ಈ ಪುಟವನ್ನು ಪ್ರಕಟಿಸಲಾಗಿದೆ

೪o೮

ಭಾರತ ದರ್ಶನ

ಹಿಮಾಚಲ ಪರ್ಯ೦ತ, ಸ್ಪಷ್ಟವಾದ, ಒಂದೇ ಬಗೆಯ ನಾಗರಿಕತೆ ಬೆಳೆಯಿತು; ಅದರ ವಿಸ್ತರಣಕ್ಕೂ, ಪ್ರಗತಿಗೂ ಬೇಕಾದಷ್ಟು ಅವಕಾಶ ದೊರೆಯಿತು; ಮತ್ತು ಭದ್ರವಾದ ಒಂದು ಸಾಂಸ್ಕೃತಿಕ ಐಕ್ಯತೆಯನ್ನೂ ಕಾಪಾಡಿಕೊಂಡು ಬಂದಿತು. ಆದರೆ ಈ ಐಕ್ಯತೆಯಲ್ಲಿ ಅದೇ ಭೂಗೋಲವು ಭಿನ್ನತೆಯನ್ನೂ ತಂದಿತು. ಉತ್ತರ ಮತ್ತು ಮಧ್ಯ ಭಾರತದ ವಿಶಾಲವಾದ ಮೈದಾನಕ್ಕೂ ದಕ್ಷಿಣದ ಪರ್ವತ ಪ್ರದೇಶ ಮತ್ತು ಇತರ ಭಾಗಗಳಿಗೂ ಬಹಳ ವ್ಯತ್ಯಾಸ ಬೆಳೆದವು. ಬೇರೆ ಬೇರೆ ಭೌಗೋಲಿಕ ಪ್ರದೇಶಗಳ ಜನರ ಸ್ವಭಾವಗಳು ಬೇರೆ ಬೇರೆಯಾದವು. ಕೆಲವು ವೇಳೆ ಒಟ್ಟು ಸೇರಿದರೂ ಉತ್ತರದ ಮತ್ತು ದಕ್ಷಿಣದ ಇತಿಹಾಸಗಳು ಬೇರೆ ಬೇರೆ ಆದವು. ಉತ್ತರದ ವಿಶಾಲ ಮೈದಾನಗಳಲ್ಲಿ ಪರಧಾಳಿಯ ರಕ್ಷಣೆಗೆ ರಷ್ಯದಂತೆ ಪ್ರಬಲ ದೊಡ್ಡ ಕೇಂದ್ರ ಸರಕಾರಗಳು ಅವಶ್ಯವಾದವು. ಉತ್ತರದಲ್ಲಿಯೂ ದಕ್ಷಿಣದಲ್ಲಿಯೂ ಚಕ್ರಾಧಿಪತ್ಯಗಳು ಹುಟ್ಟಿ ಬಾಳಿದವು. ಆದರೆ ಸಾಮ್ರಾಜ್ಯದ ಕೇಂದ್ರವು ಉತ್ತರದಲ್ಲಿ ಇದ್ದು ಅನೇಕಬಾರಿ ದಕ್ಷಿಣದ ಮೇಲೂ ತನ್ನ ಪ್ರಭಾವ ಬೀರಿತ್ತು. ಪುರಾತನ ಕಾಲದಲ್ಲಿ ಪ್ರಬಲ ಕೇಂದ್ರ ಸರಕಾರವೆಂದರೆ ನಿರಂಕುಶಾಧಿಕಾರ, ಇತರ ಕಾರಣಗಳಿದ್ದರೂ ಮರಾಠರು ಮೊಗಲ್ ಚಕ್ರಾಧಿಪತ್ಯ ಪುಡಿ ಪುಡಿ ಮಾಡಿದ್ದು ಕೇವಲ ಐತಿಹಾಸಿಕ ಆಕಸ್ಮಿಕವಲ್ಲ. ಮರಾಠರು ದಕ್ಷಿಣದ ಪರ್ವತ ಪ್ರದೇಶಗಳ ಕಟ್ಟಾಳುಗಳು. ಉತ್ತರದ ಮೈದಾನಗಳ ಜನರಲ್ಲಿ ಅನೇಕರು ದಾಸ್ಯಜೀವನದಿಂದ ಮೆತ್ತಗಾಗಿದ್ದರೂ ಈ ಪರ್ವತ ಪ್ರದೇಶದ ಜನರು ಸ್ವಾತಂತ್ರ್ಯ ಪ್ರಿಯರೂ, ಧೈರ್ಯಶಾಲಿಗಳೂ ಆಗಿದ್ದರು. ಬಂಗಾಲದಲ್ಲಿ, ಉತ್ತರ ಭಾರತದ ಮೈದಾನ ಪ್ರದೇಶಗಳಲ್ಲಿ ಬ್ರಿಟಿಷರು ಬಹು ಬೇಗ ತಮ್ಮ ರಾಜ್ಯ ಸ್ಥಾಪಿಸಿದರು. ಅಲ್ಲಿ ಮೊದಲು ಭದ್ರಮಾಡಿಕೊಂಡು ಅನಂತರ ಬೇರೆ ಕಡೆ ತಿರುಗಿದರು.

