ಈ ಪುಟವನ್ನು ಪ್ರಕಟಿಸಲಾಗಿದೆ
ಪುನಃ ಅಹಮದ್ನಗರದ ಕೋಟೆಯಲ್ಲಿ
೪೮೧

ಕಾರ್ಯತಃ ಸ್ವಾತಂತ್ರ್ಯವೂ ಆತ್ಮ ವಿಕಾಸಕ್ಕೆ ಸಮಾನ ಅವಕಾಶವೂ ಇರಬೇಕು ಮಾತ್ರವಲ್ಲದೆ ಆ ಸ್ವಾತಂತ್ರ್ಯದ ಮತ್ತು ಸಮಾನತೆಯ ಅರಿವು ಅದಕ್ಕೆ ಉಂಟಾಗಬೇಕು. ನಮ್ಮ ಕೋಪಾವೇಶ ಬದಿಗಿಟ್ಟರೆ ವಿಚಾರ ಶೂನ್ಯ ಭಾವಾವೇಶ ಬಿಟ್ಟರೆ ಪ್ರಾಂತ ಮತ್ತು ಸಂಸ್ಥಾನಗಳಿಗೆ ಆದಷ್ಟು ಸ್ವಾತಂತ್ರ್ಯ ಕೊಟ್ಟು ಶಕ್ತಿಪೂರ್ಣ ಕೇಂದ್ರ ಸರಕಾರ ಒಂದನ್ನು ರಚಿಸಲು ಕಷ್ಟ ತೋರುವುದಿಲ್ಲ. ಸೋವಿಯಟ್ ರಷ್ಯದಲ್ಲಿರುವಂತೆ ದೊಡ್ಡ ದೊಡ್ಡ ಪ್ರಾಂತ ಮತ್ತು ಸಂಸ್ಥಾನಗಳಲ್ಲಿ ಸಹ ಆಡಳಿತ ಸ್ವಾತಂತ್ರವಿರುವ ಭಾಗಗಳು ಇರಲು ಅವಕಾಶವಿದೆ. ಇದರ ಜೊತೆಗೆ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಅವಶ್ಯ ತೋರುವ ಎಲ್ಲ ರಕ್ಷಣೆ ಮತ್ತು ಭರವಸೆಯನ್ನೂ ರಾಜ್ಯ ವಿಧಾನದಲ್ಲಿ ಸೇರಿಸಬಹುದು.

ಇದೆಲ್ಲ ಸಾಧ್ಯವಿದ್ದರೂ ಅನೇಕ ಅನಿಶ್ಚಿತ ಪ್ರಮೇಯ ಮತ್ತು ಶಕ್ತಿಗಳ ಪ್ರಭಾವದಿಂದ ಭವಿಷ್ಯ ಏನಾಗುವುದೊ ನಾನು ಹೇಳಲಾರೆ, ಅವುಗಳಲ್ಲಿ ಬ್ರಿಟಿಷ್ ನೀತಿ ಎಲ್ಲಕ್ಕಿಂತ ಅತ್ಯಂತ ಪ್ರಬಲವಾದುದು. ವಿಭಜಿತ ಪ್ರದೇಶಗಳಿಗೆ ಒಂದು ಸೂಕ್ಷ್ಮ ಸಂಬಂಧ ಕಲ್ಪಿಸಿ ಯಾವುದೋ ರೀತಿಯಲ್ಲಿ ಭಾರತದ ಮೇಲೆ ಬಲಾತ್ಕಾರದ ವಿಭಜನೆ ಹೊರಿಸಬಹುದು. ಆ ರೀತಿ ವಿಭಜನೆ ಆದ ಮೇಲೂ ಮೂಲ ಐಕ್ಯತೆಯ ಭಾವನೆಯಿಂದ, ಪ್ರಪಂಚದ ಘಟನೆಗಳ ಒತ್ತಡದಿಂದ ವಿಭಜಿತ ಭಾಗಗಳು ಕ್ರಮೇಣ ಪರಸ್ಪರ ಸಮಿಾಪ ಬಂದು ನಿಜವಾದ ಐಕ್ಯ ಬೆಳೆಯಬಹುದು.

