ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

131

ಸುನಂದಾ ಮನಸಿನೊಳಗೇ ಅಂದಳು: 'ನಾನು ಅವರ ಸೇವೆ ಮಾಡಿದೀನಿ. ಪುಣ್ಯ
ಕಟ್ಟಿಕೊಂಡಿದೀನಿ. ಆ ಪುಣ್ಯಾನ ಈಗ ಅನುಭವಿಸ್ತಿದೀನಿ.'
ಆದರೆ ಸುನಂದಾ ಹೆಚ್ಚು ಕುತೂಹಲ ತಳೆದುದು, ಆ ಅಣ್ಣ ತಮ್ಮಂದಿರೊಳಗಿನ
ವರ್ತನೆಗೆ ಸಂಬಂಧಿಸಿ. ತನ್ನೊಡನೆ ಕಾಡುಮಾನವನಾಗಿ ನಡೆದುಕೊಳ್ಳುತ್ತಿದ್ದ ಗಂಡ,
ಈ ವಾತಾವರಣದಲ್ಲಿ ಹೇಗೆ ವರ್ತಿಸುವನೆಂದು ತಿಳಿಯಲು ಆಕೆ ಆತುರಳಾಗಿದ್ದಳು.
ಅಣ್ಣ ಅತ್ತಿಗೆ ಮನೆಗೆ ಬಂದವರೆಂದು ಪುಟ್ಟಣ್ಣನಿಗೆ ಸಂತೋಷವೇನೂ ಆಗಲಿಲ್ಲ. ಅಣ್ಣ
ನೇನೋ ತಮ್ಮನೊಡನೆ ಮಾತನಾಡಲು ಯತ್ನಿಸಿದರೂ ಆತ ಸಂಭಾಷಣೆಯಲ್ಲಿ ಆಸಕ್ತಿ
ತೋರಲಿಲ್ಲ. ಅವರೆಲ್ಲರ ಜೊತೆಯಲ್ಲಿ ಆತ ಊಟಕ್ಕೆ ಕುಳಿತುದು ಒಂದು ಮಧ್ಯಾಹ್ನ
ಮಾತ್ರ. ಭಾನುವಾರ. ಅದೂ, ತಪ್ಪಿಸಿಕೊಳ್ಳುವುದು ದುಸ್ಸಾಧ್ಯವಾದುದರಿಂದ.
ಅತ್ತಿಗೆಯೊಡನೆ ಆತ, 'ಚೆನ್ನಾಗಿದೀರಾ?' ಎಂಬ ಪ್ರಶ್ನೆಯನ್ನೂ ಕೇಳಲಿಲ್ಲ. ಇದರಿಂದ
ಅತ್ತಿಗೆಗೆ ರೇಗಿತು. ಆದರೂ ಅದನ್ನು ತೋರಗೊಡದೆ ಆಕೆ ಕೇಳಿದಳು:
"ನಿಮ್ಮವರಿಗೀಗ ಕೆಲಸ ಜಾಸ್ತೀಂತ ತೋರುತ್ತೆ."
"ಹೂಂ ಕಣ್ರೀ"
—ಎಂದಳು ಸುನಂದಾ.
ಅವಳಿಗೊಂದು ವಿಚಿತ್ರ ರೀತಿಯ ಸಮಾಧಾನವಾಯಿತು. ಅದಕ್ಕೆ ಕಾರಣ, ಆತನ
ವಿಪರೀತ ವರ್ತನೆ ತನ್ನೊಬ್ಬಳೊಡನೆ ಮಾತ್ರವಲ್ಲ-ಎಂಬುದು.
ಆಕೆ ಹೆಚ್ಚಿನ ಲವಲವಿಕೆಯಿಂದ ಓಡಾಡಿದಳು. ಎಂದಿಗಿಂತ ಭಿನ್ನವಾಗಿ ಹೊತ್ತು
ಕಳೆಯಲು ದೊರೆತ ಆ ಅವಕಾಶವನ್ನು ಉಪಯೋಗಿಸಿಕೊಂಡಳು.
ಬಂದ ಮೂರನೆಯ ದಿನ, ಆ ಸಂಸಾರ ಹೊರಡುವುದೆಂದು ಗೊತ್ತಾದಾಗ,
ಸುನಂದಾ ಗಂಡನನ್ನು ಕೇಳಿದಳು:
"ಇವತ್ತು ಹೊರಡ್ತಾರಂತೆ. ಉಡುಗೊರೆ ಕೊಟ್ಟು ಕಳಿಸ್ಬೇಕು, ಅಲ್ವೆ?"
ಗಂಡನಿಂದ ದೊರೆತುದು ವಾದಕ್ಕೆ ಆಸ್ಪದವಿಲ್ಲದಂತಹ ಸ್ಪಷ್ಟ ಉತ್ತರ:
"ಏನೂ ಮಾಡ್ಬೇಕಾದ್ದಿಲ್ಲ."
ಆತನ ವಿಚಾರ ಸರಣಿಯೇ ಕೆಟ್ಟಿತ್ತೆಂಬುದಕ್ಕೆ ಸುನಂದೆಗೆ ಬೇರೆ ನಿದರ್ಶನ
ಬೇಕಾಗಿರಲಿಲ್ಲ. ದೊರೆತ ಉತ್ತರದ ಮೂಲಕ ಆತನ ಕಾಹಿಲೆಯ ಸ್ವರೂಪವನ್ನು
ಮತ್ತೂ ಚೆನ್ನಾಗಿ ತಿಳಿದುಕೊಂಡು ಆಕೆ ಮರುಮಾತನಾಡಲಿಲ್ಲ. ತಾನು ಉಳಿಸಿದ್ದ
ಸ್ವಲ್ಪ ಹಣವನ್ನು ರಾಧಮ್ಮನ ಕೈಗೆ ಕೊಟ್ಟು, ಮಕ್ಕಳಿಗೋಸ್ಕರ ಒಂದಿಷ್ಟು ಬಟ್ಟೆಬರೆ
ತರಿಸಿ, ಉಡುಗೊರೆಯ ಶಾಸ್ತ್ರ ತೀರಿಸಿದಳು. ಪುಟ್ಟಣ್ಣನ ಉಪೇಕ್ಷೆಯನ್ನು ಆಗಲೆ
ಗಮನಿಸಿದ್ದ ಆ ದಂಪತಿಗೆ ಉಡುಗೊರೆಯ ಬಡತನ ಕಂಡು ಆಶ್ಚರ್ಯವೇನೂ
ಆಗಲಿಲ್ಲ.
ರಾತ್ರೆ ಅವರು ಹೊರಡುವ ಹೊತ್ತಿಗೂ ಪುಟ್ಟಣ್ಣ ಬರಲಿಲ್ಲ. ಸುನಂದೆಯೇ
ಅವರ ಜತೆಯಲ್ಲಿ ಹತ್ತು ಹೆಜ್ಜೆ, ರೈಲು ನಿಲ್ದಾಣಕ್ಕೆ ಹೋಗುವ ಬಸ್ಸಿನವರೆಗೆ,