ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೪೦೯

ಜನರ, ಮುಖ್ಯವಾಗಿ ಹೆಚ್ಚು ಭಾರತೀಯ ನಿರಾಶ್ರಿತರ ಪ್ರವಾಹ ಆರಂಭವಾಯಿತು. ಆಡಳಿತವರ್ಗ ಮತ್ತು ಇತರ ಅಧಿಕಾರಿಗಳು ಅವರನ್ನು ಕೈಬಿಟ್ಟ ಕರುಣಾಜನಕ ಕಥೆಯೂ, ಭಾರತದಲ್ಲಿ ಅವರು ನೆಲೆ ಸಿಕ್ಕಿದಲ್ಲಿ ಹರಡಿಕೊಳ್ಳಬೇಕಾದ ಕಥೆಯೂ ಮನೆಮಾತಾದವು. ಅನೇಕರು ಪರ್ವತಗಳ ಗಿರಿಕಂದರಗಳಲ್ಲಿ, ಅಗಮ್ಯ ಅರಣ್ಯಗಳಲ್ಲಿ, ಶತ್ರುಗಳಿಂದ ಸುತ್ತುವರಿಯಲ್ಪಟ್ಟು, ಭಯದಿಂದಲೋ ದಾರಿಯಲ್ಲಿ ಚೂರಿಯ ಇರಿತದಿಂದಲೋ, ಹಸಿವಿನಿಂದಲೋ, ರೋಗಗಳಿಗೆ ತುತ್ತಾಗಿಯೋ ಸಾವುನೋವುಗಳಿಗೆ ಬಲಿಯಾಗಿ ಉಳಿದವರು ನೂರಾರು ಮೈಲುಗಳು ಕಾಲುನಡಗೆ ನಡೆದು ಭಾರತ ಸೇರಿದ್ದರು. ಯುದ್ಧದ ಪರಿಣಾಮವಾದ್ದರಿಂದ ಅದನ್ನು ಅನುಭವಿಸುವುದೂ ಅನಿವಾರ್ಯವಾಯಿತು. ಆದರೆ ಬ್ರಿಟಿಷ್ ನಿರಾಶ್ರಿತರಿಗೂ, ಭಾರತೀಯ ನಿರಾಶ್ರಿತರಿಗೂ ಭೇದ ಮಾಡಿದ್ದು ಯುದ್ದವಲ್ಲ. ಬ್ರಿಟಷ್ ನಿರಾಶ್ರಿತರಿಗೆ ಅಧಿಕಾರಿಗಳು ಸಾಧ್ಯವಾದ ಎಲ್ಲ ರಕ್ಷಣೆ ಕೊಟ್ಟು ಅವರ ಪ್ರಯಾಣಕ್ಕೆ ಮತ್ತು ಸಹಾಯಕ್ಕೆ ಎಲ್ಲ ಏರ್ಪಾಡನ್ನೂ ಮಾಡಿದರು. ಬರದ ನಿರಾಶ್ರಿತರ ಠಾಣೆಯಿಂದ ಭಾರತಕ್ಕೆ ಎರಡು ದಾರಿಗಳಿದ್ದವು. ಸುಗಮವಾದ ದಾರಿ ಬ್ರಿಟಿಷರಿಗೂ ಯೂರೋಪಿಯನರಿಗೂ ಮೀಸಲಾಗಿ "ಶ್ವೇತಮಾರ್ಗ" ಎಂದು ಹೆಸರಾಯಿತು.

ಈ ವರ್ಣಭೇದ ಮತ್ತು ಸಂಕಟದ ದುರಂತ ಕಥೆಗಳು ನಮ್ಮ ಕಿವಿಗೂ ಮುಟ್ಟಿದವು. ಸತ್ತು ಕೆಟ್ಟು ಉಳಿದ ಜನರು ಭಾರತದ ಆದ್ಯಂತ ಹರಡಿಕೊಂಡು ಅವರ ದಾರುಣ ಕಥೆಗಳನ್ನು ಜನ ಸಾಮಾನ್ಯರಲ್ಲಿ ಹರಡಿದರು. ಭಾರತೀಯರ ಮನಸ್ಸು ಕಲಕಿ ತಲ್ಲಣಿಸಿತು.

