ್ಸ್ ಪೆಕ್ಟರಿಗೆ ಆ ವಿವರಣೆ ತುಂಬ ಇಷ್ಟವಾಯಿತು. ಅವರೆಂದರು:
"ನೀವು ವ್ಯಕ್ತಪಡಿಸಿರೋದು ಸರಿಯಾದ ಅಭಿಪ್ರಾಯ. ನನಗೂ ಹಾಗೇ
ಅನಿಸುತ್ತೆ. ಶ್ರಮದಾನದ ಮೇಲೆ ನೀವು ಒಂದು ನೋಟ್ ಬರೆದುಕೊಡಿ."
ಹಾಗೆ ಹೇಳಿದುದು ಜಯದೇವನಿಗಾದರೂ, ಉತ್ತರವನ್ನು ನಂಜುಂಡಯ್ಯ
ಇತ್ತರು: