ಪರಂತಪ-(ಆಶ್ಚರ್ಯದೊಡನೆ) ಅಹಹ ! ಹಾಗಾದರೆ, ನಿನ್ನ ವಿಶ್ವಾಸಕ್ಕೆ ಸಂಪೂರ್ಣವಾದ ಕಾರಣವುಂಟು. ನಾನು ನಿನ್ನ ಮಿತ್ರನಾದ ವೈರಿಸಿಂಹನ ಮಗನು. ಈಗ ನಿನ್ನಲ್ಲಿ ನನಗೆ ಪಿತೃಭಕ್ತಿ ನೆಲೆಗೊಂಡಿರುವುದು.
ಮಾಧವ- (ದುಃಖದಿಂದ ಕಣ್ಣೀರು ಸುರಿಸಿ) ಅಯ್ಯಾ ! ಪರಂತಪ ! ವೈರಿನಿಂಹನ ಅಕಾಲಮರಣದಿಂದುಂಟಾದ ಶೋಕಾಗ್ನಿಯು, ನನ್ನನ್ನು ಬಹಳವಾಗಿ ಬಾಧಿಸುತ್ತಿರುವುದು. ಆದರೆ, ನಿನ್ನನ್ನು ನೋಡಿದಕೂಡಲೆ, ನನಗೆ ನಷ್ಟನಾಗಿದ್ದ ಮಿತ್ರನು ಈಗ ಪುನಃ ಲಭಿಸಿದಷ್ಟು ಆನಂದವುಕ್ಕುತಿರುವುದು. ನೀನು ಆತನ ಮಗನೇದು ನನಗೆ ತಿಳಿಯದಿದ್ದ ಕಾರಣ, ನಿನ್ನೊಡನೆ ಈ ರೀತಿಯಾಗಿ ಮಾತನಾಡಿದೆನು. ನನ್ನ ಪ್ರಿಯಮಿತ್ರನಾದ ವೈರಿನಿಂಹನು, ತನ್ನ ಬುದ್ಧಿ ಬಲದಿಂದಲೂ, ದೇಹಶಕ್ತಿಯಿಂದಲೂ ಅತ್ಯದ್ಭುತವಾದ ಕಾರ್ಯಗಳನ್ನು ಮಾಡಿರುವನು. ನಿನ್ನನ್ನು ನೋಡಿದರೆ, ನೀನು ಆತನನ್ನು ಮರೆಯಿಸುವಂತೆ ತೋರುವೆ. (ಅವನನ್ನು ಗಾಢಾಲಿಂಗನ ಮಾಡಿಕೊಂಡು, ತನ್ನ ಬಿಡಾರಕ್ಕೆ ಕರೆದುಕೊಂಡು ಹೋಗಿ, ಅವನಿಗೆ ಅತ್ಯಾದರದಿಂದ ಭೋಜನಾದಿಗಳನ್ನು ಮಾಡಿಸಿ ಸತ್ಕರಿಸಿದನು.)
ಪರಂತಪ-ನಿನ್ನ ಪ್ರೀತಿಪೂರ್ವಕವಾದ ಆತಿಥ್ಯಕ್ಕೆ ಸಂತುಷ್ಟನಾದೆನು. ಆದರೆ, ನಾನು ಅತ್ಯವಶ್ಯವಾದ ಯಾವುದೋ ಒಂದು ಕಾರ್ಯಾಂತರದಿಂದ ಇಲ್ಲಿಗೆ ಬಂದಿರುವೆನು. ಅದಕ್ಕೆ ಕಾಲಾತಿಕ್ರಮವಾಗುವುದರಿಂದ, ನಿನ್ನ ಅಪ್ಪಣೆಯಾದರೆ ಹೋಗುವೆನು. ಆ ಕಾರ್ಯವನ್ನು ನಿರ್ವಹಿಸಿಕೊಂಡು ಹಿಂದಿರುಗಿ ಬರುವಾಗ, ಪುನಃ ನಿನ್ನ ದರ್ಶನವನ್ನು ತೆಗೆದುಕೊಳ್ಳುವೆನು.
ಮಾಧವ-ನಾನು ನಿನಗೆ ಅನ್ಯನೆಂದೆಣಿಸಬೇಡ. ನಿನ್ನ ಕಾರ್ಯವಾವುದು ? ಎಂತಹ ರಹಸ್ಯವಾಗಿದ್ದರೂ ನನ್ನೊಡನೆ ಹೇಳಬಹುದು. ಅದರಲ್ಲಿ ನನ್ನಿಂದಾಗತಕ್ಕುದೇನಾದರೂ ಇದ್ದರೆ, ನಿನಗೆ ಸಹಾಯನಾಗಿ ಅದನ್ನು ಮಾಡಿಕೊಡುವುದರಲ್ಲಿ ನಾನು ಸಿದ್ಧನಾಗಿರುವೆನು.
ಪರಂತಪ-ಅಯ್ಯಾ ! ಮಾಧವ ! ಈಗ ನಾನು ಮಾಡಬೇಕಾದ ಕಾರ್ಯವು ಅತಿರಹಸ್ಯವಾದುದು; ಅದನ್ನು ಪ್ರಕಟಿಸುವುದು, ಕಾರ್ಯಹಾನಿಗೆ ಹೇತುವಾಗುವುದೇ ಹೊರತು, ಮತ್ತೆ ಬೇರೆ ಇಲ್ಲ. ಆದರೂ, ನಿನಗೆ ನನ್ನಲ್ಲಿರುವ ವಿಶ್ವಾಸವನ್ನು ನೋಡಿದರೆ, ನಿನಗೆ ತಿಳಿಯಿಸುವುದರಿಂದ ಯಾವ