ಯೌವನಸ್ಥ- ಪರಂತವನು ಸ್ವರ್ಗಸ್ಥನಾಗಿರಬಹುದು.
ಮಂಜೀರಕ-ಈ ಮಾತನ್ನು ನಾನು ನಂಬುವುದಿಲ್ಲ. ಚಿಂತೆಯಿಲ್ಲ, ನಿನ್ನ ಹೆಸರೇನು?
ಯೌವನಸ್ಥ -ಕಲಾವತಿ.
ಮಂಜೀರಕ- ಓಹೋ! ಪುರುಷವೇಷವನ್ನು ಧರಿಸಿರತಕ್ಕ ಹುಡುಗಿಯೋ- ನೀನು?
ಕಲಾವತಿ - ಅಹುದು. ಈ ವಿಷಯವನ್ನು ನೀನು ಯಾರಿಗೂ ತಿಳಿಸಕೂಡದು. ಮಹಾನೀಚನಾದ ಶತ್ರುವನ್ನು ನಾನು ಯಮಾಲಯಕ್ಕೆ ಕಳುಹಿಸುವುದಕ್ಕೋಸ್ಕರ ಈ ವೇಷವನ್ನು ಧರಿಸಿಕೊಂಡು ಬಂದಿರುವೆನು. ಈ ಶತ್ರುವನ್ನು ಈ ಭೋಜನಾಲಯದಲ್ಲಿ ನೋಡಿದೆನು. ಅವನಿಗೆ ನನ್ನ ಗುರುತು ಸಿಕ್ಕಲಿಲ್ಲ.
ಮಂಜೀರಕ - ಈ ಶತ್ರು ಯಾರು?
ಯೌವನಸ್ಥ- ಮಹಾನುಭಾವನಾದ ಪರಂತಪನ ಮರಣಕ್ಕೆ ಯಾವನು ಕಾರಣಭೂತನಾಗಿರಬಹುದೋ, ಆ ದುರಾತ್ಮನಾದ ಶಂಬರನೇ ನನಗೂ ಶತ್ರುವಾಗಿರುವನು. ನನ್ನ ಸಹೋದರಿಯಾದ ಕಾಮಮೋಹಿನಿಯನ್ನು ವಿವಾಹ ಮಾಡಿಕೊಳ್ಳಬೇಕೆಂದು, ಪರಂತಪನೂ ಇವನೂ ಇಬ್ಬರೂ ಅನುರಕ್ತರಾದರು. ಕಾಮಮೋಹಿನಿಯು ಈ ದುರಾತ್ಮನನ್ನು ತಿರಸ್ಕರಿಸಿ ಪರಂತಪನನ್ನು ವರಿಸಿದಳು. ಈ ದ್ವೇಷದಿಂದ ಶಂಬರನು ಪರಂತಪನನ್ನು ಕೊಂದಿರಬಹುದು; ಅಥವಾ ರತ್ನಾಕರದ ಕಾರಾಗೃಹದಲ್ಲಿಟ್ಟು ಕೊಂಡಿರಬಹುದು. ಕಾಮಮೋಹಿನಿಯನ್ನು ಕೂಡ ಈ ದುರಾತ್ಮನು ಬಲಾತ್ಕಾರದಿಂದ ಅಪಹರಿಸಿಕೊಂಡು ಹೋಗಿರುವಂತೆ ತೋರುತ್ತದೆ. ಕಳೆದವಾರ ಎರಡು ಮೂರು ವೇಳೆ ಪರಂತಪನು ರತ್ನಾಕರಕ್ಕೆ ಹೋಗಿದ್ದನು. ಈಚೆಗೆ ಪರಂತಪನ ಪೂರ್ವಾಪರಗಳನ್ನು ವಿಚಾರಿಸುವುದಕ್ಕೋಸ್ಕರ ರತ್ನಾಕರಕ್ಕೆ ದೂತರನ್ನು ಕಳುಹಿಸಿದ್ದೆನು. ಶಂಬರನು ಯಾರಿಗೂ ಅವಕಾಶವಿಲ್ಲದಂತೆ ಎಲ್ಲಾ ಕಡೆಗಳಲ್ಲಿಯೂ ಪಹರೆಯನ್ನಿಟ್ಟಿರುವನು. ರತ್ನಾಕರವು ಈಗ ದುಷ್ಪ್ರವೇಶವಾಗಿರುವುದು.
ಮಂಜೀರಕ- ಪರಂತಪನೂ ಕಾಮಮೋಹಿನಿಯೂ ರತ್ನಾಕರದಲ್ಲಿರುವುದು ನಿಜವಾದ ಪಕ್ಷದಲ್ಲಿ, ಯಮನೇ ಬಂದು ಅಲ್ಲಿ ಕಾವಲಾಗಿದ್ದಾಗ್ಗೂ