ಈಗಲೂ, ಮುಂದೆಯೂ, ಭೌಗೋಲಿಕ ವ್ಯತ್ಯಾಸಗಳಿಗೆ ಪ್ರಾಮುಖ್ಯತೆ ಇದ್ದೇ ಇದೆ; ಆದರೆ ಈಗ ಇನ್ನು ಬೇರೆ ಕೆಲವು ಕಾರಣಗಳಿಗೆ ವಿಶೇಷ ಪ್ರಾಮುಖ್ಯತ ಬಂದಿದೆ. ಪರ್ವತಗಳು ಸಮುದ್ರಗಳು ಈಗ ಅಭೇದ್ಯ ರಕ್ಷಣೆಗಳಲ್ಲ, ಆದರೆ ಜನರ ಸ್ವಭಾವವನ್ನು, ದೇಶದ ಆರ್ಥಿಕ ಮತ್ತು ರಾಜಕೀಯ ಸ್ಥಾನವನ್ನು ನಿರ್ಧರಿಸುತ್ತವೆ. ವಿಚ್ಛೇದನ ವಿಭಜನೆ ಅಥವ ಸೇರ್ಪಡೆಯ ಹೊಸ ಯೋಜನೆ ಯೋಚಿಸುವಾಗ ಪ್ರಪಂಚದ ಸಮಗ್ರ ದೃಷ್ಟಿಯಿಂದ ಆ ಯೋಜನೆ ಇಟ್ಟುಕೊಳ್ಳಬೇಕು; ಮತ್ತು ಭೌಗೋಲಿಕ ವ್ಯತ್ಯಾಸಗಳನ್ನು ಲಕ್ಷಿಸಬೇಕು.

ಭಾರತದ ಮತ್ತು ಭಾರತೀಯರ ವಿಷಯದಲ್ಲಿ ಗಾಂಧಿಜಿಯ ಜ್ಞಾನ ಅದ್ಭುತವಾದುದು. ಇತಿಹಾಸದಲ್ಲಿ ಆಸಕ್ತಿ, ಇತಿಹಾಸದ ಅಭಿಮಾನ, ಇತರರಂತೆ ಐತಿಹಾಸಿಕ ದೃಷ್ಟಿ ಅವರಲ್ಲಿ ಇರದಿದ್ದರೂ, ಭಾರತೀಯರ ಐತಿಹಾಸಿಕ ಮೂಲ ಎಲ್ಲಿದೆ ಎಂದು ಅವರು ಸಂಪೂರ್ಣ ಅರಿತಿದಾರೆ. ಪ್ರಚಲಿತ ವಿಷಯವನ್ನು ಅವರು ಚೆನ್ನಾಗಿ ತಿಳಿದುಕೊಂಡು ಅವುಗಳ ಗತಿಯನ್ನು ಬಿಡದೆ ಸದಾ ಅವಲೋಕಿಸುತ್ತಿದ್ದಾರೆ. ಆದರೆ ಅವರ ಗಮನವೆಲ್ಲ ಭಾರತದ ಇಂದಿನ ಸಮಸ್ಯೆಗಳ ಕಡೆಗೇ ಹೆಚ್ಚು. ಒಂದು ಸಮಸ್ಯೆಯ ಅಥವ ಸನ್ನಿವೇಶದ ತಿರುಳು ಮಾತ್ರ ಗ್ರಹಿಸಿ ಜಳ್ಳು ತೂರುವ ಶಕ್ತಿ ಅವರಿಗೆ ಇದೆ. ಪ್ರತಿಯೊಂದು ಸಮಸ್ಯೆಯನ್ನೂ ನೈತಿಕ ದೃಷ್ಟಿಯಿಂದ ಅವರು ನಿರ್ಧರಿಸುವುದರಿಂದ ಅವರಿಗೆ ಒಂದು ಹಿಡಿತವೂ, ದೂರದೃಷ್ಟಿಯೂ ಇದೆ. ಗಾಂಧೀಜಿ ಅಚಾತುರದಿಂದ ತಪ್ಪು ಬೇಕಾದಷ್ಟು ಮಾಡಬಹುದು, ಆದರೆ ಅವರ ಮುಖ್ಯ ಮಾರ್ಗ ಯಾವಾಗಲೂ ಸರಿ, ಎಂದು ಬಾರ್ಡ್ಷಾ ಹೇಳಿದ್ದಾನೆ. ಅನೇಕರಿಗೆ ಆ ದೂರದ ಯೋಚನೆ ಬೇಕಿಲ್ಲ; ಅವರಿಗೆ ಬೇಕಾಗಿರುವುದು ಚಾತುರದ ತಾತ್ಕಾಲಿಕ ಲಾಭ.

೮. ಭಾರತಕ್ಕೆ ಸರ್ ಸ್ಟಾಫರ್ಡ್ ಕ್ರಿಪ್ಸ್ ಆಗಮನ

ಪೆನಾಂಗ್ ಮತ್ತು ಸಿಂಗಪುರ ಆಕ್ರಮಿಸಿ ಜಪಾನರು ಮಲಯಾದಲ್ಲಿ ಮುಂದುವರಿಯುತ್ತ ಬಂದಂತೆ ಭಾರತೀಯರೂ ಮತ್ತು ಇತರರೂ ಅಲ್ಲಿಂದ ಕಾಲುಕಿತ್ತು ಭಾರತದೊಳಗೆ ನುಗ್ಗಲಾರಂಭಿಸಿದರು. ಮೈಮೇಲಿನ ಬಟ್ಟೆ ಬಿಟ್ಟು ಬೇರೆ ಏನನ್ನೂ ತರಲು ಅವರಿಗೆ ಅವಕಾಶವಾಗಲಿಲ್ಲ. ಅನಂತರ ಬರದಿಂದ ಲಕ್ಷಗಟ್ಟಲೆ