ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೪೧ ನಿನ್ನೆ ನೋಡ್ದೆ. ಗುರ್ತೇ ಸಿಗದ ಹಾಗೆ ಬೆಳೆದ್ಬಿಟ್ಟಿದಾನೆ.... ಸುಭದ್ರೆ–ನಾಗಮ್ಮ ಚೆನ್ನಾಗಿದಾರಾ ?” ಎಂದು ಕೇಳಿದರು.

   ಆ ವೃದ್ಧೆಯ ಮಾತುಗಳೋ ಪುಂಗೀನಾದ. ತಲೆ ಆಡಿಸಬೇಕೆ ಗೌಡರು ? ಅದಕ್ಕೆ ಅವರು ಸಿದ್ಢರಿರಲಿಲ್ಲ.
   ಒತ್ತರಿಸಿ ಬಂದ ಉಗುಳನ್ನು ಗಂಟಲೊಳಕ್ಕೆ ಕೆಳಕ್ಕೆ, ತಳ್ಳಿ, "ಚೆಂದಾಕಿದಾರೆ," ಎಂದರು, ಜಗಲಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತ. 
   ಅಗಲವಾದ ಜಗಲಿ. ಅಲ್ಲಿ ಒಂದು ಬೆಂಚೂ ಇತ್ತು. ಪಡಸಾಲೆಯಲ್ಲಿತ್ತು, ಶಾಮಣ್ಣ ಕುಳಿತಿದ್ದುದರ ಜೋಡಿ ಕುರ್ಚಿ. ಅಲ್ಲಿ ಪಲ್ಲಂಗವಿರಲಿಲ್ಲ. ಶಾಮೇಗೌಡರ ಮನೆಯಲ್ಲಾದರೆ ನೇಗಿಲುಗಳು ತೂಗಾಡುವ ದೃಶ್ಯ ಜಗಲಿಯಲ್ಲಿ. ಇಲ್ಲಿ ಅದಿಲ್ಲ. ಕೊಟ್ಟಿಗೆಯಲ್ಲೇ ನೇಗಿಲುಗಳಿಗೆ ಸ್ಥಾನ.
   ಇದ್ದಕ್ಕಿದ್ದಂತೆ ಶಾಮಣ್ಣ ಮಿತಭಾಷಿಯಾದನಲ್ಲ ಎಂದು ಶ್ರೀನಿವಾಸಯ್ಯನವರ ತಾಯಿಗೆ ಸ್ವಲ್ಪ ಅಚ್ಚರಿ. ಹಾಗೆ ನೋಡಿದರೆ ಅವರ ಮನೆಯಲ್ಲೂ ನಿನ್ನೆಯ ಹಗಲಿನ ಹಾಗೆ ಇವತ್ತಿನ ಬೆಳಗು ಇರಲಿಲ್ಲ. ಗೋವಿಂದ ಸುಮ್ಮನೆ ಕಿರಿಚಾಡುತ್ತಿದ್ದ. ಪದ್ಮ ತುಟಿಪಿಟ್ಟೆನ್ನುತ್ತಿರಲಿಲ್ಲ. ಶ್ರೀನಿವಾಸಯ್ಯ ಇನ್ನೂ ಚೇತರಿಸಿಕೊಂಡಿರಲಿಲ್ಲ...
   ಒಳಗೆ ಶ್ರೀನಿವಾಸಯ್ಯನವರ ಧ್ವನಿ ಕೇಳಿಸಿ ನಿಂತುಹೋಯಿತು.
   ಅವರ ತಾಯಿ ಕರೆದು ಹೇಳಿದರು:
   "ಶೀನಾ, ಶಾಮಣ್ಣ ಬಂದಿದಾನೇ." 
   ಅಷ್ಟು ಹೇಳಿ, ಕರೆಯ ಅಲೆಗಳನ್ನು ತಾವೂ ಹಿಂಬಾಲಿಸಿ, ಆಕೆ ಒಳ ಹೋದರು. 
   ಮುಂದೆ ಎರಡು ನಿಮಿಷಗಳಲ್ಲಿ, ಬೋಳು ತಲೆಯನ್ನೂ ಅದಕ್ಕೆ ಮೂರು ಕಡೆಗಳಿಂದ ಅಂಚಾಗಿ ನಿಂತಿದ್ದ ಬಿಳಿಗೂದಲನ್ನೂ ಅಂಗವಸ್ತ್ರದಿಂದ ತಿಕ್ಕುತ್ತ ಶ್ರೀನಿವಾಸಯ್ಯ ಬಂದರು. ನಡುವಿಗೆ ಅವರು ಸುತ್ತಿಕೊಂಡಿದ್ದುದು ತುಸು ದೊಡ್ಡದಾದ ಇನ್ನೊಂದು ಅಂಗವಸ್ತ್ರವನ್ನೇ. 
   ಜಗಲಿಯಲ್ಲಿ ಖಾಲಿ ಕುರ್ಚಿ ಇರದುದನ್ನು ಗಮನಿಸಿ, ಪಡಸಾಲೆಯಲ್ಲಿದ್ದುದನ್ನು ಎತ್ತಿ ತಂದಿರಿಸಿ, ಕುಳಿತು, ತಲೆಯ ನೀರೊರೆಸುವ ಕೆಲಸವನ್ನು ಶ್ರೀನಿವಾಸಯ್ಯ ಮುಂದುವರಿಸಿದರು.
   ಇಂಥದೇ ಸನ್ನಿವೇಶದಲ್ಲಿ ಹಿಂದೆಯೂ ಅವರನ್ನು ಗೌಡರು ಕಂಡುದಿತ್ತು. ಆಗ ಒಂದೆರಡು ಸಲ ಗೆಳೆಯನನ್ನು ಕೀಟಲೆ ಮಾಡಿದ್ದರು.
   “ಈ ಪಾಟಿ ತಿಕ್ಕಿದ್ರೆ ಇರೋ ಮೂರು ಕೂದಲೂ ಒಂಟೋಗ್ತವೆ ರಾಯರೇ."
   ಸಲಿಗೆ ಎಂದಾಗ ಅಯ್ಯನವರು ರಾಯರಾಗುತ್ತಿದ್ದರು. 
   ಈ ದಿನ ಗೌಡರು ಆ ಮಾತನ್ನು ಆಡಲಿಲ್ಲ. ಅವರ ದೃಷ್ಟಿ ಶ್ರೀನಿವಾಸಯ್ಯವರ ಕೂದಲು ಮುಚ್ಚಿದ್ದ ವಕ್ಷಸ್ಥಲದ ಮೇಲೂ ಒದ್ದೆ ಜನಿವಾರದ [ಅದಕ್ಕೆ ಬಿಗಿದಿದ್ದ ಬೀಗದ ಕೈಯ ] ಮೇಲೂ ಅಲೆಯಿತು.
   ಇಬ್ಬರೂ ಸುಮ್ಮನಿದ್ದರು. ಮೌನವಾಗಿ ಕುಳಿತಿರುವಷ್ಟು ಹಳೆಯದಾಗಿತ್ತು ಅವರ ಸ್ನೇಹ
   ತಲೆಯ ಮೇಲೆ ನೀರಿನ ತೇವ ಉಳಿದಿಲ್ಲವೆಂಬುದು ಸ್ಪಷ್ಟವಾದ ಬಳಿಕ ಶ್ರೀನಿವಾಸಯ್ಯ