ಮಾಡಿದರೂ ಅದು ಶಾಂತಿಯುತವಿರಬೇಕು. “ಸತ್ಯಾಗ್ರಹವೆಂದರೆ ಎಲ್ಲರೊಂದಿಗೆ, ಮುಖ್ಯ ಎದುರಾಳಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು.” ಪರಾಕ್ರಮಣ ಪ್ರತಿಭಟನೆಗೆ ಅವಶ್ಯವಾದ ರಕ್ಷಣೋಪಾಯ ಮತ್ತು ಯುದ್ಧಕ್ಕೂ ಈ ಅಹಿಂಸಾ ಮಾರ್ಗಕ್ಕೂ ಯಾವ ಸಂಬಂಧವೂ ಇರಲಿಲ್ಲ. ಬ್ರಿಟಿಷ್ ಆಡಳಿತ ವಿರುದ್ಧ, ಭಾರತದ ಸ್ವಾತಂತ್ರ್ಯ, ಸಾಧನೆಗಾಗಿ ನಾವು ತೆಗೆದುಕೊಳ್ಳಬಹುದಾದ ಕಾರ್ಯಕ್ರಮಕ್ಕೆ ಮಾತ್ರ ಈ ರೀತಿ ಅನ್ವಯಿಸುವುದಾಗಿತ್ತು. ಪೋಲೆಂಡ್ ಪತನದ ನಂತರ ಅನೇಕ ತಿಂಗಳುಕಾಲ. ಯೂರೋಪಿನ ಯುದ್ಧ ಪರಿಸ್ಥಿತಿ ಹೀಗೆಂದು ಹೇಳುವಂತಿರಲಿಲ್ಲ. ಅದನ್ನು ಒಂದು ಕೃತ್ರಿಮ ಕಾಲವೆಂದು ಹೇಳಬಹುದು. ಸಾಮಾನ್ಯ ಭಾರತೀಯನಿಗೆ ಯುದ್ಧವು ಬಹುದೂರವಿದ್ದಂತೆ ತೋರಿತು. ಭಾರತದ ಬ್ರಿಟಿಷ್ ಅಧಿಕಾರಿಗಳಿಗಂತೂ ಯುದ್ಧ ಸಾಮಗ್ರಿ ಸರಬರಾಜು ಒಂದು ಬಿಟ್ಟರೆ ಬೇರೆ ಯಾವ ಯುದ್ಧ ಯೋಚನೆಯೂ ಇದ್ದಂತೆ ತೋರಲಿಲ್ಲ. ಭಾರತದ ಸಾಮ್ಯವಾದಿ ಪಕ್ಷವು ಆಗಲೂ ಮತ್ತು ಜರ್ಮನಿ ೧೯೪೧ರಲ್ಲಿ ರಷ್ಯದ ಮೇಲೆ ದಂಡೆತ್ತಿ ಹೋಗುವವರೆಗೂ ಬ್ರಿಟಿಷರ ಯುದ್ದ ಸಿದ್ಧತೆಗೆ ಸಹಾಯ ಏನನ್ನೂ ಮಾಡಬಾರದೆಂದು ಹೇಳಿತ್ತು. ಈ ಸಂಸ್ಥೆಯನ್ನೂ ಬ್ರಿಟಿಷ್ ಅಧಿಕಾರಿಗಳು ಶಾಸನ ಬಾಹಿರಮಾಡಿದ್ದರು. ಕೆಲವು ಯುವಕರನ್ನು ಬಿಟ್ಟರೆ ಈ ಪಕ್ಷದ ಪ್ರಭಾವ ಹೆಚ್ಚು ಯಾರಮೇಲೂ ಇರಲಿಲ್ಲ. ಆದರೆ ಪ್ರಚಲಿತ ಭಾವನೆಯೊಂದಕ್ಕೆ ವಿಶೇಷ ಪ್ರಾಶಸ್ತ್ಯ ಕೊಟ್ಟ ಕಾರಣ ಸರಕಾರಕ್ಕೆ ಅವರು ಬಾಹಿರವಾದರು.
ಪ್ರಾಂತ ಮತ್ತು ಕೇಂದ್ರಗಳಲ್ಲಿ ಹೊಸ ಚುನಾವಣೆ ನಡೆಸುವುದು ಈಗ ಸುಲಭವಿತ್ತು. ಯುದ್ಧದಿಂದ ಯಾವ ಅಡ್ಡಿಯೂ ಇರಲಿಲ್ಲ. ಚುನಾವಣೆಯಿಂದ ವಾತಾವರಣ ತಿಳಿಗೊಂಡು ದೇಶದ ನಿಜವಾದ ಪ್ರಜಾಭಿಪ್ರಾಯ ಸ್ಪಷ್ಟವಾಗುತ್ತಿತ್ತು; ಬ್ರಿಟಿಷ್ ಅಧಿಕಾರಿಗಳಿಗೆ ಆ ಸತ್ಯ ಪರೀಕ್ಷೆ ಬೇಕಿರಲಿಲ್ಲ. ಏಕೆಂದರೆ ಅವರೇ ಸೃಷ್ಟಿಸಿದ ಬೇರೆಬೇರೆ ಪಕ್ಷ ಪ್ರತಿಪಕ್ಷಗಳ ಪ್ರೋತ್ಸಾಹಕ್ಕೆಂದು ಒಡ್ಡಿದ ಅವರ ಕೃತಕವಾದವೆಲ್ಲ ಬಯಲಾಗುತ್ತಿತ್ತು. ಆದ್ದರಿಂದ ಎಲ್ಲ ಚುನಾವಣೆಗಳಿಗೂ ತಿಲಾಂಜಲಿ ಇತ್ತರು. ಪ್ರಾಂತಗಳಲ್ಲಿ ಗವರ್ನರ್‌ನ ಏಕಾಧಿಪತ್ಯ ಮುಂದುವರಿಯಿತು. ಅಲ್ಪ ಮಿತಿಯ ಮತದಾನದಿಂದ ಮೂರುವರ್ಷಗಳಿಗೆ ಮಾತ್ರ ಚುನಾಯಿತವಾದ ಕೇಂದ್ರ ಶಾಸನ ಸಭೆ ಸಮಯಕ್ಕೆ ಅದರ ವಯಸ್ಸು ಮುಗಿದು ಎರಡು ವರ್ಷ ಜೀವದಾನ ಪಡೆದಿತ್ತು. ವರ್ಷನರ್ಷವೂ ಅದಕ್ಕೆ ಜೀವದಾನ; ಸದಸ್ಯರೆಲ್ಲ ಮುದುಕರಾಗಿ ಹೆಚ್ಚು ಗೌರವಾನ್ವಿತರಾಗಿದಾರೆ; ಚುನಾವಣೆಯ ಜ್ಞಾಪಕ ಸಹ ಮರೆತು ಹೋಗುತ್ತಿದೆ. ಬ್ರಿಟಿಷ್ ಸರಕಾರಕ್ಕೆ ಚುನಾವಣೆ ಬೇಕಿಲ್ಲ. ಅವರ ಜೀವನರೀತಿಗೆ ಅದು ಅಡ್ಡಿಯಾಗುತ್ತದೆ; ಭಾರತವು ಪರಸ್ಪರ ಕತ್ತು ಕುಯ್ಯುವ ಜಾತಿ ಮತಗಳ, ಪಕ್ಷಪ್ರತಿಪಕ್ಷಗಳ ಯುದ್ಧರಂಗವಾಗಿರಬೇಕೆಂಬ ಅವರ ಭಾರತದ ಕಲ್ಪನಾ ಚಿತ್ರಕ್ಕೆ ಭಂಗಬರುತ್ತದೆ. ಚುನಾವಣೆಗಳಿಲ್ಲದ ವೇಳೆ ತಾವು ಹೇಳಿದಂತೆ ಕೇಳುವ ಯಾವ ವ್ಯಕ್ತಿ ಅಥವ ಪಕ್ಷಕ್ಕಾದರೂ ಪ್ರಾಶಸ್ತ್ಯ ಕೊಡುವುದು ಸುಲಭ.
ಒಟ್ಟಿನಲ್ಲಿ, ದೇಶದ ಸಾಮಾನ್ಯ ಪರಿಸ್ಥಿತಿಯು, ಮುಖ್ಯವಾಗಿ ಗವರ್‌ಗಳ ಏಕಾಧಿಪತ್ಯವಿದ್ದ ಪ್ರಾಂತಗಳಲ್ಲಿ ದಿನೇ ದಿನೇ ವಿಷಮಿಸುತ್ತ ಬಂದಿತು. ತಮ್ಮ ದೈನಂದಿನ ಕಾರ್ಯಗಳಿಗಾಗಿ ಅನೇಕ ಕಾಂಗ್ರೆಸ್ ಸದಸ್ಯರು ಸೆರೆಮನೆ ಸೇರಿದರು. ಯುದ್ಧದ ನೆಪದಲ್ಲಿ ತಮ್ಮ ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಪೋಲಿಸರೂ ಸಣ್ಣ ಪುಟ್ಟ ಅಧಿಕಾರಿಗಳೂ ಎಲ್ಲ ರೀತಿಯಿಂದ ಜನರ ಸುಲಿಗೆಗಾರಂಭಿಸಿದರು. ಈ ಸುಲಿಗೆಯಿಂದ ಪಾರುಮಾಡಿರೆಂದು ರೈತರು ಬೊಬ್ಬೆ ಇಡಲಾರಂಭಿಸಿದರು. ಈ ಪರಿಸ್ಥಿತಿ ಎದುರಿಸಲು ಏನಾದರೂ ಕಾರ್ಯಕ್ರಮ ತೆಗೆದುಕೊಳ್ಳಬೇಕಾದ್ದು ಅನಿವಾರ್ಯವಾಯಿತು. ೧೯೪೦ರಲ್ಲಿ ಬಿಹಾರದ ರಾಮಘಡದಲ್ಲಿ ಮೌಲಾನ ಅಬ್ದುಲ್ ಕಲಾಮ್ ಅಜಾದ್ ಅಧ್ಯಕ್ಷತೆಯಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಶಾಸನ ಭಂಗ ಚಳುವಳಿಯಲ್ಲದೆ ಬೇರೆ ಉಪಾಯವಿಲ್ಲವೆಂದು ಕಾಂಗ್ರೆಸ್ ತೀರ್ಮಾನಿಸಿತು. ಆದರೂ ನೇರ ಚಳವಳಿಯನ್ನೇ ಆರಂಭಿಸದೆ ಜನರಿಗೆ ಸಿದ್ಧರಾಗಲು ಹೇಳಿತು.
ದೇಶದೊಳಗೆ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತ ಹೋರಾಟ ಅನಿವಾರ್ಯವೆಂದು ಸ್ಪಷ್ಟವಾಗುತ್ತ ಬಂದಿತು. ಯುದ್ಧಕ್ಕೆಂದು ಮಾಡಿದ ಭಾರತ ರಕ್ಷಣಾಶಾಸನವನ್ನು ಜನರ ಸಾಮಾನ್ಯ ಚಟುವಟಿಕೆಗಳ ವಿರುದ ಉಪಯೋಗಿಸಿ ಅನೇಕರನ್ನು ಯಾವ ವಿಚಾರಣೆಗೂ ಇಲ್ಲದೆ ಸೆರೆಮನೆಗೆ ಅಟ್ಟಿದರು.