ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ಅಯ್ಯ, ರಂಗಣ್ಣನೂ ಅನ್ನುತ್ತಿದ್ದನಲ್ಲ: " ಅಯ್ಯನೋರಿದಾರೋ ನೋಡ್ಕೊಂಬಾ ಅಂದ್ರು ." ಆದರೆ ಮೆಡಿಕಲ್ ಕಾಲೇಜು ಸೇರಿದಮೇಲೆ—ಪದ್ಮನೊಡನೆ ವಿರಸ ಆದಮೇಲೆ–ರಂಗಣ್ಣ ಶ್ರಿನಿವಾಸಯ್ಯನವರನ್ನು ಸಾರ್ ಎಂದು ಸಂಬೋಧಿಸತೊಡಗಿದ್ದ "ಸಾರ್”–ಯಾವ ಅರ್ಥವನ್ನು ಬೇಕಾದರೂ ಹೊರಡಿಸುವ ಪದ. ದೈನ್ಯದಿಂದ: ದಯವಿಟ್ಟು ಬನ್ನಿ, ಸಾರ್. ಅಥವಾ ಸಿಟ್ಟಿನಿಂದ, ಏನೂಂತ ತಿಳ್ಕೊಂಡಿದೀರಿ ಸಾರ್?] "ಶಾಮಣ್ಣ ಮನೇಲಿಲ್ವಾ ?” " ಹೊಸಳ್ಳಿಗೆ ಹೋಗಿದಾರೆ ಸಾರ್.” " ಇವತ್ತೇ ಬರ್ತನೆ ಅಲ್ವೆ?” " ಹೂ೦.‍‍‍ ‍ಏಳು ಘ೦ಟೆಯೊಳಗೆ ಬರಬೌದು." ಶ್ರಿನಿವಾಸಯ್ಯಗೆ ಈಗ ಅರ್ಥವಾಯಿತು, ರಂಗಣ್ಣ ತನ್ನಲ್ಲಿಗೆ ಯಾಕೆ ಬಂದ ಎಂಬುದು. ಒಳ್ಳೇ ಗ್ರಹಚಾರ–ಎಂದು ಅರ್ಧ ತಮ್ಮಷ್ಟಕ್ಕೆ ಅವರು ಗೊಣಗಿದರು. " ಗೋಪೂ," ಎಂದು ಹಿರಿಯ ಮಗನನ್ನು ಕರೆದರು. ಒಂದು ವರ್ಷದ ಮಗುವನ್ನೆತ್ತಿಕೊಂಡು ಬಂದು ಪಡಸಾಲೆಯತ್ತ ಇಣಿಕಿ ನೋಡಿ, " ನದೀ ಕಡೆಗೆ ಹೋಗಿದಾರೆ,” ಎಂದಳು ಶ್ರಿನಿವಾಸಯ್ಯನವರ ಸೊಸೆ, ಭಾಗೀರಥಿ. ಸಂದರ್ಭ ಏನು ಎಂದು ತಿಳಿಯದೆ ರಂಗಣ್ಣನನ್ನು ಅವಳು ನೋಡಿ ಮುಗುಳು ನಕ್ಕಳು, " ಅಮ್ಮ ಎಲ್ಲಿ ? " ಎ೦ದು ಕೇಳಿದರು ಶ್ರಿನಿವಾಸಯ್ಯ . " ಅಡಿಗೆ ಮನೇಲಿದಾರೆ.” " ನಾನು ಕರೆದೇಂತ ಹೇಳು." ಭಾಗೀರಥಿ ಒಳಕ್ಕೆ ಹೋದಳು. ತಮ್ಮ ಬೊಕ್ಕತಲೆಯ ಮೇಲೆ ಮತ್ತೊಮ್ಮೆ ಅಂಗೈ ಆಡಿಸಿದರು ಶ್ರಿನಿವಾಸಯ್ಯ. ತಾಯಿಯನ್ನು ಕೇಳದೆ ಯಾವ ಹೆಜ್ಜೆಯನ್ನೂ ಎಂದೂ ಇಟ್ಟವರಲ್ಲ ಅವರು. ರಂಗಣ್ಣ ಬೇಸರಗೊಳ್ಳುತ್ತ ಶ್ರಿನಿವಾಸಯ್ಯನವರನ್ನು ದಿಟ್ಟಿಸಿದ. ಆರಾಮಕುರ್ಚಿಯಲ್ಲಿ ಅವರ ಶರೀರ ಕ್ಷಣದಿಂದ ಕ್ಷಣಕ್ಕೆ ಕುಗ್ಗುತ್ತ ನಡೆದಂತೆ ಕಂಡಿತು. ತನ್ನ ತಂದೆಗೂ ಇವರಿಗೂ ಎಷ್ಟು ಅಂತರ! ತಂದೆಯಾಗಿದ್ದರೆ ಇಷ್ಟು ಹೊತ್ತಿಗೆ ಮನೆ ಬಿಟ್ಟು ಹೊರಟು ಹಳ್ಳಿಯ ಪ್ರಮುಖರನ್ನು ಕರೆದು, ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು. ನಿಂತೇ ಇದ್ದ ರಂಗಣ್ಣ ಪಡಸಾಲೆಯ ಗೋಡೆಯತ್ತ ನೋಡಿದ. ಅವನಿಗೆ ಪರಿಚಿತ ವಾಗಿದ್ದ ದೇವರ ಪಠಗಳು. ಗೋಡೆಯ ಗೂಟದ ಮೇಲೆ ನೇತುಬಿದ್ದಿದ್ದ ಶರಟು, ಟೋಪಿ, ಶ್ರಿನಿವಾಸಯ್ಯನವರದು. ಪಠಗಳ ನಡುವೆ ಕುಟುಂಬದ ಭಾವಚಿತ್ರಗಳು. ಒಂದರ ಹೊರತಾಗಿ ಉಳಿದುದನ್ನೆಲ್ಲ ರಂಗಣ್ಣ ಹಿಂದೆ ನೋಡಿದವನೇ. ಆ ಹೊಸದು? ಪದ್ಮನಾಭನ ಹಿರಿ ಯಣ್ಣ ಗೋಪಾಲನ ಮದುವೆಯ ವೇಳೆ ತೆಗೆದುದಿರಬೇಕು–ಎಂದು ತೋರಿತು. ಸೋಮ ಪುರದಲ್ಲಿ ಅಲ್ಲವೆ ಮದುವೆಯಾದದ್ದು? ಅಲ್ಲಿಯೇ ತೆಗೆಸಿರಬೇಕು... ಶ್ರಿನಿವಾಸಯ್ಯನವರ ತಾಯಿ ಪಡಸಾಲೆಗೆ ಬಂದರು. ಎಪ್ಪತ್ತೈದು ದಾಟಿದ್ದರೂ ನಡು ಬಾಗದ ಜೀವ. ಕ್ಷೌರಿಕನ ಕತ್ತಿಗೆ ಬಲಿಯಾಗಲು ಸಿದ್ದವಾಗಿದ್ದ ಬಿಳಿಯ ಕುಚ್ಚುಕೂದಲ ಬೆಳೆ ತಲೆಯನ್ನು ಆವರಿಸಿ ಅವರ ಸೆರಗಿನೊಳಗಿಂದ ಇಣಿಕಿನೋಡುತ್ತಿತ್ತು. ರಂಗಣ್ಣ ಬಂದಿದ್ದಾನೆ.