ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ನೋವು

        ರಂಗಣ್ಣನಿಗನಿಸುತ್ತಿತ್ತು:
       ' ಇದು ಅನಿವಾರ್ಯ.'
        ಅಲ್ಲದೆ, ಸುಬ್ಬಿ ಇನ್ನೊಬ್ಬರ ಮನೆಯನ್ನು ಬೆಳಗುವ ಹೆಣ್ಣು. ತಂದೆಯ ಮನಸ್ಸಿನಲ್ಲಿ ಏನಾಗುತ್ತಿದೆಯೋ ರಂಗಣ್ಣನಿಗೆ ತಿಳಿಯದು. ಆದರೂ ಅವನಿಗೆ ತೋರುತ್ತಿತು :
       'ಅಪ್ಪ ಈ ವರ್ಷವೇ ಸುಬ್ಬಿಯ ಮದುವೆ ಮಾಡಿಬಿಡೋದು ಖಂಡಿತ.'
       ತಾನು ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಬೇಕು. ಒಮ್ಮೆಯೂ ಫೇಲಾಗ ಬಾರದು. ಪದಕಗಳನ್ನು ಗಳಿಸಬೇಕು. ಉಚ್ಚ ಶಿಕ್ಷಣದ ವಿದ್ಯಾರ್ಥಿ ವೇತನ ದೊರಕಿಸಬೇಕು.
      ಇಲ್ಲಿ ಇನ್ನೂ ಎಷ್ಟು ದಿನ ಇರೋಣ ?
      ಮುಂದಿನ ವರ್ಷದಿಂದಂತೂ ಹಳ್ಳಿಗೆ ಬಂದು ಹೆಚ್ಚು ದಿನ ಇರುವ ಪ್ರಮೇಯವಿಲ್ಲ. ಚುಟುಕು ರಜೆ.
      ಈ ಸಲದ ರಜೆಯನ್ನು ತಾನಾಗಿಯೇ ಮೊಟಕುಗೊಳಿಸಿದರಾಯಿತು.
     ಯಾವಾಗ ಹೊರಡೋಣ ಹಾಗಾದರೆ ?
     ಸುಬ್ಬಿಯನ್ನು ನಾಗಮ್ಮ ಕೇಳಿದರು :
     "ಇವತ್ತು ಏನಡಿಗೆ ಮಾಡಾನ ?
     "ಏನಾದರೂ ಮಾಡಿ ಅತ್ತೆಮ್ಮ."
     "ಸೊಪ್ಪೈತೆ, ಅಲ್ಲವಾ ?'
     "ಊಂ."
     "ಸರಿ–ಸಾರು ಮಾಡಾನೆ."
     ನಾಗಮ್ಮನಿಗೆ ಬೇಸರ, ಎಷ್ಟು ಮಾಡಿದರೂ ಸುಬ್ಬಿ ಮೊದಲಿನಂತೆ ಆಗಲಿಲ್ಲವಲ್ಲ. ಒಂದು ಬಗೆಯ ಮಬ್ಬು, ಮಂಕು. ದಿನದಲ್ಲಿ ಸ್ವಲ್ಪ ಹೊತ್ತು ಚುರುಕಾಗಿರುತ್ತಾಳೆ. ಉಳಿದ ವೇಳೆಯಲ್ಲಿ ಯಾವ ಲವಲವಿಕೆಯೂ ಇಲ್ಲ.
     ಏನು ಪರಿಹಾರ ಇದಕ್ಕೆ ?
     ನಾಗಮ್ಮನಿಗೆ ಅನಿಸುತ್ತಿತ್ತು :
     'ಉಡುಗಿ ಸರೋಗ್ಬೇಕಾದ್ರೆ ಮದುವೆ ಮಾಡ್ಬಿಡ್ಬೇಕು.'
     ಅಣ್ಣ ಆ ಯೋಚನೆಯನ್ನು ಮಾಡುತ್ತಿರುವನೋ ಇಲ್ಲವೋ.
     ನಿಜವಾಗಿ ನೋಡಿದರೆ ಇಷ್ಟು ದಿವಸ ಹೀಗೇ ಬಿಟ್ಟಿರಬಾರದಾಗಿತ್ತು. ಈಗಿನ ಕಾಲವಾದ್ದರಿಂದ ಈ ರೀತಿ. ಹಿಂದೆ ಸಾಧ್ಯವಿತ್ತೆ ಇದು ? ಆದರೂ, ಈಗಲಾದರೂ...
     ಅಬ್ದುಲ್ಲನ ಪ್ರಕರಣಕ್ಕೊಂದು ಮುಕ್ತಾಯ ಬರೆದು, ಹೊಲಗಳಲ್ಲಿ ಸುತ್ತಾಡಿ ದಣಿದು, ರಾತ್ರೆ ಉಂಡು ಪಲ್ಲಂಗದ ಮೇಲೆ ಶಾಮೇಗೌಡರು ಒರಗಿದಾಗ, ಒಳಗಿನ ಕೆಲಸವನ್ನೆಲ್ಲ ಮುಗಿಸಿ ನಾಗಮ್ಮ ಅಣ್ಣನ ಹತ್ತಿರ ಕ್ಕೆ ಬಂದು ನೆಲದ ಮೇಲೆ ಕಾಲು ಚಾಚಿ ಕುಳಿತರು.
     ಶಾಮೆಗೌಡರು ಕೇಳಿದರು:
     "ಏನು ನಾಗು?"
     "ಯಾನಿಲ್ಲ, ಯಾನಿಲ್ಲ," ಎಂದರು, ನಾಗಮ್ಮ.
     "ನಿನ್ನ ಮನಸ್ನಾಗೆ ಏನೋ ಐತೆ."