ಕಾಂಗ್ರೆಸೇತರರು ಮತ್ತು ಕಾಂಗ್ರೆಸ್ ಸರಕಾರಗಳನ್ನು ಟೀಕೆ ಮಾಡುತ್ತಿದ್ದವರ ಮೇಲೆಯೇ ಈ ಪರಿಣಾಮವಾದರೆ ಶಾಸನ ಸಭೆಗಳ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್‌ನಲ್ಲಿ ಸಹಾನುಭೂತಿಯುಳ್ಳವರ ಮೇಲೆ ಯಾವ ಪರಿಣಾಮ ಆಗಿರಬೇಕೆಂದು ಊಹಿಸಬಹುದು. ಮಂತ್ರಿಗಳು ಅಧಿಕಾರ ಬಿಟ್ಟಿದ್ದರೇ ಹೊರತು ಶಾಸನ ಸಭೆಗಳ ಸದಸ್ಯತ್ವ ತ್ಯಜಿಸಿರಲಿಲ್ಲ. ಶಾಸನ ಸಭೆಗಳ ಅಧ್ಯಕ್ಷರೂ ಮತ್ತು ಸದಸ್ಯರೂ ರಾಜೀನಾಮೆ ಕೊಟ್ಟಿರಲಿಲ್ಲ. ಆದರೂ ಅವರನ್ನು ತಳ್ಳಿ ಅಲಕ್ಷೆಮಾಡಲಾಯಿತು; ಹೊಸ ಚುನಾವಣೆಗಳನ್ನೂ ನಡೆಸಲಿಲ್ಲ. ವಿಧಾನ ದೃಷ್ಟಿಯಿಂದ ಇದು, ತುಂಬ ಅಸಹನೀಯವಿತ್ತು. ಬೇರೆ ಯಾವ ದೇಶದಲ್ಲಿಯಾದರೂ ಒಂದು ರಾಜಕೀಯ ಬಿಕ್ಕಟ್ಟು ಏಳುತ್ತಿತ್ತು. ದೇಶದ ರಾಷ್ಟ್ರೀಯ ಭಾವನೆಯ ಮೂರ್ತಿಸ್ವರೂಪದಂತೆ, ಶಕ್ತಿಯುತವೂ ಕ್ರಾಂತಿಕಾರಕವೂ ಇದ್ದು ಆನೇಕ ವರ್ಷಗಳಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಸಂಸ್ಥೆ ಕಣ್ಣು ಮುಚ್ಚಿ ಕುಳಿತು ಸರ್ವಾಧಿಕಾರಿ ಆಡಳಿತ ಸಹಿಸುವುದಂತೂ ಸಾಧ್ಯವೇ ಇರಲಿಲ್ಲ. ಅದರಲ್ಲೂ ಕಾಂಗ್ರೆಸ್ಸಿನ ಶಕ್ತಿ ಅಡಗಿಸುವುದೇ ಮುಖ್ಯ ಕರ್ತವ್ಯವೆಂದು ಸರ್ವಶಕ್ತಿ ವಿನಿಯೋಗಿಸಿ ಸರಕಾರವು ತನ್ನ ವಿರುದ್ಧ ನಡೆಸುತ್ತಿದ್ದ ಕೃತ್ಯಗಳನ್ನು ಸುಮ್ಮನೆ ನೋಡುತ್ತ ಕುಳಿತಿರಲು ಸಾಧ್ಯವಿರ ಲಿಲ್ಲ. ಶಾಸನ ಸಭೆಗಳಿಗೆ ಮತ್ತು ಸಾಮಾನ್ಯ ಎಲ್ಲ ಸಾರ್ವಜನಿಕ ಚಟುವಟಿಕೆಗಳಿಗೆ ಬಾಯಿ ಕಟ್ಟಿದ್ದಕ್ಕಾಗಿ ಮತ್ತು ಭಾರತದ ವಿಷಯದಲ್ಲಿ ಬ್ರಿಟಿಷರ ನೀತಿ ವಿರೋಧಿಸುವುದಕ್ಕಾಗಿ ಏನಾದರೂ ಪರಿಣಾಮ ಕಾರಕ ಪ್ರತಿಭಟನಾ ಕಾರ್ಯಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಬಲವಾಯಿತು.
