ಸಾಧಿಸುತ್ತೇನೆಂದರೆ ಸಾಧ್ಯವಾಗುವುದಿಲ್ಲ. ಹೊಸ ಆದರ್ಶ ಅನುಸರಿಸಬೇಕಾದ್ದು ಅನಿವಾರ್ಯ ಆದರೆ ಅವು ಹಿಂದಿನ ಆದರ್ಶಗಳ ಸಮೀಕರಣವಾಗಿರಬೇಕು. ಆಗ ಕೆಲವು ವೇಳೆ ಹೊಸದು ತೀರ ಭಿನ್ನವಾದರೂ ಅದು ಹಿಂದಿನ ಆದರ್ಶಗಳ ಮೇಲೆಯೇ ರಚಿತವಾದಂತೆ ತೋರಿ ಪ್ರಗತಿಯು ಹಿಂದಿನಿಂದ ಹರಿದು ಬಂದ ಅವಿಚ್ಛಿನ್ನವಾಹಿನಿಯೋ ಏನೋ ಎಂಬ ಭಾವನೆ ಹುಟ್ಟುತ್ತದೆ. ಮತ್ತು ಮಾನವ ಕುಲದ ಇತಿಹಾಸಪರಂಪರೆಯಲ್ಲಿ ಒಂದು ಘಟ್ಟ ವಾಗುತ್ತದೆ. ಈ ರೀತಿ ಹಳೆಯ ಭಾವನೆಗಳನ್ನು ಹೊಸ ಸನ್ನಿವೇಶಕ್ಕೆ, ಹಳೆಯ ಆದರ್ಶಗಳನ್ನು ಹೊಸ ಆದರ್ಶಗಳಿಗೆ ಪರಂಪರಾನುಗತಅಣಿಗೊಳಿಸಿ ಬೆಳೆಸಿದ ಪರಿವರ್ತನೆಗಳ ಅದ್ಭುತ ಕಥೆಯೇ ಭಾರತದ ಇತಿಹಾಸ. ಆದ್ದರಿಂದ ನಮ್ಮ ಸಂಸ್ಕೃತಿವಾಹಿನಿಯಲ್ಲಿ ಯಾವ ಭಗ್ನತೆಯೂ ಇಲ್ಲ. ಮೊಹೆಂಜೊದಾರೊ ಯುಗದಿಂದ ಇಂದಿನವರೆಗೆ ಅನೇಕ ಪರಿವರ್ತನೆಗಳಾಗಿದ್ದರೂ ಒಂದು ಅನಂತ ವಾಹಿನಿ ಪ್ರವಹಿಸಿದೆ. ಸನಾತನತೆಗೂ ಸನಾತನ ಸಂಪ್ರದಾಯಗಳಿಗೂ ಗೌರವವಿತ್ತು, ಆದರೆ ಮನಸ್ಸಿನ ಸ್ವಾತಂತ್ರ್ಯಕ್ಕೆ ಮತ್ತು ನಮ್ರತೆಗೆ ಅವಕಾಶವಿತ್ತು ಮತ್ತು ಆತ್ಮ ಸಹಿಷ್ಣುತೆ ಇತ್ತು. ಬಾಹ್ಯರೂಪ ಅದೇ ಉಳಿದರೂ ಅಂತಸ್ಸತ್ವ ಮಾತ್ರ ಈ ರೀತಿ ಪರಿವರ್ತನಗೊಳ್ಳುತ್ತಲೇ ಇತ್ತು, ಹಾಗಿರದಿದ್ದರೆ ಆ ಸಮಾಜ ಸಹಸ್ರಾರು ವರ್ಷಕಾಲ ಉಳಿದು ಬಾಳಲು ಸಾಧ್ಯ ಇರುತ್ತಿರಲಿಲ್ಲ. ಚೈತನ್ಯ ಯುಕ್ತ ಪ್ರಗತಿಪರ ಮನಸ್ಸು ಮಾತ್ರ ಸಾಂಪ್ರದಾಯಕ ರೂಪಗಳ ಕಾಠಿಣ್ಯತೆ ನಿವಾರಿಸಿಕೊಳ್ಳಬಲ್ಲುದು; ಮತ್ತು ಆ ಸಂಪ್ರದಾಯಗಳೇ ಒಂದು ಅವಿಚ್ಛಿನ್ನತೆ ಮತ್ತು ಭದ್ರತೆ ಕೊಡಬಲ್ಲುವು.