ಯುದ್ಧ ಕಾಲದ ಬ್ರಿಟಿಷ್ ಮಂತ್ರಿ ಸಂಪುಟದ ಸಲಹೆಗಳನ್ನು ತೆಗೆದುಕೊಂಡು ಸರ್ ಸ್ಟಾಫರ್ ಕ್ರಿಪ್ಸ್ ಭಾರತಕ್ಕೆ ಬಂದುದು ಇದೇ ಸಮಯದಲ್ಲಿ. ಕಳೆದ ಎರಡೂವರೆ ವರ್ಷಗಳಿಂದ ಈ ಸಲಹೆಗಳ ಮೇಲೆ ಪೂರ್ಣ ಚರ್ಚೆಯಾಗಿ ಈಗ ಅವು ಇತಿಹಾಸದ ಮಾತು ಆಗಿವೆ. ಆ ಸಲಹೆಗಳ ಸಂಬಂಧದಲ್ಲಿ ನಡೆದ ಸಂಧಾನಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದ ನನಗೆ ಹೇಳಬೇಕಾದ ವಿವರಗಳನ್ನೆಲ್ಲ ಭವಿಷ್ಯಕ್ಕೆ ಬಿಡದೆ ಇಲ್ಲಿಯೇ ವಿವರಿಸುವದು ಬಹುಕಷ್ಟ. ಆಗ ಒದಗಿದ ಎಲ್ಲ ಮುಖ್ಯ ಸಮಸ್ಯೆಗಳೂ ವಿಷಯಗಳೂ ಜನರಿಗೆ ಸಂಪೂರ್ಣ ತಿಳಿದಿವೆ.

ನಾನು ಆ ಸಲಹೆ ಮೊಟ್ಟ ಮೊದಲು ಓದಿದೊಡನೆ ನನ್ನ ಮನಸ್ಸು ಪಾತಾಳಕ್ಕೆ ಇಳಿದುಹೋಯಿತು. ಸರ್ ಸ್ಟಾಫರ್ಡ್ ಕ್ರಿಪ್ಸ್ ನಿಂದ ಮತ್ತು ಅಂದಿನ ಪರಿಸ್ಥಿತಿಯಿಂದ ಇನ್ನೂ ಹೆಚ್ಚು ಔದಾರ ನಿರೀಕ್ಷಿಸಿದ್ದೆ. ಆ ಸಲಹೆ ಓದಿದಷ್ಟೂ, ಅವುಗಳ ಪರಿಣಾಮ ಯೋಚಿಸಿದಷ್ಟೂ ಜಿಗುಪ್ಸೆ ಇನ್ನೂ ಹೆಚ್ಚಾಯಿತು. ಭಾರತದ ಇತಿಹಾಸ ಅರಿಯದವನಿಗೆ ಆ ಸಲಹೆಗಳು ಬಹು ಉದಾರವೆಂದು ತೋರಬಹುದು. ಆದರೆ ಬಿಡಿಬಿಡಿಸಿ ನೋಡಿದಷ್ಟೂ ಅದರಲ್ಲಿ ತೊಡಕುಗಳೇ ಕಂಡವು. ಆತ್ಮ ನಿರ್ಣಯದ ಹಕ್ಕಿಗೆ ವಿಶೇಷ ನಿರ್ಬಂಧಗಳಿದ್ದ ಕಾರಣ ನಮ್ಮ ಭವಿಷ್ಯಕ್ಕೇ ಗಂಡಾಂತರವಿತ್ತು.

