ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ನೋವು

      " ಅಬ್ಬ! ಹೊರಟೇ ಬಿಟ್ರು. ಒಂದೆರಡು ನಿಮಿಷ ತಡವಾದ್ರೆ ಏನು ಕೊಳ್ಳೆ 

ಹೋಗುತ್ತೊ?” ಎಂದು ಭಾಗೀರಥಿ ಕಣ್ಣಗೊಂಬೆಗಳನ್ನು ಅತ್ತಿತ್ತ ಹೊರಳಿಸಿ ಮೆಲ್ಲನೆ ಕುಟುಕು ಮಾತನ್ನು ಆಡಿದಳು.

     ಗೋಪಾಲ ಸುರುಳಿ ಸುತ್ತಿದ ಹಾಸಿಗೆಯ ಮೇಲೆ ಕುಳಿತು,  "ಹೇಳೋದು ಇನ್ನೂ 

ಇದೆಯೇ ? " ಎ೦ದ.

      " ಮೊನ್ನೆ ನನಗೊಂದು ಕನಸು ಬಿತ್ತೂಂದ್ರೆ."
      " ಕನಸೆ? ಫೂಯಿ !"
      " ಬೇಡಿ. ನಿಮಗೆ ಇಷ್ಟವಿಲ್ದಿದ್ರೆ ಹೇಳೊಲ್ಲ."
      " ಕೂತಿದೀನಿ, ಕೇಳ್ಬಿಟ್ಟೇ ಹೋಗ್ತೀನಿ."
      ಭಾಗೀರಥಿ ತನ್ನ ಟಾ೦ಗಾ ಸವಾರಿಯ ಸ್ವಪ್ನವನ್ನು ಬಣ್ಣಿಸಿದಳು.
      ಗೋಪಾಲ ನಸುನಕ್ಕ.
      ಮಲಗಿದ್ದ ಶ್ರಿಪಾದನ ಕಡೆಗೊಮ್ಮೆ ಭಾಗೀರಥಿ ನೋಡಿ, ಅಳುಮೋರೆ ಮಾಡಿ,

“ನೀವು ನಗ್ತೀರಿ, ಆದರೆ ಆ ಕನಸನ್ನ ಜ್ಞಾಪಿಸಿಕೊಂಡಾಗಲೆಲ್ಲ ನನಗೆ ಭಯವಾಗುತ್ತೇಂದ್ರೆ." ಅ೦ದಳು.

      " ಅದಕ್ಕೊಂದು ಸುಲಭೋಪಾಯ ಹೇಳ್ಕೊಡ್ತೀನಿ. ಜ್ಞಾಪಿಸಿಕೊಳ್ಳದೇ ಇದ್ದರಾಯ್ತು."
      " ತನ್ನಿಂತಾನಾಗಿಯೇ ನೆನಪಾಗುತ್ತೆ. ನಾನೇನು ಬೇಕೂಂತ ನೆನಸ್ಕೋತೀನ್ಯೆ ?"
      " ಸರಿ. ಹೆಂಗಸರ ಬುದ್ಧೀನೇ ಇಷ್ಟು," ಎಂದು ಗೋಪಾಲ ಎದ್ದ.
      " ಇದಕ್ಕೇನು ಹೇಳ್ತೀರಿ ? ಕನಸ್ನಲ್ಲಿ ನಾನು ಕಂಡದ್ದು ನಿಜವಾಗಿದೆಯಲ್ಲ? ಆ 

ಹೋಟ್ಲಿನವರ ಮಗಳು ಗೋವಿಂದನ ಹೆಂಡ್ತಿಯಾಗ್ತಾಳೆ. ಲಾಯರ್ ಮಗಳು ದೊರೆಸಾನಿ. ಪದ್ಮನ ಕೈಹಿಡೀತಾಳೆ."

      " ದೊರೆಸಾನಿಯಂತೆ! ಮೋಹನರಾಯರು ಅಂದರೆ ಕಿರಸ್ತಾನರು ಅಂದ್ಕೊ೦ಡಿಯಾ? 

ಅವಳೇನು ಲಂಗ ತೊಟ್ಕೊತಾಳೆಯೆ ?"

      “ ಹೂ೦ ಕಣ್ರೀ. ಲಂಗಾನೇ. ನೋಡಿ ಬೇಕಾದ್ರೆ." 
      " ಸಾಕು, ಒಳಗ್ಹೋಗು. ಏನಾದರೂ ಕೆಲಸವಿದ್ದರೆ ಮಾಡು." 
      " ಹೋಗ್ತೀನಿ, ಹೋಗ್ತೀನಿ. ನಾನಿರೋದೇ ಅದಕ್ಕೆ ತಾನೆ?" 
      ಗೋಪಾಲ ಕೊಠಡಿಯಿಂದ ಹೊರಕ್ಕೆ ಬಂದ. ಮಲಗಿದ್ದ ತಂದೆಯ ಮುಖವನ್ನೊಮ್ಮೆ 

ನೋಡಿ, ಅಂಗಳಕ್ಕಿಳಿದು ಹೊಲಗಳತ್ತ ನಡೆದ.

      ಅಣ್ಣ ಗೋಪಾಲ ಹೋಗುತ್ತಲಿದ್ದುದು ತನ್ನ ಕೋಣೆಯ ಕಿಟಿಕಿಯ ಮೂಲಕ 

ಪದ್ಮನಾಭನಿಗೆ ಕಾಣಿಸಿತು. ಮಾಸಿದ ಶರಟು. ಅರ್ಧಕ್ಕೆ ಎತ್ತಿಕಟ್ಟಿದ ಅಡ್ಡ ಪಂಚೆ. ತುಸು ಬಾಗಿದ ಭುಜಗಳು. ಬಹಳ ಭಾರ ಎನ್ನುವಂತೆ ಭೂಮಿಯ ಕಡೆಗೆ ಕುಗ್ಗಿದ್ದ ತಲೆ. ಅನೇಕ ವರ್ಷಗಳವರೆಗೆ ತಮಗೆಲ್ಲ ತಲೆಯ ಮೇಲೆ ನೀಳಗೂದಲಿತ್ತು. ಚಂಡಿಕೆ. ನಗರಕ್ಕೆ ಅಧ್ಯಯನ ಕ್ಕೆಂದು ಹೋದಾಗ ಮೊದಲು ಅದಕ್ಕೆ ಕತ್ತರಿ ಪ್ರಯೋಗ ಮಾಡಿಸಿಕೊಂಡವನು ಗೋವಿಂದ. ಪದ್ಮನನ್ನು ಸೆಲೂನಿಗೆ ಕರೆದುಕೊಂಡು ಹೋಗಿ ಅವನೆ ಚಂಡಿಕೆಯನ್ನು ತೆಗೆಸಿದವನೂ ಗೋವಿಂದನೇ.