ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧



ಬಾಧೆಯೂ ಇಲ್ಲವೆಂದು ತೋರುವುದು. ಹೇಳುತ್ತೇನೆ...ಕೇಳು. ಈ ಪಟ್ಟಣದಲ್ಲಿ, ರಾಜಶಾಸನಗಳನ್ನುಲ್ಲಂಘಿಸಿ ಉಚ್ಛೃಂಖಲಪ್ರವರ್ತನೆಯಿಂದ ಸಜ್ಜನರಿಗೆ ಕಂಟಕಭೂತರಾದವರು ಬಹುಮಂದಿಯಿರುವರೆಂದು, ರಾಜ್ಯಾಧಿಕಾರಿಗಳಿಗೆ ತಿಳಿಯಬಂದಿರುವುದು. ಇವನ ನಿಗ್ರಹಾರ್ಥವಾಗಿ, ಈ ದೇಶಾಧಿಪತಿಯು ನನಗೆ ಸರ್ವಾಧಿಕಾರವನ್ನು ಕೊಟ್ಟು ಇಲ್ಲಿಗೆ ಕಳುಹಿಸಿರುವನು. ಇದಲ್ಲದೆ, ಈ ಪಟ್ಟಣದಲ್ಲಿರುವ ದ್ಯೂತಶಾಲಾಧಿಕಾರಿಯೊಬ್ಬನು, ತನ್ನ ಕಡೆಯವರಾದ ಕೆಲವು ಜನಗಳೊಡನೆ ಅತಿ ಕ್ರೂರವಾದ ದುಷ್ಕೃತ್ಯಗಳನ್ನು ನಡೆಯಿಸುತ್ತಿರುವುದಾಗಿ ತಿಳಿಯಬಂದಿರುವುದು, ಅವನನ್ನು ಮೊದಲು ನಿಗ್ರಹಿಸಬೇಕಾಗಿರುವುದು.

ಮಾಧವ- ಭಾಪು! ಭಾಪು! ಪ್ರಿಯಮಿತ್ರನೆ ! ನಿನ್ನ ಕಾರ್ಯವು ನನ್ನ ಮನಸ್ಸಂಕಲ್ಪಕ್ಕೆ ಅನುಕೂಲವಾಯಿತು. ಈ ಕಾರ್ಯವನ್ನು ನೀನು ನಡೆಯಿಸಿದರೆ, ದುಷ್ಟನಿಗ್ರಹಾರ್ಥವಾಗಿ ನಿನ್ನ ತಂದೆ ಅನುಭವಿಸುತ್ತಿದ್ದ ಶ್ರಮ ಸಫಲವಾಗುವುದು. ಆದರೆ, ಆ ದ್ಯೂತಶಾಲಾಧಿಕಾರಿ ಬಹುದುಷ್ಟನು; ಅನೇಕ ಜನಗಳ ಸ್ವತ್ತನ್ನು ಅಪಹರಿಸಿರುವನು; ಇದಕ್ಕಾಗಿ ಅನೇಕ ಪಾಣಿಹತ್ಯೆಗಳನ್ನೂ ಮಾಡಿರುವನು. ಇವನ ದುಷ್ಕೃತ್ಯಗಳನ್ನು ಉದ್ಘಾಟಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿರುವೆನು. ಈ ನೀಚನು ನನ್ನ ಧನದಲ್ಲಿಯೂ ಕೂಡ ಅನೇಕ ಭಾಗವನ್ನು ಜೂಜಿನ ನೆಪದಿಂದ ವಂಚಿಸಿ ಗೆದ್ದುಕೊಂಡಿರುವನು. ಆದುದರಿಂದ, ಈ ದಿವಸರಾತ್ರಿ ನಾನು ಹಿಂದೆ ಕಳೆದುಕೊಂಡುದುದನ್ನೆಲ್ಲ ಗೆದ್ದು ಅವನ ಹೆಮ್ಮೆಯನ್ನು ಮುರಿಯಬೇಕೆಂದು ಶಪಥಮಾಡಿಕೊಂಡಿರುತ್ತೇನೆ.

ಪರಂತಪ - ಅಯ್ಯಾ ! ಮಾಧವನೇ ! ನೀನು ಶಪಥಮಾಡಿರುವಂತೆ ಅವನನ್ನು ಗೆಲ್ಲತಕ್ಕ ಉಪಾಯವೇನಾದರೂ ಉಂಟೋ?

ಮಾಧವ- ಈ ದಿವಸರಾತ್ರಿ ಆ ನೀಚನೊಡನೆ ನನ್ನ ಸರ್ವಸ್ವವನ್ನೂ ಪಣಮಾಡಿ ದ್ಯೂತವಾಡುತ್ತೇನೆ. ಬಹುಶಃ ಜಯಲಕ್ಷ್ಮಿಯು ನನಗೆ ಪ್ರಸನ್ನಳಾಗದಿರಲಾರಳೆಂದು ಭಾವಿಸಿದ್ದೇನೆ.

ಪರಂತಪ-ಅಯ್ಯಾ ! ಮಾಧವ! ನೀನು ಹೀಗೆ ಆಲೋಚಿಸಬೇಡ. ಸರ್ವಥಾ ಅದೃಷ್ಟವನ್ನು ಪರೀಕ್ಷಿಸಬಾರದು. ಲಕ್ಷ್ಮಿಯು ಬಹು ಚಂಚಲೆ.