ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

495

"ನೀವು ಆರೋಗ್ಯವಾಗಿದೀರಾ ಅಪ್ಪಯ್ಯ?" ಎಂದು ಜಯದೇವ ತಂದೆಯನ್ನು
ಕೇಳಿದ.
"ಇದೀನಿ ಹೀಗೆ. ವಯಸ್ಸಾದ ಮೇಲೆ ಇನ್ನೇನು?" ಎಂದರು ಗೋವಿಂದಪ್ಪ.
ಸತ್ಯವತಿಯ ಕಾಹಿಲೆಯ ವಿಷಯ ಅವರು ಬರೆದು ತಿಳಿಸಲಿಲ್ಲವೆಂದು ಜಯ
ದೇವ ಆಕ್ಷೇಪಿಸಲಿಲ್ಲ.
"ನೀನು ತಿಂಗಳಿಗೊಮ್ಮೆಯಾದರೂ ಬರೀತಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತೆ
ಜಯಾ," ಎಂದು ಅವರೇ ಹೇಳಿದರು.
"ಬರೀತೀನಿ ಅಪ್ಪಯ್ಯ."
"ಅದೇ ಊರಲ್ಲೆ ಇರಬೇಕೂಂತ ಮಾಡಿದೀಯಾ?"
"ಮುಂದಿನ ವರ್ಷ ಹೈಸ್ಕೂಲು ಮಾಡ್ತಾರೆ. ನಾನು ಅಲ್ಲಿ ಸೇರ್‍ಕೋತೀನಿಂತ
ಅವರು ನಂಬಿದಾರೆ. ಸ್ವಲ್ಪ ದಿವಸ ತರಬೇತು ಆದ ಹಾಗೂ ಆಗುತ್ತೆ ನ೦ಗೆ."
ತಂದೆ ಅಪೇಕ್ಷಿಸಿದ್ದುದು ಬೇರೆಯೇ ಉತ್ತರ. ಜಯದೇವನಿಗೆ ಅದು ಗೊತ್ತಿತ್ತು.
ಅವರಿಗೆ ನಿರಾಸೆಯಾಗದಿರಲೆ೦ದು, ಸುಳ್ಳು ಹೇಳಬೇಕಾದ ಪ್ರಮೇಯ. ಹೇಳಿದರೆ
ತಪ್ಪೇನು?_ಎಂಬ ಆತ್ಮಸಮರ್ಥನೆ ಬೇರೆ.
ಜಯದೇವ ಮುಂದುವರಿಸಿದ:
"ಆ ಮೇಲೆ ಇಲ್ಲಿಗೆ ಬಂದರಾಯ್ತು."
ಆದರೆ ಆ ಸುಳ್ಳಿಗೂ ಹೆಚ್ಚಿನ ಅರ್ಥವಿಲ್ಲ ಎನ್ನುವಂತೆ ಆತನೇ ಹೇಳಿದ:
"ಸರಕಾರಿ ಕೆಲಸದಲ್ಲಿ ಒಂದು ತೊಂದರೆ ಅಪ್ಪಯ್ಯ. ಈ ಊರಲ್ಲೇ ಇಡ್ತಾರೆ
ಅನ್ನೋ ಭರವಸೆ ಏನು? ಎಲ್ಲಿಂದೆಲ್ಲಿಗೆ ಬೇಕಾದರೂ ವರ್ಗಾಯಿಸಬಹುದು."
"ಗೊತ್ತು," ಎಂದು ಹೇಳಿ ಗೋವಿಂದಪ್ಪ ನಿಟ್ಟುಸಿರು ಬಿಟ್ಟರು.
ಸೊಸೆ ಮನೆಗೆ ಬಂದ ಮೇಲೆ ಅತ್ತೆಗೆ ವಿಶ್ರಾಂತಿ. ಅದು 'ಲೋಕರೂಢಿ.'
ಆದರೆ ಕಾನಕಾನಹಳ್ಳಿಯ ಆ ಮನೆಯಲ್ಲಿ ಆ ಮಾತು ಸತ್ಯವಾಗುವುದು, ಸಾಧ್ಯವಿರಲಿಲ್ಲ.
ಕೆಲಸ ಕಲಿಯಲು ಬಂದ ಎಳೆಯ ಹುಡುಗಿಯೆ ಆ ಸೊಸೆ? ಆಕೆ ಬಸುರಿ. ಅಲ್ಲದೆ, ಆ
ಸಂಸಾರಕ್ಕೂ ಆಕೆಗೂ ಇದ್ದ ಬಾಂಧವ್ಯವೂ ಅಷ್ಟಕ್ಕಷ್ಟೆ.
ಜಯದೇವ ಒಬ್ಬನೇ ದೊರೆತಾಗ ಸುನಂದಾ ಕೇಳಿದಳು:
"ಯಾವತ್ತು ಹೊರಡೋದು?"
ಆಗಲೆ ಎರಡು ದಿನಗಳಾಗಿದ್ದುವು ಅವರು ಅಲ್ಲಿಗೆ ಬಂದು.
"ಇನ್ನೊಂದು ದಿನ ತಡೆ."
"ಇಲ್ಲಿ ತುಂಬಾ ಬೇಜಾರು."
"ಗೊತ್ತು. ಹೋಗೋಣ. ಅಪ್ಪಯ್ಯನಿಗೆ ನಾನು ಹೇಳ್ತೀನಿ."
ಆ ಅಪ್ಪಯ್ಯನೆಂದರು:
"ನಿನ್ನಿಷ್ಟ. ಇಷ್ಟು ಬೇಗ್ನೆ ಹೋಗಲೇಬೇಕಾದರೆ ಹೋಗು."