ಈ ಪುಟವನ್ನು ಪ್ರಕಟಿಸಲಾಗಿದೆ



144

ಕನಸು

ಬರೆದು ಮುಗಿಸಿದಾಗ, ನಾನು ಸಾಧನಾ ಇಬ್ಬರೂ ಸೇರಿ ಇದನ್ನು ಬರೆದೆವೆನ್ನಿ
ಸಿತು. [ಆದರೆ ಪ್ರಕಾಶಕರು ಕೇಳಬೇಕಲ್ಲ?]
ಹೀಗಾದುದು ಕಟ್ಟು ಕಥೆಯಲ್ಲ: ನಿಜವಾಗಿ ನನಗಾದ ಅನುಭವ....
ಯಾಕೆ ಹೀಗಾಯಿತು? ಈ ಸಲ ಯಾಕೆ ಇಂತಹ ಅನುಭವವಾಯಿತು?
ಕಾರಣ ಸ್ಪಷ್ಟ. ಇಲ್ಲಿರುವ ಕಥಾವಸ್ತುವಿಗೆ ಸಂಬಂಧಿಸಿದ ಸಮಸ್ಯೆಗಳನ್ನು
ನೂರು ಸಾರೆ ನಾವು ಚರ್ಚಿಸಿದ್ದೇವೆ. ಚರ್ಚೆಯ ಫಲವಾಗಿ ಸರಿಯಾದ ತಿಳಿವಳಿಕೆ
ರೂಪುಗೊಂಡು ಯಾವಾಗಲೂ ಒಂದೇ ಅಭಿಪ್ರಾಯಕ್ಕೆ ಬಂದಿದ್ದೇವೆ. ನಮ್ಮದೆಂದಿಗೂ
ಬರಿಯ ಸಿದ್ಧಾಂತಕ್ಕೆ ಸಂಬಂಧಿಸಿದ ಚರ್ಚೆಯಾಗಿರಲಿಲ್ಲ. ನಮಗೆ ಪರಿಚಿತವಾದ ಹಲವು
ಸಂಸಾರಗಳ ಕತೆಯೆಲ್ಲ ಕಣ್ಣಿಗೆ ಕಟ್ಟಿ, ಅವುಗಳನ್ನು ಉದಾಹರಸಿ, ನಾವು ಮಾತನಾಡು
ತ್ತಿದ್ದೆವು. ಕಠಿನವೆನಿಸಿದ ನಿನ್ನೆಯಿಂದ ಹಿಡಿದು, ಸುಲಭವಲ್ಲದ ಇವತ್ತನ್ನು ದಾಟಿ,
ಕಲ್ಪನೆಯ ನಾಳೆಯವರೆಗೆ—ಎಲ್ಲ ಚಿತ್ರಗಳನ್ನೂ ನಾವು ಕಾಣುತ್ತಿದ್ದೆವು.
ಅದರ ಫಲ ಈ ಕಾದಂಬರಿ.
ಭಾರತೀಯ ಗೃಹಿಣಿಯ ಹಿರಿತನವನ್ನು ಕುರಿತಾದ ಸಹಸ್ರಾರು ನೀತಿಬೋಧೆ
ಗಳು ಪುರಾತನ ಕಾಲದಿಂದಲೂ ನಡೆದು ಬಂದಿವೆ. ನಮ್ಮ ಜನ ಪುರಾಣೇತಿಹಾಸಗಳ
ವೀರ ಸ್ತ್ರೀಯರನ್ನು ಹೊಗಳುತ್ತಾರೆ. ಆದರೆ ಮನೆಯಲ್ಲಿ ಹೆಂಗಸರನ್ನು ಕಾಲಿಗೆ ಕಸ
ವಾಗಿ ಕಾಣುತ್ತಾರೆ. ಹೊರಗೆ ನಾಗರಿಕತೆಯನ್ನೂ ಸ್ತ್ರೀ ಪುರುಷ ಸಮಾನತೆಯನ್ನೂ
ಪ್ರತಿಪಾದಿಸುವ ವ್ಯಕ್ತಿ ಮನೆಗೆ ಬಂದೊಡನೆ, ತನ್ನ ಬರವನ್ನು ಕಾಯುತ್ತಾ ಹೊರಗೆ
ನಿಂತಿದ್ದ ಹೆಂಡತಿಗೆ, “ಬಾಗಿಲಲ್ಲಿ ಯಾಕ್ನಿಂತಿದೀಯಾ?” ಎಂದು ಕೇಳುತ್ತಾನೆ.
ನಮ್ಮಲ್ಲಿ ಹೆಂಡತಿ ಮಾತ್ರ ಸೀತೆಯಾಗಿದ್ದರಾಯಿತು-ಗಂಡ ರಾಮನಾಗಬೇಕೆಂಬ
ನಿಯಮವಿಲ್ಲ. ಗಂಡಸು ಗಟಾರದಲ್ಲಿ ಹೊರಳಿ ಬಂದರೂ ಸರಿಯೆ, ಮನೆಗೆ ಬಂದೊಡನೆ
ಪುನೀತನಾಗುತ್ತಾನೆ. ಹೆಂಗಸಿಗೆ ಮಾತ್ರ, ಯಾವುದೇ ಕಾರಣಕ್ಕಾಗಿ ಏನಾದರೂ ಒಮ್ಮೆ
ಆದರೆ, ಆಕೆ ಆ ಕ್ಷಣದಿಂದಲೆ ನಾಯಿ ಮುಟ್ಟಿದ ತಪ್ಪಲೆ—ತಾವು ಮುಟ್ಟಬಾರದ
ಎಂಜಲು ಪಾತ್ರೆ.
ಸುನಂದಾ ಒಳ್ಳೆಯವಳು. ಸುಗುಣೆ. ವಿದ್ಯಾವತಿ. ಸುಂದರ ಬಾಳ್ವೆಯ ನೂರು
ಕನಸುಗಳೊಡನೆ ಗಂಡನ ಮನೆಗೆ ಬಂದವಳು.
ಹುಡುಗಿಯರಲ್ಲಿ ಆ ರೀತಿ ಗಂಡನ ಮನೆಗೆ ಬರುವವರ ಸಂಖ್ಯೆಯೇ ಹೇರಳ.
ಆ ಮಟ್ಟಿಗೆ ಸುನಂದಾ ವಿಶಿಷ್ಟ ಜೀವವಲ್ಲ, ಸಾಮಾನ್ಯ ಜೀವ.
ಆದರೆ, ಮುಂದೆ ಸುನಂದೆಯ ಕನಸುಗಳೆಲ್ಲ ಒಡೆದುಹೋದುವು. ಕೈ ಹಿಡಿದ
ಪುಟ್ಟಣ್ಣ ಕೆಟ್ಟವನಾಗಿ ಅಸಹನೀಯ ಸಂಕಟಕ್ಕೆ ಆಕೆಯನ್ನು ಗುರಿಮಾಡಿದ. ಹೀಗೆ,
ಸುನಂದೆಯ ಜೀವ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿತು. ಎಲ್ಲ ಹುಡುಗಿಯರಿಗೂ
ಹಾಗಾಗುತ್ತದೆಂದಲ್ಲ. ಆದರೆ ಆಕೆಗೆ ಹಾಗಾಯಿತು.
ಅದಕ್ಕೆ ಕಾರಣ ಪುಟ್ಟಣ್ಣ. ಆತನೊಬ್ಬ ವಿಚಿತ್ರ ಪ್ರಾಣಿ. ಸಾಮಾನ್ಯವಾಗಿ