ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ನೋವು

ಅಂತ ಕೇಳ್ದೆ. ನಗರ ಅಂದ್ರು. ಅವರೇನಾ ನಿಮ್ಮನೆಗೆ ಆಗ ಬಂದೋರು ?"

        "ಹೂ೦.. ಅವರೇನೇ. ನಗರದ ನ್ಯೂ ಗಣೇಶ ಭವನದ ಮಾಲಿಕರ ಸಂಬಂಧಿಕ." 
        "ಓ, ಅಂಗಾ ? ಓಟ್ಲಿಡೋದು ಆಯಪ್ನೇನಾ?"
        "ಹೌದು."
        ಮೌನದ ನಡಿಗೆ ನಾಲ್ಕು ಹೆಜ್ಜೆ. ಬಳಿಕ ಗೋವಿಂದ : 
        "ನಮ್ಮ ಹಳ್ಳೀಲಿ ಹೋಟು ಶುರುಮಾಡೋ ವಿಷಯ ಜನ ಏನಂತಾರೆ ವೆಂಕಟಪ್ನೋರೆ ?" -
        "ಓಟ್ಲಿ ರುಚಿ ಜನಕ್ಕೆ ಏನು ಗೊತ್ತೈತೆ, ಗೋವಿಂದಪ್ಪ? ಶುರು ಆಗ್ಲಿ, ಆಮ್ಯಾಕೆ ನೋಡಾನ..ಅಂದ ಹಾಗೆ–
        "ಏನು?" 
        "ಓಟ್ಲಲ್ಲಿ ಆಯಪ್ಪ ಬೀಡಿ ಸಿಗರೇಟೆಲ್ಲ ಮಡಗ್ತಾನಂತಾ?"
        ಆ ಪ್ರಶ್ನೆಗೆ ಯಾವ ವಿಚಾರ ಹಿನ್ನೆಲೆಯಾಗಿತ್ತೆಂಬುದು ಗೋವಿಂದನಿಗೆ ಹೊಳೆಯಿತು. 
        "ಗೊತ್ತಿಲ್ಲ, ಅದೇನೇನು ಮಡಗ್ತಾರೋ..." ಎಂದ. 
        ವೆಂಕಟಪ್ಪ ಕತ್ತು ತುರಿಸಿದ. ಬಿಸಿಯುಸಿರು ಬಿಟ್ಟ. ಅವುಡು ಕಚ್ಚಿದ. ಯಾಚನೆಯ ಹೊರತು ಬೇರೆ ಉಪಾಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದ. 
       "ಹಂಗಲ್ಲ ಗೋವಿಂದಪ್ಪ. ಸಣ್ಣಪುಟ್ಟ.ಸಾಮಾನುಗೋಳು ಈಗ ನಮ್ಮಂಗ್ಡೀಯಾಗೇ ಸಿಕ್ತವೆ. ಅದೇ ಸಾಮಾನುಗೋಳ ಯಾಪಾರ ಓಟ್ಲ್ನನಾಗೂ ಮಾಡೋದು ಚೆಂದಾಕಿರ್ತದಾ ?" ಎ೦ದು ರಾಗವೆಳೆದ. 
       "ಆದ್ರೆ, ಹೋಟ್ಲು ಅಂದ್ಮೇಲೆ ಕಾಫಿ ಕುಡ್ದೋರು  ಸಿಗರೇಟು ಗಿಗರೇಟು ಕೇಳಿಯೇ ಕೇಳ್ತಾರೆ. ಅಲ್ವಾ ?”
      "ಆಯಪ್ಪಗೆ ಒಸಿ ಯೋಳ್ನೋಡಿ ಗೋವಿಂದಪ್ಪ." 
      "ಆಗಲಿ, ಹೇಳೋಣ. ಹೋಟ್ಲಿನವರು ಸೋಪು ಗೀಪು ಇಡಲಾರು. ಆದರೆ ಸಿಗರೇಟಿನ ವಿಷಯ ಹ್ಯಾಗೊ ?"
      "ಅದೆಲ್ಲ ನಂಗೊತ್ತಿಲ್ಲ, ಅಳ್ಳಿಯಾಗೆ ದ್ವೇಷ ಕಟ್ಟೊಂಡು ಓಟ್ಲು ಮಡಗೋಕಾಗ್ತದಾ? ಅಂಗೂ ಅಟ ಮಾಡಿದ್ರೆ ಇವತ್ತಿನ ಗಂಟ ಒಗ್ಗಟ್ಟಾಗಿದ್ಹಳ್ಳೀಲಿ ಪಾಲ್ಟಿ ಆದಾತು."
      ಯಾಚಕ ದಂಡಪಾಣಿಯಾಗಿ ಮಾರ್ಪಟ್ಟಿದ್ದ. 
      ಗೋವಿಂದ ಒಳಗಿಂದೊಳಗೆ ನಕ್ಕ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪಾರ್ಟಿ ಗಳಿರಬೇಕು. ಅವನಿಗೆ ಅಷ್ಟು ತಿಳಿಯದೆ ? ಅಂತಹ ಏರ್ಪಾಟಿಗೆ ವೆಂಕಟಪ್ಪ ಸಹಾಯಕನಾಗುವು ದಾದರೆ ಬೇಡ ಎನ್ನುವುದುಂಟೆ?
      ಆದರೆ ಬಹಿರಂಗವಾಗಿ ನೊಂದವನಂತೆ ನಟಿಸಿ, ಗೋವಿಂದ ನುಡಿದ: 
      "ಇಷ್ಟು ಸಣ್ಣದಕ್ಕೆ ಪಾರ್ಟಿ ಮಾತೆಲ್ಲ ಯಾಕೆ ವೆಂಕಟಪ್ನೋರೆ ? ಬರೇ ಹೋಟ್ಲೋ, ದಿನಸಿ ಅಂಗಡಿ ಇಡೋ ಯೋಚ್ನೆ ಏನಾದರೂ ಇದೆಯೋ ಅಂತ ಗಜಾನನನ್ನು ಕೇಳಿ ನೋಡ್ತೀನಿ."
      "ನಾನು ಯೋಳಿದ್ದು ಮನಸ್ನಾಗಿಟ್ಕೊಳ್ಳಿ."
      "ಓಹೋ. ಅದಕ್ಕೇನೆಂತೆ ? ಸ್ಪಷ್ಟವಾಗಿ ಅವನಿಗೆ ಹೇಳ್ತೀನಿ,"