ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೯
೮೧

ಸತ್ಯಶರ್ಮ- ಅಯ್ಯಾ! ನೀನು ಬಹು ಜಾಗರೂಕನಾಗಿರು. ಆ ಪ್ರದೇಶವು ಭೂತಪ್ರೇತಾದಿಗಳಿಗೂ ಅನೇಕ ದುರ್ದೇವತೆಗಳಿಗೂ ಆಶ್ರಯವಾಗಿರುವುದೆಂದು ಕೇಳುತ್ತೇನೆ. ಜೋಕೆ! ಜೋಕೆ!!
ಪರಂತಪ -(ನಸುನಕ್ಕು) ಇದೀಗ ಅತ್ಯಾಶ್ಚರ್ಯಕರವಾಗಿದೆ. ಭೂತ ಪ್ರೇತ ಪಿಶಾಚಾದಿಗಳು ಯಾವುವಿದ್ದರೂ, ಅವುಗಳನ್ನೆಲ್ಲ ಹೊರಡಿಸಿ ಅದನ್ನು ವಾಸಾರ್ಹವಾಗಿ ಮಾಡುತ್ತೇನೆ; ಚಿಂತಿಸಬೇಡ. ಆದರೆ, ನಾನು ಬರುವವರೆಗೂ ಈ ನನ್ನ ಪ್ರಿಯೆಯನ್ನೂ ನಮ್ಮಿಬ್ಬರ ವಿವಾಹದ ಕರಾರನ್ನೂ ಕಾಪಾಡಿಕೊಂಡಿರು.
ಸತ್ಯಶರ್ಮ - ಈ ವಿಷಯದಲ್ಲಿ ನೀನು ಹೆದರದೆ ಧೈರ್ಯವಾಗಿರು ನಾನು ನೋಡಿಕೊಳ್ಳುವೆನು.
ಪರಂತಪ - (ತನ್ನ ಕೈಪೆಟ್ಟಿಗೆಯನ್ನು ಕಾಮಮೋಹಿನಿಯ ವಶಕ್ಕೆ ಕೊಟ್ಟು) ಪ್ರಿಯೆ! ಇದರಲ್ಲಿ ೨೦ ಲಕ್ಷ ಪೌನುಗಳ ಬ್ಯಾಂಕು ನೋಟುಗಳಿರುತ್ತವೆ. ಇದನ್ನು ನೀನು ಭದ್ರವಾಗಿಟ್ಟುಕೊಂಡಿರು. ನಿನಗೆ ಬೇಕಾದಷ್ಟನ್ನು ತೆಗೆದುಕೊ. ಸತ್ಯಶರ್ಮಾದಿಗಳಿಗೆ ಬೇಕಾದಷ್ಟು ಖರ್ಚಿಗೆ ಕೊಡು. ಇದರ ವಿನಿಯೋಗದ ವಿಷಯದಲ್ಲಿ ನಿನಗೆ ಸರಸ್ವಾತಂತ್ರವನ್ನೂ ವಹಿಸುವೆನು, ಹೋಗು.
ಅದರ ಬೀಗದ ಕೈಯನ್ನು ಅವಳ ವಶಕ್ಕೆ ಕೊಟ್ಟು, ಅವರೆಲ್ಲರ ಅನುಮತಿಯನ್ನೂ ತೆಗೆದುಕೊಂಡು, ಕುದುರೆಯನ್ನು ಹತ್ತಿ ಹೊರಟು, ತನ್ನ ನಿರೀಕ್ಷಣೆಯಿಂದಲೇ ಮೆಲ್ಲನೆ ನಡೆಯುತ್ತಿದ್ದ ಅರ್ಥಪರನನ್ನು ಸೇರಿದನು. ಸೂರ್ಯಾಸ್ತಮಯದೊಳಗಾಗಿಯೇ ಕಣಿವೆಗಳ ಮಾರ್ಗವಾಗಿ ರತ್ನಾಕರದ ಕಟ್ಟಡದ ಸಮೀಪಕ್ಕೆ ಸೇರಿ ಅದರ ರಾಮಣೀಯಕವನ್ನು ನೋಡಿ ಮನಸ್ಸಿನಲ್ಲಿ ಅತ್ಯಾಶ್ಚರ್ಯ ಪಡುತ್ತಿರುವ ಪರಂತಪನು, ಅರ್ಥಪರನನ್ನು ನೋಡಿ “ಅಯ್ಯಾ! ಇದರ ಅಂದವನ್ನು ನೋಡಿದೆಯಾ? ಇದನ್ನು ನಿರ್ಮಿಸಿದ ಶಿಲ್ಪಿಯ ಚಾತುರ್ಯವು ಅನ್ಯಾದೃಶವಾದುದೆಂದು ವ್ಯಕ್ತಪಡುವುದು"ಎಂದನು.
ಅರ್ಥಪರ - ನಿವಾಸಾರ್ಹವಲ್ಲದ ಈ ಕಟ್ಟಡವು, ನನಗೆ ಸ್ಮಶಾನದಲ್ಲಿರುವ ಗೋರಿಯಂತೆ ಕಾಣುವುದು. ಇದನ್ನು ನೋಡಿ ನೀನೇನೋ ಬಹಳ ಅಶ್ಚರ್ಯ ಪಡುವೆಯಲ್ಲ!