ಸಲಹೆಗಳೆಲ್ಲ ಯುದ್ಧಾನಂತರ ಭಾರತದ ಭವಿಷ್ಯವೇನು ಎಂಬ ಮುಖ್ಯ ವಿಷಯ ಇದ್ದವು; ಪ್ರಕೃತ ವಿಷಯದಲ್ಲಿ ಕೊನೆಯ ಒಂದು ವಾಕ್ಯದಲ್ಲಿ ಸಹಕಾರ ಮಾತ್ರ ಕೋರಲಾಗಿತ್ತು. ಆ ಭವಿಷ್ಯದಲ್ಲಿ ಆತ್ಮ ನಿರ್ಣಯದ ಅಧಿಕಾರ ಸಾರಿದ್ದರೂ ಭಾರತದ ಒಕ್ಕೂಟ ಸೇರದೆ ಪ್ರತ್ಯೇಕ ಸ್ವತಂತ್ರ ರಾಷ್ಟ್ರ ನಿರ್ಮಿಸಲು ಪ್ರಾಂತಗಳಿಗೆ ಸ್ವಾತಂತ್ರ ಕೊಡಲಾಗಿತ್ತು. ಭಾರತದ ಒಕ್ಕೂಟಕ್ಕೆ ಸೇರದೆ ಇರಬಹುದಾದ ಈ ಸ್ವಾತಂತ್ರ್ಯದೇಶೀಯ ಸಂಸ್ಥಾನಗಳಿಗೂ ಲಭಿಸಿತು. ಭಾರತದಲ್ಲಿ ಆರುನೂರು ಸಂಸ್ಥಾನಗಳಿವೆ; ದೊಡ್ಡ ಕೆಲವನ್ನು ಬಿಟ್ಟರೆ ಉಳಿದವುಗಳೆಲ್ಲ ಭಾರತದ ಮಧ್ಯೆ ಹರಡಿರುವ ಸಣ್ಣ ಸಣ್ಣ ನಡುಗುಡ್ಡೆಗಳು, ಈ ಸಂಸ್ಥಾನಗಳು, ಪ್ರಾಂತಗಳು ಭಾರತ ಸಂವಿಧಾನ ರಚನೆಯಲ್ಲಿ ಮೊದಲು ಭಾಗವಹಿಸಿದರೂ ಆಮೇಲೆ ಅದರಿಂದ ಹೊರನಿಲ್ಲಬಹುದು. ಆರಂಭದ ಪೂರ್ಣ ಹಿನ್ನೆಲೆ ಎಲ್ಲ ಪ್ರತ್ಯೇಕ ಭಾವನೆಯ ಹಿನ್ನೆಲೆ. ದೇಶದ ನಿಜವಾದ ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಗಳಿಗೆ ಎರಡನೆಯ ಸ್ಥಾನ. ತಮ್ಮತಮ್ಮಲ್ಲಿ ಭಿನ್ನಾಭಿಪ್ರಾಯವಿದ್ದರೂ, ಪ್ರತಿಗಾಮಿ ಶಕ್ತಿಗಳೆಲ್ಲ ಒಟ್ಟುಗೂಡಿ ಬಲಯುತ ಪ್ರಗತಿಪರ ರಾಷ್ಟ್ರೀಯ ಒಕ್ಕೂಟ ಸರಕಾರ ಸ್ಥಾಪನೆಗೆ ಅಡ್ಡ ಬರಲು ಅವಕಾಶವಿತ್ತು. ಸದಾ ಒಂದು ಕಾಲು ಹೊರಗಿಟ್ಟು ಹೆದರಿಸುತ್ತ, ಸಂವಿಧಾನದಲ್ಲಿ ಅನೇಕ ಅನಪೇಕ್ಷಣೀಯ ವಿಧಿಗಳನ್ನು ಒತ್ತಾಯದಿಂದ ಸೇರಿಸಿ, ಕೇಂದ್ರವನ್ನು

30