ಈ ಪುಟವನ್ನು ಪರಿಶೀಲಿಸಲಾಗಿದೆ



                             ನೋವು                                   ೯                    

ತ್ತಿರಲಿಲ್ಲ.

    ಆ ಸ್ಥಳದಿಂದ ರಂಗಣ್ಣ ಸಾಕಷ್ಟು ದೂರವಿದ್ದನಾದರೂ ಅವನ  ದೃಷ್ಟಿ ಆಗಾಗ್ಗೆ ಅತ್ತ ಸರಿಯಿತು.
    ಒಮ್ಮೆ ನೋಡಿದಾಗ, ಇದ್ದಕ್ಕಿದ್ದಂತೆ ರಂಗಣ್ಣನ ಪಾದಗಳು ಬೇರುಬಿಟ್ಟುವು. 
    ಇಬ್ಬರು ಆ ಹೊಂಡದತ್ತ ನಡೆದು ಬರುತ್ತಿದ್ದರು. 
    ಹುಡುಗಿ, ಹುಡುಗ.
    ಹೆಣ್ಣು, ಗಂಡು. 
    ಸುಭದ್ರೆ, ಪದ್ಮನಾಭ.
    ರಂಗಣ್ಣನ ಮೈ ಉರಿಯಿತು.  ಎದೆಗುಂಡಿಗೆಯ  ಬಡಿತ  ತೀವ್ರಗೊಂಡಿತು.
    ಅಂತೂ ಸಿಕ್ಕಿದರು !
    ರಂಗಣ್ಣ ಸರಸರನೆ ಅತ್ತ ಸರಿಯತೊಡಗಿದ.
    ಆದರೆ ಅವರಿಬ್ಬರು ಅದೇನು ಕಂಡರೊ? ಹೊಂಡದ ಅಂಚಿನಿಂದ ಒಮ್ಮೆಲೆ ಹಳ್ಳಿಯ ಕಡೆಗೆ ತಿರುಗಿದರು; ಒಟ್ಟಿಗೆ  ಬೇಗ  ಬೇಗನೆ  ನಡೆದರು.   ರಂಗಣ್ಣನದೊಂದೇ 

ಯೋಚನೆ :

    'ನನ್ನನ್ನು ನೋಡಿಬಿಟ್ರು.  ಓಡಿಹೋಗ್ತಿದಾರೆ.'
    ರಂಗಣ್ಣ ನಡಿಗೆಯನ್ನು ತೀವ್ರಗೊಳಿಸಿದ. 
    ಸ್ವಲ್ಪ ದೂರ ಇಬ್ಬರೂ ಸಾಗಿದ ಮೇಲೆ ಪದ್ಮ, ಸುಭದ್ರೆ ಬೇರೆ ಬೇರೆಯಾದರು.
    ಕೂಗಿ ಕರೆಯಬೇಕು ಎನ್ನಿಸಿತು ರಂಗಣ್ಣನಿಗೆ.  ಗಂಟಲೊಣಗಿತು.
    'ನಾನು ಸೋತೆ'  ಎಂದುಕೊಂಡು, ಹೊಂಡದ ಅಂಚಿನಲ್ಲಿ ನಿಂತ. 
    ದೊಡ್ಡದೊಂದು ಗಿಡುಗ ಭರ್‍ರೆಂದು  ಹೊಂಡದಿಂದೆದ್ದು ಕರ್ಕಶವಾಗಿ ಕಿರಿಚಿಕೊಳ್ಳುತ್ತ ರೆಕ್ಕೆ ಬಡಿಯುತ್ತ ರಂಗಣ್ಣನ ಸಮಿಾಪದಿಂದಲೇ ಹಾರಿಹೋಯಿತು.   ಅದರ ರೆಕ್ಕೆ ತನಗೆ ತಗಲದಂತೆ ರಂಗಣ್ಣ ಸರಕ್ಕನೆ ಮೈ ಬಾಗಿಸಿ ತಪ್ಪಿಸಿಕೊಂಡು ಉದ್ಗರಿಸಿದ:
    "ಅಬ್ಬ ! "
    ಅವನ ದೃಷ್ಟಿ ಹೊಂಡದ ತಳವನ್ನು ಕಂಡಿತು.
    "ಆ!"
    ಆರ್ತನಾದದಂತಹ  ಒಂದು ಧ್ವನಿ ರಂಗಣ್ಣನ ಅರಿವಿಲ್ಲದೆ ಅವನ ಗಂಟಲಿನಿಂದ ಹೊರಟಿತು. ಮೊಣಕಾಲುಗಳು ಕಂಪಿಸಿದುವು–ತಲೆ ಗಿರ್‍ರನೆ ತಿರುಗಿದಂತಾಯಿತು.  ಮೈ   ಬೆವರೊಡೆಯಿತು.  ಹೊಂಡಕ್ಕೆ ಬೀಳುವೆನೇನೋ ಎಂದು ಅವನಿಗೆ ಭಯವಾಯಿತು. ಆತ ಪ್ರಯಾಸಪಟ್ಟು ಎರಡು ಹೆಜ್ಜೆ ಹಿಂದಕ್ಕೆ ಸರಿದ. 
    ಅಲ್ಲಿ ಏನನ್ನು ಕಂಡ ರಂಗಣ್ಣ? 
    ಅಂಗಾತ ಬಿದ್ದಿದ್ದ ಕಪ್ಪು ಬಣ್ಣದ ಒಂದು ನಿರ್ಜೀವ ದೇಹವನ್ನು.  ಮುಖ ಊದಿ ಕೊಂಡಿತ್ತು. ಕಣ್ಣು ಗುಡ್ಡೆಗಳು ಹೊರಕ್ಕೆ ಬಂದಿದ್ದುವು. 
    ಭಾಗ್ಯನಗರದ  ಆಸ್ಪತ್ರೆಯಲ್ಲಿ ಎಷ್ಟೋ ಶವಗಳನ್ನು ಮುಟ್ಟಿದ್ದ,  ಕುಯ್ದಿದ್ದ  ರಂಗಣ್ಣ ಕಣಿವೇಹಳ್ಳಿಯ ದಿಬ್ಬದಲ್ಲಿ ಭಯಭೀತನಾದ.