ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

69

ಇದೇ ಏನು ಅಂತ್ಯ? ಇಲ್ಲಿಗೆ ಎಲ್ಲವೂ ಆಗಿಯೇ ಹೋಯಿತೆ ಹಾಗಾದರೆ?
ಒಡೆದ ಗಡಿಗೆಯಾಯಿತೆ ತನ್ನ ಸಂಸಾರ?
ಒಂದು ಪ್ರಶ್ನೆ ಪದೇ ಪದೇ ಕಾಡುತ್ತ ಬೃಹದಾಕಾರ ತಳೆಯಿತು:
ಇನ್ನೇನು ಮಾಡಬೇಕು ತಾನು? ಇನ್ನೇನು ಮಾಡಬೇಕು?
ಆ ಪ್ರಶ್ನೆಗೆ ಉತ್ತರವೇ ಇದ್ದಂತೆ ತೋರಲಿಲ್ಲ.
ಹೊರಗಿನಿಂದ ರಾಧಮ್ಮನ ಸ್ವರ ಕೇಳಿಸಿತು:
“ಸುನಂದಾ! ಸುನಂದಾ!”
ರಾಧಮ್ಮ ಒಳಗೆ ಬರದಿದ್ದರೇ ಮೇಲು. ಅವರಿಗೆ ಏನೆಂದು ಮುಖ ತೋರಿಸ
ಬೇಕು? ತನ್ನ ರೌರವ ನರಕದ ಬಾಳ್ವೆಗೆ ಅವರೊಬ್ಬರ ಸಾಕ್ಷ್ಯ ಬೇರೆ ಬೇಕೆ?
... ಕರೆಗೆ ಉತ್ತರವಾಗಿ 'ಓ' ಎನ್ನಲು ಆಕೆ ಯತ್ನಿಸಲಿಲ್ಲ. ಏಳಲೂ ಪ್ರಯ
ತ್ನಿಸಲಿಲ್ಲ.
ಬಲು ಮೆಲ್ಲನೆ ಬಾಗಿಲನ್ನು ತಳ್ಳಿದ ಸದ್ದು....ರಾಧಮ್ಮನ ನಡಿಗೆ...
ರಾಧಮ್ಮ ಬರುತ್ತಿದ್ದಂತೆಯೇ ಸುನಂದಾ ಮುಖದ ಮೇಲಿನ ಹೊದಿಕೆ ಎಳೆದು
ಕೊಂಡಳು.
ಏನಾಗಿತ್ತು ಎಂಬ ವಿವರ ಒಂದೂ ರಾಧಮ್ಮನಿಗೆ ಬೇಕಾಗಿರಲಿಲ್ಲ. ಅಲ್ಲಿ ಬುಸು
ಗುಟ್ಟುತ್ತ ನೆಲೆಸಿದ್ದ ವಿಶಿಷ್ಟ ಮೌನವೇ ಎಲ್ಲ ಕಥೆ ಹೇಳುತ್ತಿತ್ತು.
ರಾಧಮ್ಮ ಸುನಂದೆಯ ಹಾಸಿಗೆಯ ಬಳಿ ಕುಳಿತು ಹೊದಿಕೆ ಸರಿಸಲು ಯತ್ನಿಸಿ
ದರು. ದಿಂಬಿಗೆ ಮುಖ ತಗಲಿಸಿ ಮರೆಮಾಡಿಕೊಂಡಳು ಸುನಂದಾ. ರಾಧಮ್ಮ
ಆಕೆಯ ಕೈ ಹಿಡಿದರು. ಬೆಚ್ಚಗಿತ್ತು. ಗಾಬರಿಯಿಂದ ಹಣೆ ಮುಟ್ಟಿ ನೋಡಿದರು.
ಹಣೆಯೂ ಬೆಚ್ಚಗಿತ್ತು....
“ಸುನಂದಾ...”
ಮೌನವನ್ನು ಭೇದಿಸಲೆಂದು ಮತ್ತೊಮ್ಮೆ ಮಾತು.
“ಸುನಂದಾ, ಇಲ್ನೋಡಿ....”
ಆಗಲೂ ಸುನಂದಾ ಸುಮ್ಮನಿದ್ದಳು.
“ನಾನು ಹೊರಟ್ಹೋಗ್ತೀನಿ ಹಾಗಾದರೆ.”
ಅದು ಬಲು ಕ್ರೂರವಾದ ಬೆದರಿಕೆ. ಆಕೆಯೂ ಹೊರಟುಹೋದರೆ ಯಾರು
ಗತಿ ತನಗೆ?
ಸುನಂದಾ ಮತ್ತೆ ಮೆಲ್ಲನೆ ಮಗ್ಗುಲು ಹೊರಳಿ, ಶೂನ್ಯ ನೋಟದಿಂದ ರಾಧಮ್ಮ
ನನ್ನು ದಿಟ್ಟಿಸಿದಳು.
ಗಂಡಸಿನ ಕೈ ಉಗುರು, ಕೂರಲಗಿನ ಹಾಗೆ ಆ ಹೆಣ್ಣಿನ ಮೂಗನ್ನು ಗಾಯ
ಗೊಳಿಸಿತ್ತು; ಕೆನ್ನೆಗಳನ್ನು ತಿವಿದಿತ್ತು. ನೀರು ಬತ್ತಿದ ಬಾವಿಗಳಂತೆ ಆಳಕ್ಕೆ ಇಳಿ
ದಿದ್ದುವು ಕಣ್ಣುಗಳು.