ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಪರಂತಪ ವಿಜಯ

ಅಧ್ಯಾಯ ೧೦.

ಅರ್ಥಪರನು, ಅಲ್ಲಿಂದ ಪರಂತಪನ ಬಿಡಾರಕ್ಕೆ ಹೋಗಿ, ಆತನನ್ನು ಕರೆದುಕೊಂಡು ರತ್ನಾಕರಕ್ಕೆ ಹೊರಟನು. ಆ ಮಾರ್ಗದಲ್ಲಿ ಸತ್ಯಶರ್ಮನ ಮನೆಯು ಸಿಕ್ಕಿತು, ಪರಂತಪನು, ಅರ್ಥಪರನನ್ನು ಮೆಲ್ಲಗೆ ಹೋಗುತ್ತಿರುವಂತೆ ಹೇಳಿ, ತಾನು ಆ ಮನೆಯನ್ನು ಪ್ರವೇಶಿಸಿ, ಸತ್ಯಶರ್ಮನಿಗೂ ತನ್ನ ಪ್ರಿಯೆಯಾದ ಕಾಮಮೋಹಿನಿಗೂ ತನ್ನ ಪ್ರಯಾಣದ ಸಂಗತಿಯನ್ನು ತಿಳಿಸಿದನು. ಅದನ್ನು ಕೇಳಿ, ಕಾಮಮೋಹಿನಿಯು ಭಯಗ್ರಸ್ತೆಯಾಗಿ, ಆತನ ಕೈಯನ್ನು ಹಿಡಿದುಕೊಂಡು "ಇದು ಅಪಾಯಕರವಾದ ಸ್ಥಳ; ಹೋಗಕೂಡದು.” ಎಂದು ನಿರ್ಬಂಧಿಸಿ ಪ್ರಾರ್ಥಿಸಿಕೊಳ್ಳಲು, ಪರಂತಪನು "ಎಲೆ ಪ್ರಿಯೆ! ಹೆದರಬೇಡ, ನಾನು ಆಯುಧಪಾಣಿಯಾಗಿರುತ್ತೇನೆ. ನನಗೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಅಲ್ಲಿ ಜನಗಳಿಗೆ ಉಂಟಾಗಿರುವ ಭಯವೆಲ್ಲ ನಿರರ್ಥಕವಾದುದು. ಅದನ್ನು ನಿನಗೆ ವಾಸಗೃಹವನ್ನಾಗಿ ಮಾಡಬೇಕೆಂದಿದ್ದೇನೆ. ಅದು ವಾಸಕ್ಕೆ ಬಹು ಅನುಕೂಲವಾಗಿದೆ. ಅದರಲ್ಲಿ ಇನ್ನೂ ಕೆಲವು ಬೇಕಾದ ಆನುಕೂಲ್ಯಗಳನ್ನುಂಟುಮಾಡಿ, ನಿಮ್ಮೆಲ್ಲರನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತೇನೆ. ಹೆದರಬೇಡ." ಎಂದು ಹೇಳಲು, ಸತ್ಯಶರ್ಮನೇ ಮೊದಲಾದವರೆಲ್ಲರೂ ಅವಳಿಗೆ ಧೈರ್ಯ ಹೇಳಿದರು.
ಕಾಮಮೋಹಿನಿ- ಪ್ರಿಯನೇ! ನಿನ್ನ ಧೈರ್ಯ ಸಾಹಸಗಳು ನನಗೆ ಭಯಾವಹಗಳಾಗಿರುವುವು. ಅದು ನಮಗೆ ವಾಸಾರ್ಹವೆಂಬುದರಲ್ಲಿ ನನಗೆ ನಂಬುಗೆ ತೋರುವುದಿಲ್ಲ. ಅಂತೂ, ಆ ಪ್ರದೇಶವು ಅಪಾಯಕರವಾದುದೇ ಸರಿ, ಪುನಃ ನಿನ್ನನ್ನು ನಾನು ನೋಡುವೆನೋ ಇಲ್ಲವೋ ಎಂಬ ಸಂಶಯವೂ ಸಹ ನನ್ನಲ್ಲಿ ನೆಲೆಗೊಂಡಿರುವುದು.
ಪರಂತಪ- ಎಲೆ ಪ್ರಿಯೆ ! ಇದೇನು ನೀನೂ ಹೀಗೆ ಹೆದರುವೆ? ಈ ಭಯವು ನಿನಗೆ ಯೋಗ್ಯವಾದುದಲ್ಲ, ನಾಳೆ ಮಧ್ಯಾಹ್ನದೊಳಗಾಗಿ ನಾನು ಇಲ್ಲಿಗೆ ಬರುವೆನು, ನೋಡು.