ಈ ಪುಟವನ್ನು ಪ್ರಕಟಿಸಲಾಗಿದೆ

360

ಸೇತುವೆ

ನಂಜುಂಡಯ್ಯ, ಶಾಲೆಯ ಜವಾನನನ್ನು ಕರೆದುತರಲು ದೊಡ್ಡ ಮಗಳನ್ನು
ಕಳುಹಿಸಿದರು.
ಸುನಂದೆಯ ಕಡೆ ತಿರುಗಿ, "ನೀವೇನೂ ಯೋಚಿಸ್ಬೇಡಿ. ಒಳಗಿಡೆ ಚಾಪೆ
ಹಾಸ್ತಾರೆ. ಸ್ವಲ್ಪ ವಿಶ್ರಾಂತಿ ತಗೊಳ್ಳಿ. ನಾವು ಒಂದಿಷ್ಟು ಮಾತಾಡ್ತಾ ಕೂತಿರ್ತೀವಿ,"
ಎಂದರು. ಆಗದೆ ಜಯದೇವ್?" ಎಂದು ಒಪ್ಪಿಗೆಯನ್ನೂ ಕೇಳಿದರು.
"ಧಾರಾಳವಾಗಿ," ಎಂದ ಜಯದೇವ. ಊಟವಾದ ಬಳಿಕ ಮೈ ಜಡವಾಗಿ
ಆತನಿಗೂ ವಿಶ್ರಾಂತಿ ಬೇಕೆನಿಸಿತ್ತು. ಆದರೆ ನಂಜುಂಡಯ್ಯ ತಾನಾಗಿಯೇ ಆ ಪ್ರಸ್ತಾಪ
ಮಾಡುವ ತನಕ ಆತನೇನೂ ಮಾಡುವಂತಿರಲಿಲ್ಲ.
ಸುನಂದಾ ತೋಳ ಮೇಲೆ ತಲೆ ಇಟ್ಟೊಡನೆಯೇ ನಿದ್ದೆ ಹೋದಳು.
ಕೊಠಡಿಯಲ್ಲಿ ತಾವಿಬ್ಬರೇ ಉಳಿದಾಗ, ನಂಜುಂಡಯ್ಯ ಕುರ್ಚಿಯ ಮೇಲೆ
ಕುಳಿತು ಮೇಜಿನ ಮೇಲೆ ಕಾಲಿರಿಸುತ್ತ, ಮತ್ತೊಂದು ಸಿಗರೇಟು ಹಚ್ಚಿ ಮಾತಿಗೆ
ಆರಂಭಿಸಿದರು:
"ಒಟ್ಟಿನಲ್ಲಿ ನನಗೆ ತುಂಬಾ ಸಂತೋಷವಾಗಿದೆ, ಜಯದೇವ್. ನೀವು ಬಂದದ್ದು
ಬಹಳ ಒಳ್ಳೆದಾಯ್ತು. ಒಂದು ಮಾಧ್ಯಮಿಕ ಶಾಲೆಯಲ್ಲಿ ಇಬ್ಬರು ಪದವೀಧರರರು!
ನೋಡಿದ ಯಾರಾದರೂ ನಾವು ಹುಚ್ಚರೂಂತ ತಿಳ್ಕೋಬೇಕು!"
ತೂಕಡಿಕೆ ಬಂದಂತಾದರೂ ಎವೆಗಳನ್ನು ಬೇರೆ ಬೇರೆಯಾಗಿಯೆ ಇಡಲು ವಿಶ್ವ
ಪ್ರಯತ್ನ ಮಾಡುತ್ತ ಜಯದೇವ ಕುಳಿತ. ತಾನು ಮಾತನಾಡುವುದರಿಂದ ನಿದ್ದೆಯ
ಕಾಟವಾದರೂ ತಪ್ಪಬಹುದೆಂದು ಆತನೆಂದ:
"ಈಗ ಎಷ್ಟು ಜನ ಇದಾರೆ ಒಟ್ಟು?"
“ಅದೊಂದು ವಿಷಯದಲ್ಲಿ ಮಾತ್ರ ನಮ್ಮದು ದುರ್ಭಾಗ್ಯದ ಊರೇ. ನೀವು
ಹೋದ್ಮೇಲೆ ಏಳೆಂಟು ತಿಂಗಳು ಆ ಸ್ಥಾನಕ್ಕೆ ಯಾರೂ ಬರ್ಲಿಲ್ಲ. ಆ ಮೇಲೊಬ್ಬ
ಬಂದ ಲಕ್ಕಪ್ಪ ಅಂತ-ಲಕ್ಕಪ್ಪಗೌಡ. ಎಸೆಸ್ಎಲ್ಸಿ. ಇನ್ನಾದರೂ ಕೆಲಸ ಸ್ವಲ್ಪ
ಕಡಮೆಯಾಗುತ್ತೇನೋ ಅಂತ ಯೋಚಿಸ್ತಾ ಇದ್ದಾಗಲೇ ಆ ವೆಂಕಟರಾಯನನ್ನು
ಹೊತ್ತು ಹಾಕಿದ್ದಾಯ್ತು. ಆ ಮೇಲೆ ನನ್ನ ಸಹಾಯಕ್ಕೆ ಹೊಸಬರು ಒಬ್ಬರೂ ಇಲ್ಲ."
"ಹಾಗಾಯ್ತೇನು? ಮೂರು ಜನ ಇದ್ದಿದ್ರೆ ನನಗೆ ಬಹುಶಃ ಇಲ್ಲೇ ಅವಕಾಶ
ಸಿಗ್ತಿರ್ಲಿಲ್ವೋ ಏನೊ?"
“ ಹೂಂ ಹೂಂ. ಅದೇನೋ ನಿಜಾಂತಿಟ್ಕೊಳ್ಳಿ. ಒಂದು ರೀತೀಲಿ ನೋಡಿದರೆ
ಆ ಜಾಗ ಭರ್ತಿಯಾಗದೇ ಇದ್ದದ್ದು ಒಳ್ಳೇದಾಯ್ತ.”
ಜಯದೇವ ತುಸು ಯೋಚಿಸಿದ. ಮುಖ್ಯೋಪಾಧ್ಯಾಯ ನಂಜುಂಡಯ್ಯ
ನವರು ತನ್ನ ವಿಷಯವಾಗಿ ಆದರಪೂರ್ವಕ ಮಾತನಾಡಿದ್ದರು. ಹಿಂದಿನದಕ್ಕಿಂತ
ಭಿನ್ನವಾಗಿತ್ತು ಅವರ ಈಗಿನ ವರ್ತನೆ. ರಂಗರಾಯರನ್ನು ಹಿಂದೆ ಕಟುವಾಗಿ ದ್ವೇಷಿ
ಸಿದ ವ್ಯಕ್ತಿ ಇವರೇ ಎನ್ನುವುದು ಕಷ್ಟವಾಗಿತ್ತು.