ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಪರಂತಪ ವಿಜಯ

ಪರಂತಪ-ಸರಿ, ಹಾಗಾದರೆ ನಾವಿಬ್ಬರೂ ಹೋಗೋಣ.
  ಹೀಗೆಂದು ನಿಷ್ಕರ್ಷಿಸಿಕೊಂಡು, ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ರಿಜಿಸ್ಟ್ರಾರ್ ಆಫೀಸಿಗೆ ಹೊರಟರು. ಇವರು ಹೋಗಿ ನೋಡಿದಾಗ, ಅಲ್ಲಿನ ನೌಕರರು ಯಾರೂ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಅರ್ಥಪರನ ಹೇಳಿಕೆಯಮೇಲೆ, ಆ ವುಯಿಲನ್ನು ಅಲ್ಲಿನ ಅಧಿಕಾರಿಯ ವಶಕ್ಕೆ ಕೊಟ್ಟು, ಅದರ ಪೂರ್ವಾಪರಗಳನ್ನು ತಿಳಿಸಿ, ಪುನಃ ಬರುವುದಾಗಿ ಹೇಳಿ ಇಬ್ಬರೂ ಹೊರಟು ಹೋದರು. ಅಷ್ಟರೊಳಗಾಗಿ ಸುಮಿತ್ರನ ಶವವು ಪಟ್ಟಣಕ್ಕೆ ತರಲ್ಪಟ್ಟಿತು. ಪರಂತಪ ಶಂಬರರಿಗೆ ನಡೆದ ಯುದ್ದದ ವೃತ್ತಾಂತವು, ಎಲ್ಲೆಲ್ಲಿಯ ಪ್ರಕಟವಾಯಿತು. ಸುಮಿತ್ರನ ಕೊಲೆಗೆ ಪರಂತಪನೇ ಕಾರಣಭೂತನೆಂದು ಜನಗಳೆಲ್ಲ ಅಲ್ಲಲ್ಲಿ ಅಡಿಕೊಳ್ಳುತಿದ್ದರು. ಇದನ್ನು ಕೇಳಿ, ಸಮರಸಿಂಹನೇ ಮೊದಲಾದ ಪಂಚಾಯಿತರೆಲ್ಲರೂ ನಿಜಸ್ಥಿತಿಯನ್ನು ಪ್ರಕಟ ಪಡಿಸಿದರು. ಆಗ ಜನರಿಗೆಲ್ಲ ಶಂಬರನ ವಿಷಯದಲ್ಲಿ ದೋಷವು ಪ್ರಬಲವಾಗಿ ಕಂಡುಬಂದಿತು. ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ಮುಗಿಸಿಕೊಂಡು ಆ ಪಟ್ಟಣದಲ್ಲಿದ್ದ ಒಂದಾನೊಂದು ವಿಹಾರ ಶಾಲೆಗೆ ಹೋಗಲು, ಅಷ್ಟರೊಳಗಾಗಿ ಅಲ್ಲಿಗೆ ಅರ್ಥಪರನೂ ಬಂದನು. ಇಬ್ಬರಿಗೂ ಸ್ವಾಗತ ಸಂಭಾಷಣೆಗಳಲ್ಲ ನಡೆದುವು.
ಶಂಬರ- ಓಹೋ! ಮಿತ್ರನೆ! ಸಕಾಲಕ್ಕೆ ನೀನು ಬಂದೆ.
ಅರ್ಥಪರ- ನಾನು ಎಂದಿಗೂ ಕ್ಲುಪ್ತಕಾಲವನ್ನು ಮೀರತಕ್ಕವನಲ್ಲ. ಇದೇನು - ಕೈಗೆ ಬಟ್ಟೆಯನ್ನು ಸುತ್ತಿಕೊಂಡಿರುವೆ?
ಶಂಬರ- ಪಾಪಿಯಾದ ಪರಂತಪನೊಡನೆ ನಾನು ಯುದ್ಧವನ್ನು ಮಾಡಬೇಕೆಂದಿದ್ದ ಸಂಗತಿಯನ್ನು ನಿನಗೆ ಮೊದಲೇ ತಿಳಿಸಿದ್ದೆನಷ್ಟೆ! ಇದೇ ಅದರ ಫಲ!
ಅರ್ಥಪರ- ಓಹೋ! ಇದಕ್ಕಾಗಿ ನಾನು ಬಹಳ ವಿಷಾದಿಸುತ್ತೇನೆ. ನಿಮ್ಮ ಕಲಹದಲ್ಲಿ ಅವನಿಗೆ ಯಾವ ಅಪಾಯವೂ ಸಂಭವಿಸಿದಂತೆ ಕಾಣುವುದಿಲ್ಲವಲ್ಲ !
ಶಂಬರ-ಅವನಿಗೆ ದೈವವು ಅನುಕೂಲವಾಗಿರುವುದು. ನನಗೆ ಏಟು ಬಿದ್ದುದಲ್ಲದೆ, ಆ ಪರಂತಪನಿಗೋಸ್ಕರ ಪ್ರಯೋಗಿಸಿದ ಗುಂಡು ಸುಮಿತ್ರನಿಗೆ ತಗುಲಿ ಆತನೂ ಮೃತನಾದನು.