ಲ್ಲಿರುವ ರಹಸ್ಯಗಳನ್ನೆ ಉದ್ಘಾಟಿಸುವಂತೆ ಪ್ರೇರಿಸುವುದು. ನಿಜಸ್ಥಿತಿಯನ್ನು ಹೇಳುವೆನು. ನನಗೂ ಕಾಮಮೋಹಿನಿಗೂ ವಿವಾಹವು ನೆರವೇರಿ ಹೋಯಿತು. ನಾವಿಬ್ಬರೂ ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಮಾಡುವುದರಲ್ಲಿ ಸಿದ್ಧರಾಗಿರುತ್ತೇವೆ. ಆದರೆ, ನಿನಗೆ ಯಾವ ಕ್ಲೇಶಗಳು ಬಂದಾಗ್ಗೂ ಧೈರ್ಯಗೆಡದಿರು. ಹೋಗು; ಪುನಃ ನಾನು ನಿನ್ನನ್ನು ಕಾಣುವೆನು. (ಎಂದು ಹೇಳಿ, ಪರಂತಪನು ಹೊರಟುಹೋದನು.)
ಮಾವನ ಮರಣವಾರ್ತೆಯನ್ನು ಕೇಳಿ ಇವಳು ಸಂಕಟ ಪಡುವಳೆಂದು ತಿಳಿದು, ಅವಳಿಗೆ ಧೈರ್ಯವನ್ನು ಹೇಳಿ, ಪರಂತಪನು ಭೋಜನ ಶಾಲೆಗೆ ಹೋದನು. ಅಷ್ಟರಲ್ಲಿಯೇ ಅಲ್ಲಿಗೆ ಅರ್ಥಪರನೂ ಬಂದನು.
ಪರಂತಪ- ಓಹೋ! ನಿನ್ನನ್ನೇ ಇದಿರು ನೋಡುತ್ತಿದ್ದೆನು. ಯಾವಾಗ ಬಂದೆ?
ಅರ್ಥಪರ- ಈಗ ತಾನೆ ಎಂದೆನು. ಅದೇನು ಅಷ್ಟು ಆತುರದಿಂದ ನನ್ನನ್ನು ನಿರೀಕ್ಷಿಸಬೇಕಾದ ಅವಶ್ಯಕ?
ಪರಂತಪ- ಅ೦ತಹುದೇನೂ ಇಲ್ಲ. ನೀನು ಬಹಳ ದಿವಸ ಇಲ್ಲಿ ನಿಲ್ಲಬೇಕಾದ ಅವಶ್ಯಕವೂ ಇಲ್ಲ. ಮಾಧವನು ಬರೆದಿಟ್ಟಿರುವ ಉಯಿಲನ್ನು ರಿಜಿಸ್ಟರು ಮಾಡಿಸಿಕೊಟ್ಟು ನೀನು ಹೊರಟುಹೋಗಬಹುದು.
ಅರ್ಥಪರ- ಈ ಪಟ್ಟಣದ ರಾಮಣೀಯಕವನ್ನು ನೋಡಿದರೆ, ಇದನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವುದಿಲ್ಲ. ನೀನು ಕೊಡತಕ್ಕ ದ್ರವ್ಯದಿಂದ ಜೀವನ ಮಾಡಿಕೊಂಡು ಇಲ್ಲಿಯೇ ಇರಬೇಕೆಂದು ನಿಷ್ಕರ್ಷೆ ಮಾಡಿಕೊಂಡಿದ್ದೇನೆ.
ಪರಂತಪ- ಬಹಳ ಸಂತೋಷ. ಈ ವುಯಿಲನ್ನು ರಿಜಿಸ್ಟರ್ ಮಾಡಿಸಿ ಕೊಂಡು ಬರೋಣ; ಬಾ, ಆ ಕೆಲಸವನ್ನು ಮುಗಿಯಿಸಿಕೊಂಡು ನಾನು ರತ್ನಾಕರಕ್ಕೆ ಹೋಗಿ ಅದನ್ನು ನೋಡಿಕೊಂಡು ಬರಬೇಕೆಂದಿದ್ದೇನೆ.
ಅರ್ಥಪರ - ನೀನೊಬ್ಬನೇ ಹೊರಡುವೆಯಾ ?
ಪರಂತಪ- ನೀನೂ ಬರುವುದಾದರೆ ನನಗೆ ಬಹಳ ಸಂತೋಷ.
ಅರ್ಥಪರ- ಅದರ ವಿಷಯವಾಗಿ ನಾನು ಚಿತ್ರ ವಿಚಿತ್ರವಾದ ಕಥೆಗಳನ್ನು ಕೇಳಿರುವೆನು. ಅದನ್ನು ಪ್ರತ್ಯಕ್ಷವಾಗಿ ನೋಡಿಕೊಂಡು ಬರಬೇಕೆಂಬ ಕುತೂಹಲವು ನನಗೆ ಬಹಳವಾಗಿರುತ್ತದೆ.