ಈ ಪುಟವನ್ನು ಪ್ರಕಟಿಸಲಾಗಿದೆ

 ನೋವು ೧೮೫

ಚುಚ್ಚಿ, ಹಾಗೆಯೇ ಸಾವು ಬಂದರೆ?

  ರಂಗಣ್ಣ ಯಾವತ್ತೊ ಅಂದ ನೆನಪು :
    "ಸೂಜಿಮದ್ದು ಸಾಮಾನ್ಯ ಅಂದ್ಕೊಂಡಿಯಾ? ಒಂದು ಚುಚ್ಚಿದರೆ ಸಾಕು ಪ್ರಜ್ಞೆ ತಪ್ದೋರು ಎದ್ದು ನಿಂತ್ಕೋತಾರೆ. ಇನ್ನೊಂದು ಚುಚ್ಚಿದರೆ ತಿಂಗಳುಗಟ್ಲೆ ನಿದ್ದೆ ಮಾಡ್ತಾರೆ. ಮತ್ತೊಂದು ಚುಚ್ಚಿದರೆ ಸತ್ತೇ ಹೋಗ್ತಾರೆ."

ತಾನು ಕೇಳಿದ್ದೆನಲ್ಲ ? " ಸತ್ತೋರ್ಗೆ ಸೂಜಿಮದ್ದು ಚುಚ್ಚಿ ಬದುಕ್ಸೋಕಾಯ್ತದಾ ?" " ಊಹೂ೦. ಅದೊಂದು ಮಾತ್ರ ಆಗಾಕಿಲ್ಲ.” ಒಳ್ಳೆಯದೇ. ಇಲ್ಲದೆ ಹೋದರೆ ತಾನು ಸತ್ತರೂ ರಂಗಣ್ಣ ಸೂಜಿಮದ್ದು ಚುಚ್ಚಿ ಬದುಕಿಸಬಹುದು. ಆ ಶಕ್ತಿ ಅವನಿಗಿಲ್ಲ. ಆ ವಿದ್ಯೆ ಅವನಿಗೆ ತಿಳಿಯದು. ...ನಿಮಿಷಗಳು ಕಳೆದಂತೆ ಕಾಲಿನ ಜೋಮು ಬಿಟ್ಟಿತು. ಕಾಲು ನಿದ್ದೆ ಮಾಡಿತ್ತು, ಪಾಪ. ಈಗ ಎದ್ದಿದೆ. ಇನ್ನು ನಡೆದು ಹೋಗಬಹುದು. ಎಲ್ಲಿಗೆ? ಕೊಠಡಿಯಿಂದ ಹೊರಗೆ ಪಡಸಾಲೆಗೆ ಅಲ್ಲಿಂದ ಜಗಲಿಗೆ ಮುಂದೆ ಅಂಗಳಕ್ಕೆ. ನೀರಿಗೆ ಕಲ್ಲೆಸೆಯಬಹುದು. ಯಾವುದಾದರೂ ಪಾತ್ರೆ ತಂದು ದೋಣಿ ಬಿಡಬಹುದು. ಕಾಲುವೆಗೆ ಇಳಿದರೆ, ತಾನೇ ತೇಲಿ ಹೋಗಬಹುದು ! ಸುಭದ್ರೆಯ ಮೈ ಜುಮ್ಮೆಂದಿತು. - ಅಂಥ ಕೆಲಸ ತಾನು ಯಾತಕ್ಕೋಸ್ಕರ ಮಾಡಲಿ ? ಊಹೂ೦. ತಾನದನ್ನು ಮಾಡಬಾರದು. ಅಪ್ಪಾ, ಅಪ್ಪಾ... ತಂದೆ ತನ್ನನ್ನು ಕರೆದುಕೊಂಡು ಹೋಗಬಾರದಿತ್ತೆ ? ಮೊದಲಾಗಿದ್ದರೆ ತನ್ನ ತಂದೆಗೆ ತಾನು ಬಾಲ. ಈಗಲೊ ? ತಾನು ದೊಡ್ಡವಳು...

"ಬಿರ್ನೆ ಬಾ.” 

ಮಾದನ ಮಗ ತನ್ನ ತಮ್ಮನನ್ನು ಕರೆಯುತ್ತಿದ್ದ. ಅವರ ಹಿಂದಿನಿಂದ ತಾಯಿ ನೀಲಿಯೂ ಬರುತ್ತಿದ್ದಳು. ಹೊರ ಬಾಗಿಲಲ್ಲಿ ನಿಂತಿದ್ದ ಸುಭದ್ರೆ ಬಾಯಿ ತೆರೆದಳು. "ಎಲ್ಗೆ?" ಆ ಪ್ರಶ್ನೆ ಅವಳ ಗಂಟಲಿನಿಂದಲೆ ಹೊರಬಿತ್ತು. ನೀಲಿ ಅಂದಳು :

"ಒಳೇಗಂಟ ಒಗ್ತೀವಮ್ಮಾ, ಕಾಯಿ ಇಡೀತವ್ರೆ."

ಅದು ವರ್ಷದ ಆಟ. ನದಿಯಲ್ಲಿ ಪ್ರವಾಹ ಬಂದಾಗ ಕಾಯಿಯೋ ಕೊರಡೋ ಮರವೋ ಮೋಪೋ ಗಂಟುಗದಡಿಯೊ-ಮೇಲಿನಿಂದ ಏನು ತೇಲಿ ಬಂದರೂ ಹಳ್ಳಿಯವರು ಅದನ್ನು ಹಿಡಿಯುವರು. ಅವರ ಕೈಗೆ ಸಿಗದೇ ಇದ್ದುದು ಕೆಳಗಿನ ಜನರ ಸೊತ್ತು, ಅಲ್ಲಿ ಉಳಿದುದು ಮುಂದಿನ ಹಳ್ಳಿಯವರಿಗೆ.