ಈ ಪುಟವನ್ನು ಪ್ರಕಟಿಸಲಾಗಿದೆ
೩೫೬
ಭಾರತ ದರ್ಶನ

ಕೊಳಕಲು ದಾರಿಬಿಟ್ಟು ಸಾಮೂಹಿಕ ಸಮಸ್ಯೆಗಳನ್ನು ಪರಸ್ಪರ ಯೋಚಿಸುವುದಕ್ಕೂ, ವಿಶಾಲ ಸಹಕಾರ ಭಾವನೆಯ ದೃಷ್ಟಿ ಸ್ಪಲ್ಪ ಬೆಳೆಯುವುದಕ್ಕೂ ಸಹಾಯವಾಯಿತು.

ಯೋಜನಾ ಸಮಿತಿ ರಚನೆಯ ಮುಖ್ಯ ಮೂಲ ಉದ್ದೇಶ ದೇಶದ ಔದ್ಯೋಗೀಕರಣವಾಗಿತ್ತು. ಬಡತನ, ನಿರುದ್ಯೋಗಗಳ ನಿವಾರಣೆ, ರಾಷ್ಟ್ರ ಸಂರಕ್ಷಣೆ, ಎಲ್ಲ ಸಾಮಾನ್ಯ ಆರ್ಥಿಕ ಪ್ರಗತಿ, ಔದ್ಯೋಗೀ ಕರಣವಿಲ್ಲದೆ ಸಾಧ್ಯವಿಲ್ಲ. ಈ ಔದ್ಯೋಗಿಕರಣದ ಮೊದಲ ಹೆಜ್ಜೆಯಾಗಿ ಸಮಗ್ರ ರಾಷ್ಟ್ರೀಯ ಯೋಜನೆಯ ರೂಪುರೇಖೆ ಒಂದು ಸಿದ್ದವಾಗಬೇಕಾದ್ದು ಅತ್ಯವಶ್ಯಕ. ಈ ಯೋಜನೆಯಲ್ಲಿ ದೊಡ್ಡ ದೊಡ್ಡ ಮೂಲ ಕೈಗಾರಿಕೆಗಳಿಗೂ, ಮಧ್ಯವರ್ತಿ ಕೈಗಾರಿಕೆಗಳಿಗೂ ಗೃಹಕೈಗಾರಿಕೆಗಳಿಗೂ ಸ್ಥಾನಮಾನವನ್ನು ನಿಯೋಜಿಸಬೇಕು. ಆದರೆ ಜನರ ಮುಖ್ಯ ಕಸಬಾದ ವ್ಯವಸಾಯವನ್ನು ಯಾವ ಯೋಜನೆಯೂ ಅಲಕ್ಷ ಮಾಡುವಂತಿರಲಿಲ್ಲ. ಸಮಾಜ ಹಿತರಕ್ಷಣೆ ಕೆಲಸಗಳೂ ಅಷ್ಟೇ ಪ್ರಾಮುಖ್ಯವಿದ್ದವು. ಈ ರೀತಿ ಒಂದರಿಂದ ಇನ್ನೊಂದು, ಸರ್ವತೋಮುಖವಾಗಿ ಮುಂದುವರಿಯದೆ ಯಾವ ಒಂದು ಕಡೆಯೂ ಮುಂದುವರಿ ಯುವಂತಿರಲಿಲ್ಲ. ಈ ಯೋಜನೆ ಯೋಚಿಸಿದಷ್ಟು ಅದರ ವ್ಯಾಪ್ತಿಯೂ, ಆವರಣವೂ ವಿಶಾಲಗೊಂಡು ನಮ್ಮ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪ್ರವೇಶಿಸಿತು. ಎಲ್ಲವನ್ನೂ ಒಂದೇ ಮಾದರಿಯಲ್ಲಿ ಎರಕ ಹೊಯ್ಯಬೇಕೆಂದು