ಬಹುದು. ಶೀಘ್ರದಲ್ಲಿ ದೇವರು ನಿನ್ನ ಪಾಪಕೃತ್ಯಗಳಿಗೆ ತಕ್ಕ ಪ್ರತೀಕಾರವನ್ನು ಮಾಡುವನು. ನಾನು ಕಳ್ಳನೆ? ದುರಾತ್ಮನೆ! ಇಲ್ಲಿಂದ ಆಚೆಗೆ ತೆರಳು. ಇಲ್ಲದಿದ್ದರೆ ಪೋಲೀಸಿನವರಿಗೆ ನಿನ್ನನ್ನು ಕೊಡುವೆನು. ನೀನು ಕಾಮಮೋಹಿನಿಯ ಪೋಷಕನಲ್ಲ, ಅವಳ ಭಾಗದ ಮೃತ್ಯುವೇ ನೀನು.
ಶಂಬರ-ಅವಳಲ್ಲಿದ್ದಾಳೆ? - ತಿಳಿಸು. ಹಾಗಿಲ್ಲದಿದ್ದರೆ, ನಿನ್ನ ಭಾಗಕ್ಕೂ ನಾನು ಮೃತ್ಯುವಾಗುವೆನು.
ಸತ್ಯಶರ್ಮ- ನನ್ನ ಪ್ರಾಣವಿರುವವರೆಗೂ ಅವಳು ನಿನಗೆ ಸಿಕ್ಕಳು.
ಶಂಬರ-ಹಾಗಾದರೆ, ನಿನ್ನ ಪ್ರಾಣವು ಈಗಲೇ ಹೋಗುವುದು. ಅದು ಹಾಗಿರಲಿ; ನಿನಗೆ ಪ್ರಾಣದಾನವನ್ನು ಮಾಡುವುದಲ್ಲದೆ, ತುಂಬ ಉಪಕಾರವನ್ನೂ ಮಾಡುವೆನು. ಕಾಮಮೋಹಿನಿಯು ಪರಸ್ತ್ರೀಯೆಂದೆಯಲ್ಲಾ! ಅದು ಹೇಗೆ?
ಸತ್ಯಶರ್ಮ-ಅವಳನ್ನು ಪರಂತಪನು ವಿವಾಹವಾಡಿಕೊಂಡಿರುವನು.
ಶಂಬರ- ಈ ವಿವಾಹವು ಎಲ್ಲಾಯಿತು? ಯಾರು ಮಾಡಿಸಿದವರು? ಯಾವಾಗ?
ಸತ್ಯಶರ್ಮ-ಕಳೆದ ತಿಂಗಳು, ನಾನೇ ಈ ಮನೆಯಲ್ಲೇ ಮಾಡಿಸಿದೆನು.
ಶಂಬರ- ಎಲಾ ದುಷ್ಟನೆ! ಈ ದುಷ್ಕೃತ್ಯಕ್ಕೆ ತಕ್ಕ ಫಲವನ್ನು ಹೊಂದುವೆ.
ಸತ್ಯಶರ್ಮನನ್ನೂ ಅವನ ಹೆಂಡತಿಯನ್ನೂ ಹಿಡಿಸಿ, ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ ಕೆಡವಿ, ಕಾಮಮೋಹಿನಿಯನ್ನು ಹುಡುಕಿ ಎತ್ತಿಕೊಂಡು ಗಾಡಿಯಲ್ಲಿ ಹಾಕಿಸಿ, ಸತ್ಯಶರ್ಮನ ಮನೆಗೆ ಅನೇಕ ಭಾಗಗಳಲ್ಲಿ ಬೆಂಕಿಯನ್ನು ಹಾಕಿಸಿ, ಅದು ಹೊತ್ತಿಕೊಂಡು ಉರಿಯುವುದಕ್ಕೆ ಉಪಕ್ರಮವಾದ ಮೇಲೆ, ಶಂಬರನು ರತ್ನಾಕರದ ಕಡೆಗೆ ಹೊರಟುಹೋದನು. ಮಾರನೆಯ ದಿನ ಬೆಳಗಾಗುವುದರೊಳಗಾಗಿ, ಮನೆಯು ಬೆಂದು ನೆಲ ಸಮವಾಗಿತ್ತು. ಸರಕಾರದವರೂ ಪಂಚಾಯಿತರೂ ಸೇರಿ ಪರೀಕ್ಷಿಸಿ, ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ಸತ್ಯ ಶರ್ಮಾದಿಗಳು ಸತ್ತು ಹೋದರೆಂದು ಮಹಜರ್ ಮಾಡಿದರು!