ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೬

ತರ್ಕಿಸಿ,  ಅದೇನೋ ತೀರ್ಮಾನಕ್ಕೆ ಆತ  ಬಂದಿದ್ದನಲ್ಲ? ಹದಿನೇಳನೆಯ ಶತಮಾನದ ಯಾವನೋ ಪಾಳೆಯಗಾರ ನಾಯಕ ಕಟ್ಟಿಸಿದ ಗುಡಿ ಇದು–ಅಂತ ಹೇಳಿದ್ದನಲ್ಲ?
  ಹೊರಗೆ ಬಿಸಿಲು. ಕಾದ ಕಲ್ಲು. ಆದರೂ ಮುಖಮಂಟಪದ ನೆಲ ತಣ್ಣಗಿತ್ತು. ತಂಪಾದ ಗಾಳಿ ಬೇರೆ ಸದ್ದಿಲ್ಲದೆ ಬೀಸುತ್ತಿತ್ತು. ಅಲ್ಲಿ ಒಂದು ಕ್ಷಣ ರಂಗಣ್ಣ ಎಲ್ಲವನ್ನೂ ಮರೆತ.  ಗುಡಿಯದು ಮುಕ್ತದ್ವಾರ, ಒಳಗೆ ಈಶ್ವರ ಲಿಂಗ, ದಿನದ ಪೂಜೆ ಮುಗಿಸಿ ಸೂರ್ಯ ನೆತ್ತಿಗೇರುವುದರೊಳಗೆ ಮರಳಿರಬೇಕು ಅರ್ಚಕ ಗಂಗಾಧರ ಶಾಸ್ತ್ರಿ, ಹಿಂದೆ ಸಂಜೆಯೂ ಅರ್ಚನೆ ಇರುತ್ತಿತ್ತಂತೆ. ಆದರೆ ಕಾಡು ಮೃಗಗಳ ಭಯದಿಂದ ದೇವರ ಸೇವೆ ಒಂದು ಬಾರಿಗೆ ಇಳಿದಿತ್ತಂತೆ. ಇದರ ವಿಷಯವಾಗಿಯೇ ಅಲ್ಲವೆ ಪದ್ಮನಾಭ ಯಾವುದೋ ವಚನವನ್ನು ಹೇಳುತ್ತಿದ್ದುದು?
   –ರಂಗಣ್ಣ ದೇವರಿಗೆ ಕೈಮುಗಿದ.
  ...ಯಾವ ವಚನ ಅದು? ತಮಾಷೆಯಾಗಿತು, ಆತ ಅದನ್ನು ಆಗಾಗ್ಗೆ ಹೇಳಿ ಹೇಳಿ, ತಾನು ಕೇಳಿ ಕೇಳಿ,ತನಗೂ ಕಂಠಪಾಠವಾಗಿತ್ತಲ್ಲ?
  ಬರ ಬರ
    -ಹ್ಞಾ !
  ಬರಬರ ಭಕ್ತಿ ಮರೆಯಾಯಿತ್ತು ಕಾಣಿರಣ್ಣಾ
    –ಮುಂದೇನು ?
   ಮೊದಲ ದಿನ ಹಣೆ ಮುಟ್ಟಿ, ಮರುದಿನ 
      ಕೈ ಮುಟ್ಟಿ, ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ.
  ಹಹ ! ವಚನ ಎಷ್ಟು ಸಮಂಜಸ! ಪದ್ಮನಾಭ ಬುದ್ಧಿವಂತ.  ಹೈಸ್ಕೂಲಿನಲ್ಲಿ ದ್ದಾಗಲಂತೂ ತನಗಿಂತಲೂ ಹೆಚ್ಚು బుద్ధి ವಂತ. ಆದರೆ ಮುಂದೆ? ಬರ ಬರ ವಿದ್ಯೆಯಲ್ಲಿ ಭಕ್ತಿ ಮರೆಯಾಯಿತ್ತು...
  ಮುಖಮಂಪದಲ್ಲಿ ಕುಳಿತು ಸುತ್ತಲೂ ಒಮ್ಮೆ ದೃಷ್ಟಿ ಬೀರಿ, ನಿಟ್ಟುಸಿರು ಬಿಟ್ಟು, ರಂಗಣ್ಣ ಯೋಚಿಸಿದ:
  ನಾವು ಭಕ್ತಿಯಿಂದ ನಡೆದುಕೊಳ್ಳುತ್ತೇವೆ.  ಆದರೆ ದೇವರ ಕೆಲಸವೇನು? ಅವನು ಮೂಕನೆ? ಕುರುಡನೆ? ಅನ್ಯಾಯದ ದಾರಿಯಲ್ಲಿ ಯಾರಾದರೂ ನಡೆಯಲು ಹೊರಟರೆ ಅವರಲ್ಲಿ ವಿವೇಕ ಮೂಡುವಂತೆ ಮಾಡಬಾರದೆ ಆತ?
  ತನಗೊ೦ದು ಹುಚ್ಚು. ಪದ್ಮನಾಭನಲ್ಲಿ ವಿವೇಕ ಮೂಡೀತೆಂದು ಭಾವಿಸುವುದು ಬರಿಯ ಭ್ರಮೆ. ಅವನು ವಿವೇಕಿಯಾದರೇನು? ಆಗದಿದ್ದರೇನು? ಒಡಹುಟ್ಟಿದವಳನ್ನು ತಾನು ಅಂಕೆಯಲ್ಲಿ ಇಟುಕೊಂಡರಾಯಿತು...... 
  ಎಷ್ಟು ಹೊತ್ತಾಯಿತೊ?  ಕೈ ಗಡಿಯಾರವನ್ನು ತಂದಿರಲಿಲ್ಲ.  ಕಟ್ಟಿಕೊಳ್ಳಲು ಸಂಕೋಚ. ಅದರ ಪೂರ್ಣ ಉಪಯೋಗ ನಗರದಲ್ಲಿ ಮಾತ್ರ. ಆದರೂ ಜೇಬಿನೊಳಗಿಟ್ಟು ಕೊಂಡು ಬರಬಹುದಾಗಿತ್ತು. ಗುಡ್ಡ ಹತ್ತಲು ನಾಲ್ವತ್ತೈದು ನಿಮಿಷ. ಒಂದು ಗಂಟೆಯೇ ಎನ್ನೋಣ. ನಾಲ್ಕು ದಾಟಿರಬಹದು.
  ಎಲ್ಲಿ ಹುಡುಕಲಿ ಇವರನ್ನು ?