ನಾವು ಯೋಚಿಸಲಿಲ್ಲ. ಆದರೆ ಯೋಜನೆಯ ಯಾವ ಒಂದು ಭಾಗ ಯೋಚಿಸುವಾಗಲೂ ಸಮಗ್ರ ಚಿತ್ರ ಮುಂದಿಟ್ಟುಕೊಂಡೇ ಮುಂದುವರಿಯಬೇಕಾಗಿತ್ತು. ಕೆಲಸ ಮುಂದುವರಿದಂತೆಲ್ಲ ನಮ್ಮ ಸದಸ್ಯರ ಮತ್ತು ನನ್ನ ಮನಸ್ಸೆಲ್ಲ ಪೂರ್ಣ ಅದರಲ್ಲಿ ಮಗ್ನವಾಯಿತು. ಅದರ ಜೊತೆಯಲ್ಲಿ ಒಂದು ಅಸ್ಪಷ್ಟ, ಅನಿಶ್ಚಿತ ಭಾವನೆಯೂ ಉಂಟಾಯಿತು ; ಯೋಜನೆಯ ಮುಖ್ಯ ವಿಷಯಗಳ ಕಡೆ ಲಕ್ಷ ಕೊಡದೆ ಸುಮ್ಮನೆ ಹುಡುಕಲಾರಂಭಿಸಿದೆವು. ಇದರಿಂದ ಉಪಸಮಿತಿಗಳ ಕೆಲಸವೂ ನಿಧಾನವಾಯಿತು. ಆ ಉಪ ಸಮಿತಿಗಳಿಗೆ ನಿಯತಕಾಲದಲ್ಲಿ ನಿರ್ದಿಷ್ಟ ಗುರಿ ಸಾಧಿಸುವ ಕಾರ್ಯತತ್ಪರತೆಯಾಗಲಿ, ಆತುರವಾಗಲಿ ಇರಲಿಲ್ಲ.

ನಮ್ಮ ಸಮಿತಿ ರಚನೆಯ ವೈಶಿಷ್ಟದಿಂದ ಮುಂದಿನ ಸಾಮಾಜಿಕ ವ್ಯವಸ್ಥೆಯ ಮೂಲನೀತಿಯನ್ನಾಗಲಿ ತತ್ವಗಳನ್ನಾಗಲಿ ಎಲ್ಲರೂ ಒಪ್ಪಲು ಸಾಧ್ಯವೇ ಇರಲಿಲ್ಲ. ಆ ತತ್ವಗಳ ಚರ್ಚೆ ತೆಗೆದಿದ್ದರೆ ಆರಂಭದಲ್ಲೇ ಒಡಕುಹುಟ್ಟ ನಮ್ಮ ಸಮಿತಿಯೇ ಪುಡಿಪುಡಿಯಾಗುತ್ತಿತ್ತು. ಆ ರೀತಿ ಒಂದು ಮಾರ್ಗದರ್ಶಕನೀತಿ ಇಲ್ಲದೆ ಹೋದುದು ಒಂದು ಕೊರತೆಯಾಯಿತು ; ಆದರೆ ಯತ್ನ ವಿರಲಿಲ್ಲ. ಯೋಜನೆಯ ಸಾಮಾನ್ಯ ಸಮಸ್ಯೆಗಳನ್ನೂ ಮತ್ತು ತಾತ್ವಿಕ ವಿಚಾರದ ಗೋಜಿಗೆ ಹೋಗದೆ ಪ್ರತಿಯೊಂದು ಪ್ರತ್ಯೇಕ ಸಮಸ್ಯೆಯನ್ನೂ ವಾಸ್ತವಿಕ ದೃಷ್ಟಿಯಿಂದ ಯೋಚಿಸಬೇಕೆಂದೂ, ಅಂತಹ ಯೋಚನೆಯ ಪರಿಣಾಮವಾಗಿ ತಾತ್ವಿಕ ಪ್ರಶ್ನೆ ರೂಪುಗೊಂಡರೆ ರೂಪುಗೊಳ್ಳಲೆಂದೂ ತೀರ್ಮಾನಿಸಿದೆವು. ಸ್ಕೂಲ ಹೇಳುವುದಾದರೆ ಎರಡು ತಾತ್ವಿಕ ದೃಷ್ಟಿಗಳಿದ್ದವು. ಲಾಭಸಂಪಾದನೆಯ ದೃಷ್ಟಿ ನಾಶಮಾಡಿ ಸಮಪಾಲು ಹಂಚಿಕೆಯಾಗಬೇಕೆಂದು ಒತ್ತಾಯ ಮಾಡುತ್ತಿದ್ದ ಸಮಾಜವಾದಿದೃಷ್ಟಿ ಒಂದು, ಸ್ವಸಾಮರ್ಥ್ಯ ಮತ್ತು ಲಾಭಸಂಪಾದನೆಗೆ ಪೂರ್ಣಅವಕಾಶ ಕೊಟ್ಟು ಉತ್ಪಾದನೆ ಹೆಚ್ಚಿಸಬೇಕೆಂಬ ಬಂಡವಲಗಾರದೃಷ್ಟಿ ಮತ್ತೊಂದು. ಇದಲ್ಲದೆ ದೊಡ್ಡ ದೊಡ್ಡ ಕೈಗಾರಿಕೆಗಳು ಬೇಗ ಬೆಳೆಯ ಬೇಕೆನ್ನುವವರಿಗೂ, ಆದಷ್ಟು ಜನ ನಿರುದ್ಯೋಗಿಗಳಿಗೆ, ಅರೆ ಉದ್ಯೋಗಿಗಳಿಗೆ ಕೆಲಸ ಒದಗಿಸಬೇಕಾದರೆ ಗ್ರಾಮ ಮತ್ತು ಗೃಹಕೈಗಾರಿಕೆಗಳಿಗೆ ಪ್ರಾಮುಖ್ಯತೆ ಬೇಕೆನ್ನುವವರಿಗೂ ಭಿನ್ನಾಭಿಪ್ರಾಯವಿತ್ತು, ಅಂತ್ಯ ತೀರ್ಮಾನಗಳಲ್ಲೂ ಭಿನ್ನಾಭಿಪ್ರಾಯ ಅನಿವಾರ ಕಂಡವು. ಎಲ್ಲ ವಿಷಯ ಸಂಗ್ರಹಣೆಮಾಡಿ, ಹೊಂದಿಕೆಯಾಗಿ ಜೋಡಿಸಿ, ಸರ್ವಸಮ್ಮತವಿರುವ ರೂಪುರೇಖೆ ಚಿತ್ರಿಸಿ ಆಮೇಲೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಎರಡು ಮೂರು ವರದಿಗಳು ಬಂದರೂ ಉತ್ತಮವೆಂದು ಕಂಡಿತು. ಯೋಜನೆಯನ್ನು ಕಾರ್ಯಗತಮಾಡುವಕಾಲ ಒದಗಿದಾಗ ಆ ಪ್ರಜಾಪ್ರಭುತ್ವ ಸರಕಾರವು ಮೂಲನೀತಿ ಯನ್ನು ನಿರ್ಧರಿಸಬಹುದು. ಈ ಮಧ್ಯೆ ಅವಶ್ಯವಾದ ಪೂರ್ವಸಿದ್ದತೆಗಳೆ ಮುಗಿದು ಸಮಸ್ಯೆಯ ವಿವಿಧ ಮುಖಗಳು ಸಾರ್ವಜನಿಕರ ಮತ್ತು ಪ್ರಾಂತ ಮತ್ತು ಸಂಸ್ಥಾನಗಳ ಸರಕಾರಗಳ ಎದುರುಬರಲು ಅನುಕೂಲವಾಗುತ್ತದೆ ಎಂದು ಯೋಚಿಸಿದೆವು.