ಆದರೂ ಸಮತೂಕಕ್ಕೆ ಅಪೋಹ ಬಂದು ಒಂದು ದೃಷ್ಟಿ ಇನ್ನೊಂದನ್ನು ಅಡ್ಡ ತಡೆದು ಸ್ವಲ್ಪ ಅದು ಮಲೂಬಹುದು. ಸಮಾಜದ ಕೆಲವು ಕಠಿಣ ಬಂಧನಗಳಿದ್ದರೂ ಮನಸ್ಸಿನ ಸ್ವಾತಂತ್ರ್ಯಕ್ಕೆ ಮತ್ತು ವಿಕಾಸಕ್ಕೆ ಭಾರತದಲ್ಲಿ ಯಾವ ಮಿತಿಯೂ ಇರಲಿಲ್ಲ. ಕ್ರಮೇಣ ಈ ಸಮಾಜ ಬಂಧನಗಳು ಮನಸ್ಸಿನ ಸ್ವಾತಂತ್ರ್ಯಕ್ಕೆ ಸಹ ಅಡ್ಡಿ ಬಂದು ತತ್ತ್ವಶಃ ಇಲ್ಲದಿದ್ದರೂ ವಾಸ್ತವಿಕವಾಗಿ ಮನಸ್ಸಿನ ಕಾಠಿಣ್ಯವನ್ನು ಹೆಚ್ಚಿಸಿ ಮಿತಿಯನ್ನು ಸಂಕುಚಿತಗೊಳಿಸಿದವು. ಪಾಶ್ಚಾತ್ಯ ಯೂರೋಪಿನಲ್ಲಿ ಆ ಬಗೆಯ ಮಾನಸಿಕ ಸ್ವಾತಂತ್ರ್ಯ ಯಾವುದೂ ಇರಲಿಲ್ಲ; ಸಾಮಾಜಿಕ ಕಟ್ಟುಗಳೂ ಕಠಿಣವಿರಲಿಲ್ಲ. ಮನೋಸ್ವಾತಂತ್ರ್ಯಕ್ಕಾಗಿ ಯೂರೋಪಿನಲ್ಲಿ ಬಹು ಧೀರ್ಘಕಾಲ ಹೋರಾಡಬೇಕಾಯಿತು. ಅದರ ಪರಿಣಾಮವಾಗಿ ಸಮಾಜ ಬಂಧನಗಳೂ ಪರಿವರ್ತನೆಯಾದವು.
