ಈ ಪುಟವನ್ನು ಪ್ರಕಟಿಸಲಾಗಿದೆ
೪೬೮
ಭಾರತ ದರ್ಶನ

ಪರಿಣಾಮವಾಗಿ ಸಾಮ್ಯವಾದಿ ಪಕ್ಷ ಪಂಗಡಗಳು ಹುಟ್ಟಿಕೊಂಡವು. ಅನಂತರ ಈ ಪಂಗಡಗಳಿಗೂ ರಾಷ್ಟ್ರೀಯ ಶ್ರಮಜೀವಿಗಳ ಪಕ್ಷಗಳಿಗೂ ತಿಕ್ಕಾಟ ಆರಂಭವಾಯಿತು. ಸೋವಿಯಟ್ ರಷ್ಯದ ಪಂಚ ವಾರ್ಷಿಕ ಯೋಜನೆಗಳಿಂದ ಇನ್ನೊಂದು ಕುತೂಹಲ ಮತ್ತು ಉತ್ಸಾಹದ ಅಲೆ ಉಕ್ಕಿ ಬಂದಿತು. ಶ್ರಮ ಜೀವಿಗಳಿಗಿಂತ ಮಧ್ಯಮ ವರ್ಗದ ಪ್ರಜ್ಞಾಶಾಲಿಗಳ ಮೇಲೆ ಪ್ರಬಲ ಪರಿಣಾಮವಾಯಿತು. ಸೋವಿಯಟ್ ರಾಷ್ಟ್ರದಲ್ಲಿ ಕೆಲವರ ಮೇಲೆ ಉಗ್ರ ಕಾರ್ಯಕ್ರಮ ತೆಗೆದುಕೊಂಡು ಪಕ್ಷದಿಂದ ಹೊರದೂಡಿದಾಗ ಈ ಕಾವು ಸ್ವಲ್ಪ ತಣ್ಣಗಾಯಿತು. ಕೆಲವು ದೇಶಗಳಲ್ಲಿ ಸಾಮ್ಯವಾದಿ ಪಕ್ಷಗಳನ್ನು ಮಟ್ಟ ಹಾಕಿದರು ; ಇನ್ನು ಕೆಲವು ಕಡೆ ಅವು ಬೆಳೆಯಲು ಅವಕಾಶ ದೊರೆಯಿತು. ಆದರೆ ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ವ್ಯವಸ್ಥಿತ ರಾಷ್ಟ್ರೀಯ ಶ್ರಮಜೀವಿಗಳಿಗೂ ಅವರಿಗೂ ಘರ್ಷಣೆ ಅನಿವಾರ್ಯವಾಯಿತು. ಶ್ರಮಜೀವಿಗಳ ಪಕ್ಷದ ಸಾಂಪ್ರದಾಯಕ ನೀತಿಯೂ ಇದಕ್ಕೆ ಕಾರಣವಿರಬಹುದು. ಆದರೆ ಸಾಮ್ಯವಾದಿ ಪಕ್ಷ ವಿದೇಶೀ ಪಕ್ಷ, ಅದರ ಕಾರ್ಯ ನೀತಿ ಎಲ್ಲಾ ರಷ್ಯದಿಂದ ಪ್ರೇರಿತವಾದದ್ದು ಎಂಬ ಭಾವನೆ ಮುಖ್ಯ ಕಾರಣ. ಶ್ರಮ ಜೀವಿಗಳಲ್ಲಿ ಅನೇಕರಿಗೆ ಸಾಮ್ಯವಾದದ ಮೇಲೆ ಪ್ರೇಮವಿದ್ದರೂ ಸಾಮ್ಯವಾದಿಗಳ ಸಹಕಾರ ಪಡೆಯಲು ಅವರ ಉನ್ನತ ರಾಷ್ಟ್ರೀಯ ಭಾವನೆಯು ಅಡ್ಡ ಬಂದಿತು. ರಷ್ಯದ ವಿಶೇಷ ಪರಿಸ್ಥಿತಿ ಅರಿತವರಿಗೆ ಮಾತ್ರ ಅರ್ಥವಾಗುವ ಸೋವಿಯಟ್ ನೀತಿಯಲ್ಲಿನ ಅನೇಕ ವ್ಯತ್ಯಾಸಗಳು, ಇತರ ದೇಶಗಳ ಸಾಮ್ಯವಾದಿಗಳು ಅನುಸರಿಸ ಹೋದರೆ ಪೂರ್ಣ ಅರ್ಥ ಶೂನ್ಯವಾದವು. ರಷ್ಯಕ್ಕೆ ಉತ್ತಮವಾದುದೆಲ್ಲ ಇತರ ರಾಷ್ಟ್ರಗಳಿಗೂ ಉತ್ತಮ ಇರಲೇ ಬೇಕೆಂಬ ಪೂರ್ವಭಾವನೆಯಿಂದ ಹೊರಟರೆ ಮಾತ್ರ ಅರ್ಥವಾಗುತ್ತಿತ್ತು. ಈ ಸಾಮ್ಯವಾದಿ ಪಕ್ಷಗಳಲ್ಲಿ ಕೆಲವು ದಕ್ಷರೂ ತೀವ್ರ ಆಸಕ್ತರೂ ಆದ ಸ್ತ್ರೀಪುರುಷರಿದ್ದರೂ ಆ ಪಕ್ಷಗಳು ಜನರ ರಾಷ್ಟ್ರೀಯ ಭಾವನೆಗಳ ಸಂಪರ್ಕವಿಲ್ಲದೆ ಶಕ್ತಿಗುಂದಿದವು. ರಾಷ್ಟ್ರೀಯ ಪರಂಪರೆಯಿಂದ ಸೋವಿಯಟ್ ರಾಷ್ಟ್ರವು ಹೊಸ ಶಕ್ತಿ ಸಂಪಾದಿಸಿಕೊಳ್ಳುತ್ತಿದ್ದಾಗ ಇತರ ದೇಶಗಳ ಸಾಮ್ಯವಾದಿ ಪಕ್ಷಗಳು ರಾಷ್ಟ್ರೀಯ ಭಾವನೆಯಿಂದ ದೂರವಾಗುತ್ತಿದ್ದವು.

ಇತರ ಕಡೆಗಳಲ್ಲಿ ಹೇಗೋ ನಾನರಿಯೆ. ಆದರೆ ಭಾರತದ ಸಾಮ್ಯವಾದಿ ಪಕ್ಷ ಮಾತ್ರ ಜನರ ಮನಸ್ಸಿನಲ್ಲಿ ನೆಲೆಸಿರುವ ರಾಷ್ಟ್ರೀಯ ಪರಂಪರೆಯಿಂದ ಮಾತ್ರ ದೂರವಿದೆ, ಅದರ ಗಂಧ ಅವರಿಗೆ ಇಲ್ಲ. ಸಾಮ್ಯವಾದವೆಂದರೆ ಹಿಂದಿನದನ್ನೆಲ್ಲ ಹಳಿಯಬೇಕೆಂದು ಅವರ ಭಾವನೆ. ಪ್ರಪಂಚದ ಇತಿಹಾಸ ಅವರಿಗೆ ಆರಂಭವಾದುದು ೧೯೧೭ ರಿಂದ ಮಾತ್ರ. ಅದಕ್ಕೆ ಮುಂಚಿನದೆಲ್ಲ ಪೂರ್ವ ಸಿದ್ಧತೆಯ ಒಂದು ದಾರಿ ಮಾತ್ರ. ಸಾಮಾನ್ಯವಾಗಿ ಬಹುಜನ ಅರೆಹೊಟ್ಟೆಯಲ್ಲಿದ್ದು ಆರ್ಥಿಕ ರಚನೆ ಕುಸಿದು ಬೀಳುತ್ತಿರುವ ಭಾರತದಲ್ಲಿ ಸಾಮ್ಯವಾದದ ಬೆಳೆವಣಿಗೆಗೆ ಒಳ್ಳೆಯ ಅವಕಾಶ ದೊರೆಯಬೇಕು. ಒಂದು ದೃಷ್ಟಿಯಿಂದ ಅದಕ್ಕೆ ಒಂದು ರೀತಿಯ ಅಸ್ಪಷ್ಟ ಸಹಾನುಭೂತಿ ಇದೆ. ಆದರೆ ಅದರ ಉಪಯೋಗ ಪಡೆಯಲು ಭಾರತದ ಸಾಮ್ಯವಾದಿ ಪಕ್ಷಕ್ಕೆ ಶಕ್ತಿ ಇಲ್ಲ. ರಾಷ್ಟ್ರೀಯ ಭಾವನೆಯ ಧೃವಜಲದಿಂದ ಅದು ದೂರವಾಗಿರುವುದೇ ಮುಖ್ಯ ಕಾರಣ. ಹೃದಯದ ತಂತಿಯನ್ನು ಮಾಡಿ ಪ್ರತಿಧ್ವನಿ ಗೈದ ಭಾಷೆಯಲ್ಲಿ ಅದು ಮಾತನಾಡುತ್ತಿದೆ. ಶಕ್ತಿ ಇದ್ದರೂ ಅದು ಬುಡ ಭದ್ರವಿಲ್ಲದ ಒಂದು ಸಣ್ಣ ಗುಂಪು ಮಾತ್ರ.

ಭಾರತದಲ್ಲಿ ಬೇರು ಬಿಡದೆ ಸೋಲು ಪಡೆದಿರುವುದು ಸಾಮ್ಯವಾದಿ ಪಕ್ಷ ಒಂದೇ ಅಲ್ಲ. ನವೀನತೆ, ನವೀನ ರೀತಿಗಳು ಎಂದು ಸುಲಭ ಮಾತನಾಡುತ್ತ ನವೀನ ಯುಗಧಮ್ಮದ ನಿಜವಾದ ಅರಿವು ಲೇಶವೂ ಇಲ್ಲದೆ, ಪಾಶ್ಚಾತ್ಯ ಸಂಸ್ಕೃತಿಯ ತಿರುಳಿನ ಅಥವ ನಮ್ಮ ಸಂಸ್ಕೃತಿಯ ಪರಿಚಯ ಸಹ ಇಲ್ಲದ ಮಾತಿನ ಮಲ್ಲರೂ ಕೆಲವರಿದ್ದಾರೆ. ಸಾಮ್ಯವಾದಿಗಳಂತೆ ಮುಂದೂಡುವ ಒಂದು ಧ್ಯೇಯವಾಗಲಿ ಪ್ರೇರಕ ಶಕ್ತಿಯಾಗಲಿ ಅವರಿಗೆ ಇಲ್ಲ. ಪಾಶ್ಚಿಮಾತ್ಯದ ಬಾಹ್ಯರೂಪ ಮತ್ತು ಅಲಂಕಾರ ಮಾತ್ರ ಅನುಕರಿಸಿ ತಾವೇ ಪ್ರಗತಿಪರ ನಾಗರಿಕತೆಯ ಮುಂದಾಳುಗಳೆಂದು ಭಾವಿಸಿದ್ದಾರೆ. ಅಂಧರೂ ಅಲ್ಪಮತಿಗಳೂ ಆಗಿ ತಮ್ಮದೇ ಒಂದು ದುರಹಂಕಾರದಿಂದ ಪಾಶ್ಚಾತ್ಯ ಸಂಸ್ಕೃತಿ ಅಥವ ಪೌರ್ಸಾತ್ಯ ಸಂಸ್ಕೃತಿಯ ಯಾವ ಸಜೀವ ಸಂಪರ್ಕವೂ ಇಲ್ಲದೆ ಒಂದು ಕೃತಕ ಜೀವನ ನಡೆಸುವ ದೊಡ್ಡ ದೊಡ್ಡ ನಗರವಾಸಿಗಳು ಇವರು.

ಆದ್ದರಿಂದ ಹಿಂದಿನದನ್ನೆಲ್ಲ ಅನುಕರಿಸಿ ಅಥವ ಪೂರ್ ನಿರಾಕರಿಸಿ ರಾಷ್ಟ್ರೀಯ ಪ್ರಗತಿ