ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಪರಂತಪ ವಿಜಯ

ಕರೆಯುವುದಕ್ಕೆ ಬಂದಿದ್ದ ಆ ಪರಂತಪನೂ ಸೇರಿ ಇವನನ್ನು ಇಲ್ಲಿಗೆ ಎತ್ತಿ ಕೊಂಡು ಬಂದು ಉಪಚರಿಸುತ್ತಿದ್ದಾರೆ. ಈ ವೈದ್ಯನು, ತನ್ನ ಸರ್ವ ಪ್ರಯತ್ನದಿಂದಲೂ ಚಿಕಿತ್ಸೆ ಮಾಡಿ, ಇದುವರೆಗೂ ಇವನ ಪ್ರಾಣಕ್ಕೆ ಅಪಾಯ ಸಂಭವಿಸದಂತೆ ಇಟ್ಟುಕೊಂಡಿದ್ದನು. ಈತನಿಗೆ ಉತ್ಕ್ರಮಣ ಕಾಲವು ಸನ್ನಿಹಿತವಾಗುತ್ತಲಿದೆ. ಇವನು ೧೨ ಕೋಟಿ ವರಹಗಳು ಬಾಳ ತಕ್ಕ ರತ್ನಗಳನ್ನು ಒಂದು ಧರ್ಮಾರ್ಥವಾದ ವೈದ್ಯಶಾಲೆಯನ್ನು ಸ್ಥಾಪಿಸುವು ದಕ್ಕಾಗಿ ಕೊಟ್ಟಿರುತ್ತಾನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವುದಕ್ಕೋಸ್ಕರ, ಈ ಹಣವನ್ನು ರಾಜ್ಯಾಧಿಕಾರಿಗಳಲ್ಲಿ ಒಪ್ಪಿಸಿ-ಅದನ್ನು ಲೋಪವಿಲ್ಲದೆ ನಡೆಯಿಸತಕ್ಕ ಪ್ರಯತ್ನವನ್ನು ಮಾಡಬೇಕೆಂದು, ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡಿರುವನು. ಈ ವಿಷಯದಲ್ಲಿ ಸರಿಯಾದ ಕಾಗದಗಳನ್ನು ಬರೆಯಿಸಿ ತನಗೆ ನಂಬುಗೆಯುಂಟಾಗುವುದಕ್ಕಾಗಿಯೇ ಇವನು ಇದುವರೆಗೂ ಪ್ರಾಣಧಾರಣೆಯನ್ನು ಮಾಡಿಕೊಂಡಿರುವಂತೆ ತೋರುತ್ತದೆ. ಇದಕ್ಕೆ ನಿನೂ ಸಹಾಯನಾಗಿರಬೇಕೆಂದು, ನಿನ್ನನ್ನೂ ಇಲ್ಲಿಗೆ ಕರೆಯಸಿದೆನು.

  ಕೋಶಾಧ್ಯಕ್ಷ-ಇಂಥ ಧರ್ಮಗಳನ್ನು ಮಾಡುವುದಕ್ಕಂತೂ ನಮಗೆ ಶಕ್ತಿಯಿಲ್ಲ. ಅದು ಹಾಗಿರಲಿ; ಇಂಥ ಧರ್ಮಕಾರ್ಯಗಳಲ್ಲಿ ಸಹಾಯ ಮಾಡತಕ್ಕ ಸಂದರ್ಭ ದೊರಕಿದುದೇ ನಮ್ಮ ಪುಣ್ಯಪ್ರಭಾವವನ್ನು ತೋರಿಸುವುದು. ಹೀಗಿರುವಲ್ಲಿ, ಈ ಕಾರ್ಯದಲ್ಲಿ ಸಹಾಯಮಾಡುವುದಕ್ಕೆ ಯಾರು ತಾನೆ ಹಿಂಜರಿಯುವರು? ನನ್ನಿಂದ ಆಗಬೇಕಾದ ಕಾರವೇನಿದ್ದರೂ ಅದನ್ನು ಅವಶ್ಯವಾಗಿ ಮಾಡುತ್ತೇನೆ.
  ಅಷ್ಟರಲ್ಲಿಯೇ, ಯಾಮಿಕಾಧಿಕಾರಿಯೂ ದಂಡಾಧ್ಯಕ್ಷನೂ ಪರಂತಪನೊಡನೆ ಅಲ್ಲಿಗೆ ಬಂದರು. ಅವರು ಈ ವಿಷಯಗಳನ್ನೆಲ್ಲ ಆಮೂಲಾಗ್ರವಾಗಿ ಕೇಳಿ ವಿಸ್ಮಿತರಾಗಿ, ಅವನ ಔದಾರ್ಯಕ್ಕೆ ಮೆಚ್ಚಿ, ತಮ್ಮ ಕೈಲಾದ ಸಹಾಯವನ್ನು ತಾವೂ ಮಾಡುವುದಾಗಿ ಒಪ್ಪಿದರು. ಕೂಡಲೆ ನ್ಯಾಯಾಧಿಪತಿಯು ಈ ಧರ್ಮಕ್ಕೆ ಉಪಯೋಗಿಸತಕ್ಕ ದ್ರವ್ಯಗಳಿಗಾಗಿ ಒಂದು ಉಯಿಲನ್ನು ಬರೆಯಿಸಿ, ಅದಕ್ಕೆ ಮಾಧವನ ಅನುಮತಿ ಚಿಹ್ನೆಯನ್ನು ಹಾಕಿಸಿ, ಅವನು ಕೊಟ್ಟಿದ್ದ ರತ್ನಗಳನ್ನು ಕೋಶಾಧ್ಯಕ್ಷನ ವಶಕ್ಕೆ ಒಪ್ಪಿಸಿದನು.