ಬ್ರಿಟಿಷ್ ಸರಕಾರ ತನ್ನ ಯುದ್ಧದ ಗುರಿ ತಿಳಿಸಿ ಭಾರತವನ್ನು ತನ್ನ ಕಡೆ ಒಲಿಸಿಕೊಳ್ಳಲು ನಿರಾಕರಿಸಿದ ಮೇಲೆ "ಕಾಂಗ್ರೆಸ್ಸಿಗೆ ದೊರೆತ ಉತ್ತರ ಸ್ವಲ್ಪವೂ ತೃಪ್ತಿಕರವಿಲ್ಲ. ಬ್ರಿಟಿಷ್ ಸರಕಾರವು ಮೂಲ ತತ್ವದ ಪ್ರಶ್ನೆಯನ್ನೇ ಮರೆಮಾಚಿ, ತಪ್ಪು ಅಭಿಪ್ರಾಯ ಹುಟ್ಟಿಸಲು ಪ್ರಯತ್ನ ಮಾಡಿದೆ. ದೇಶದ ಪ್ರತಿಗಾಮಿ ಶಕ್ತಿಗಳ ಸಹಾಯದಿಂದ ತನ್ನ ಸಾಮ್ರಾಜ್ಯದ ಹಿಡಿತ ಭದ್ರಪಡಿಸಿಕೊಳ್ಳಲು ಅಲ್ಪ ಪ್ರಶ್ನೆಗಳಿಗೆ ಪ್ರಾಶಸ್ತ್ಯಕೊಟ್ಟು ತಮ್ಮ ಯುದ್ಧ ಗುರಿಯಲ್ಲಿ ಭಾರತದ ಸ್ವಾತಂತ್ರ ಪ್ರಶ್ನೆಯ ಮಾತನ್ನೇ ಮರೆಮಾಚಲು ಪ್ರಯತ್ನ ಮಾಡಿದಂತೆ ತೋರುತ್ತದೆ. ಯುದ್ಧದ ವಿಷಮಸ್ಥಿತಿ ಮತ್ತು ಅದರಿಂದ ಉದ್ಭವಿಸುವ ಪ್ರಶ್ನೆಗಳನ್ನೂ ಕಾಂಗ್ರೆಸ್ ಕಾರ್ ಸಮಿತಿಯು ತಾತ್ವಿಕ ದೃಷ್ಟಿಯಿಂದ ನೋಡಿದೆ. ಅದನ್ನು ದುರುಪಯೋಗ ಪಡಿಸಿ ಯಾವ ಲಾಭ ಪಡೆಯುವ ಇಷ್ಟವೂ ಸಮಿತಿಗೆ ಇಲ್ಲ. ಯುದ್ಧ ಗುರಿಯ ನೀತಿ ಮತ್ತು ಪ್ರಧಾನ ಪ್ರಶ್ನೆಗಳೂ ಮತ್ತು ಭಾರತದ ಸ್ವಾತಂತ್ರದ ಪ್ರಶ್ನೆಯೂ ತೃಪ್ತಿಕರವಾಗಿ ಇತ್ಯರ್ಥವಾಗುವವರೆಗೆ ಬೇರೆ ಯಾವ ಅಲ್ಪ ಪ್ರಶ್ನೆಯನ್ನೂ ಗಮನಿಸಲು ಸಾಧ್ಯವಿಲ್ಲ. ಪ್ರಜೆಗಳ ಪ್ರತಿನಿಧಿಗಳಿಗೆ ನಿಜವಾದ ಅಧಿಕಾರ ದೊರೆಯುವವರೆಗೆ ಈ ವಿಷಮ ಕಾಲದಲ್ಲಿ ಸರಕಾರದ ಆಡಳಿತದ ಜವಾಬ್ದಾರಿ ಹೊರಲು ಕಾಂಗ್ರೆಸ್ಸು ಸಿದ್ಧಎಲ್ಲ” ಎಂದು ಕಾಂಗ್ರೆಸ್ ಕಾರ್ಯ ಸಮಿತಿಯು ಘೋಷಿಸಿತು.
ಬ್ರಿಟಿಷ್ ಸರಕಾರದ ಪರ ಕೊಟ್ಟ ಹೇಳಿಕೆಗಳೇ ಬ್ರಿಟಿಷ್ ಸರಕಾರದ ನೀತಿಯಿಂದ ಕಾಂಗ್ರೆಸ್ಸು ದೂರವಿರಲು ಕಾರಣ ಎಂದು ತಿಳಿಸಿದೆವು. ಅಸಹಕಾರದ ಮೊದಲನೆಯ ಹೆಜ್ಜೆಯಾಗಿ ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳ ರಾಜಿನಾಮೆ ಅನಿವಾರ್ಯವಾಯಿತು. ಬ್ರಿಟಿಷರು ತಮ್ಮ ನೀತಿ ಬದಲಾಯಿಸುವವರೆಗೆ ಅಸಹಕಾರವೇ ಕಾಂಗ್ರೆಸ್ ನೀತಿಯಾಯಿತು. ಈ ಪ್ರತಿಯೊಂದು ಸತ್ಯಾಗ್ರಹದಲ್ಲೂ ಎದುರಾಳಿಯೊಂದಿಗೆ ಗೌರವಯುತ ಒಪ್ಪಂದಕ್ಕೆ ಬರಲು ಇರುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದೆಂಬ ಅಂಶ ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯನೂ ಜ್ಞಾಪಕದಲ್ಲಿಟ್ಟಿರಬೇಕು. ಬ್ರಿಟಿಷ್ ಸರಕಾರ ಕಾಂಗ್ರೆಸ್ಸಿನ ಎಲ್ಲ ಸಂಧಾನ ಪ್ರಯತ್ನ ಕ್ಕೂ ಈಗ ಅಡ್ಡಿ ಬಂದಿದ್ದರೂ ಕಾರ್ಯಸಮಿತಿಯು ಗೌರವಯುತ ಒಪ್ಪಂದಕ್ಕೆ ಬರಲು ಸಾಧ್ಯವಾದ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ” ಎಂದು ಸಹ ತಿಳಿಸಿದೆವು.
ದೇಶದ ಪ್ರಕ್ಷುಬ್ಧ ವಾತಾವರಣ ಕಂಡು, ಯುವಕರು ಹಿಂಸಾಮಾರ್ಗ ಅವಲಂಬಿಸಬಹುದೆಂದು ಸಂಶಯಗೊಂಡು, ಕಾಂಗ್ರೆಸ್ಸಿನ ಮೂಲನೀತಿ ಅಹಿಂಸಾ ಮಾರ್ಗವೆಂದೂ, ಯಾರೂ ಆ ನೀತಿಯಿಂದ ಕೂದಲೆಳೆಯಷ್ಟೂ ಕದಲಬಾರದೆಂದೂ ಕಾರ್ಯಸಮಿತಿಯು ದೇಶಕ್ಕೆ ಎಚ್ಚರಕೊಟ್ಟಿತು. ಕಾಯಿದೆ ಭಂಗ