ಚೀನಾದಲ್ಲಿ ಭಾರತಕ್ಕಿಂತ ಮನಸ್ಸಿನ ನಮ್ರತೆ ಹೆಚ್ಚು; ಸಂಪ್ರದಾಯ ಪ್ರೇಮ ಮತ್ತು ಶರಣತೆ ಎಷ್ಟೇ ಪ್ರಬಲವಿದ್ದರೂ ಮನಸ್ಸಿನ ನಮ್ರತೆ ಮತ್ತು ಸಹನ ಶಕ್ತಿ ಎಂದೂ ಕಡಮೆಯಾಗಲಿಲ್ಲ. ಸಂಪ್ರದಾಯ ಶರಣತೆಯಿಂದ ಪರಿವರ್ತನೆಗೊಳ್ಳಲು ಸ್ವಲ್ಪ ಕಾಲ ಹಿಡಿಯಿತು; ಆದರೆ ಪರಿವರ್ತನೆಯ ಭಯ ಮನಸ್ಸಿಗೆ ಸ್ವಲ್ಪವೂ ಆಗಲಿಲ್ಲ; ಮತ್ತು ಆ ಪರಿವರ್ತನೆಯೂ ಹಳೆಯ ರೂಪದಲ್ಲೇ ಬಂದಿತು. ಚೀನೀ ಸಮಾಜದಲ್ಲಿ ಭಾರತಕ್ಕಿಂತ ಹೆಚ್ಚಾಗಿ ಬಹುಕಾಲ ಬಾಳಿದ ಒಂದು ಸಮತೋಲನೆಯನ್ನೂ ಅಂಗ ಸೌಷ್ಠವವನ್ನೂ ಅವರು ನಿರ್ಮಿಸಿದರು. ಪ್ರಾಯಶಃ ಚೀನಾಕ್ಕೆ ಇದ್ದ ಮುಖ್ಯ ಅನುಕೂಲತೆ ಎಂದರೆ ಸಂಕುಚಿತ ವ್ಯಾಪ್ತಿರಹಿತ ಮತದೃಷ್ಟಿ ಮತ್ತು ಮತಾಂಧತೆಗಳಿಂದ ಅದು ಪೂರ್ಣ ಸ್ವತಂತ್ರವಿದ್ದುದು ಮತ್ತು ವಿಚಾರ ಶಕ್ತಿ ಮತ್ತು ವಿವೇಕಪರತೆಯನ್ನೇ ಆಧಾರ ಇಟ್ಟುಕೊಂಡುದು. ಅಷ್ಟು ಕಡಮೆ ಧರ್ಮಾವಲಂಬಿಯಾದ ಸಂಸ್ಕೃತಿ ಬೇರಾವ ದೇಶದಲ್ಲೂ ಇಲ್ಲ. ಸದ್ಗುಣಗಳಿಗೆ, ನೀತಿಶಾಸ್ತ್ರಕ್ಕೆ ಬಹುಮುಖ ಮಾನವ ಜೀವನದ ಅಂತರಾರ್ಥಕ್ಕೆ ಅಷ್ಟು ಬೆಲೆ ಯಾವ ದೇಶವೂ ಕೊಟ್ಟಿಲ್ಲ.
ವ್ಯವಹಾರದಲ್ಲಿ ಅತ್ಯಲ್ಪವೆಂದರೂ ಮನೋಸ್ವಾತಂತ್ರ್ಯಕ್ಕೆ ಭಾರತದಲ್ಲಿ ಬಹಳ ಬೆಲೆ ಇದ್ದುದರಿಂದ ಹೊಸ ಭಾವನೆಗಳಿಗೆ ತಡೆ ಇರಲಿಲ್ಲ. ಜೀವನ ಕಾಠಿಣ್ಯವೂ ಮತಾಂಧ ದೃಷ್ಟಿಯೂ ಬಹಳವಿದ್ದ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇಲ್ಲಿ ವಿಚಾರ ವಿನಿಮಯಕ್ಕೂ, ಸ್ವೀಕಾರಕ್ಕೂ ಅವಕಾಶವಿತ್ತು. ಭಾರತ ಸಂಸ್ಕೃತಿಯ ಮೂಲ ತತ್ವಗಳಲ್ಲಿ ವಿಶಾಲ ದೃಷ್ಟಿ ಇದೆ. ಯಾವ ಸನ್ನಿವೇಶಕ್ಕಾದರೂ ಅವು ಹೊಂದಿಕೊಳ್ಳುತ್ತವೆ. ಹತ್ತೊಂಭತ್ತನೆಯ ಶತಮಾನದಲ್ಲಿ ಯೂರೋಪಿನ ಧರ್ಮ ಮತ್ತು ವಿಜ್ಞಾನಗಳಿಗೆ ನಡೆದ ಭಯಂಕರ ಹೋರಾಟಕ್ಕೆ ಭಾರತದಲ್ಲಿ ಆಸ್ಪದವಿರಲಿಲ್ಲ. ವೈಜ್ಞಾನಿಕ ಪ್ರಯೋಗಗಳ ಆಧಾರದ ಮೇಲೆ ರೂಪುಗೊಂಡ