ಭೂಗೋಲ, ಇತಿಹಾಸ, ಸಂಸ್ಕೃತಿ ಮತ್ತು ಎಲ್ಲ ದೃಷ್ಟಿಯಿಂದ ಈ ಐಕ್ಯತೆಯ ಅವಶ್ಯಕತೆ ಇದೆ. ಆದರೆ ಎಲ್ಲಕ್ಕೂ ಹೆಚ್ಚಿನ ಅವಶ್ಯಕತೆ ಎಂದರೆ ಪ್ರಪಂಚದ ಘಟನೆಗಳ ಪ್ರವೃತ್ತಿ ಭಾರತ ಒಂದು ಜನಾಂಗ ಎಂದೇ ನಮ್ಮಲ್ಲಿ ಅನೇಕರ ಭಾವನೆ. ಜನಾಬ್ ಜಿನ್ನಾ ಎರಡು ಜನಾಂಗಗಳ ತತ್ತ್ವವನ್ನು ಪ್ರತಿಪಾದಿಸಿ ಈಚೆಗೆ ಪ್ರತಿಯೊಂದು ಧಾರ್ಮಿಕ ಪಂಗಡವೂ ಒಂದೊಂದು ಉಪಜನಾಂಗವೆಂದು ಬೇರೆ ಸೇರಿಸಿದ್ದಾರೆ. ಅವನ ಭಾವನೆಯಲ್ಲಿ ಜನಾಂಗವೆಂದರೆ ಧರ್ಮ, ಆದರೆ ಇಂದಿನ ಜನಾಂಗದ ಅಭಿಪ್ರಾಯ ಪ್ರಪಂಚದಲ್ಲಿ ಅದಲ್ಲ. ಭಾರತ ಒಂದೋ ಎರಡೋ ಅಥವ ಹೆಚ್ಚಿ ಜನಾಂಗಗಳ ದೇಶವಾದರೂ ಬಾಧಕವಿಲ್ಲ; ಏಕೆಂದರೆ ರಾಜ್ಯತ್ವಕ್ಕೂ ರಾಷ್ಟ್ರೀಯತೆಗೂ ಸಂಬಂಧವಿಲ್ಲ. ರಾಷ್ಟ್ರೀಯ ರಾಜ್ಯ ಇಂದಿನ ಕಾಲಕ್ಕೆ ಬಹಳ ಸಣ್ಣ ರಾಜ್ಯ, ಸಣ್ಣ ರಾಜ್ಯಗಳು ಸ್ವತಂತ್ರ ಬಾಳಲು ಇಂದು ಸಾಧ್ಯವಿಲ್ಲ. ಆದ್ದರಿಂದ ರಾಷ್ಟ್ರೀಯ ರಾಜ್ಯಗಳು ಬಹು ರಾಷ್ಟ್ರೀಯ ರಾಜ್ಯಕ್ಕೆ ಅಥವ ದೊಡ್ಡ ಸಂಯುಕ್ತ ರಾಜ್ಯಗಳಿಗೆ ಸ್ಥಾನಕೊಡುತ್ತಿವೆ. ಸೋವಿಯಟ್ ರಷ್ಯ ಅದಕ್ಕೊಂದು ಉತ್ತಮ ನಿದರ್ಶನ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಬಲವತ್ತರ ರಾಷ್ಟ್ರೀಯ ಭಾವನೆಗಳಿದ್ದರೂ ಅನೇಕ ದೃಷ್ಟಿಯಿಂದ ಅದೂ ಒಂದು ಬಹುರಾಷ್ಟ್ರೀಯ ರಾಜ್ಯ, ಹಿಟ್ಲರನ ಯೂರೋಪ್ ದಾಳಿಯ ಹಿಂದೆ ನಾಜಿಗಳ ರಾಜ್ಯ ಸಂಪಾದನೆಯ ಆಸೆ ಮಾತ್ರವಲ್ಲದೆ ಬೇರೊಂದು ದೊಡ್ಡ ಭಾವನೆ ಇತ್ತು. ಯೂರೋಪಿನ ಸಣ್ಣ ರಾಜ್ಯಗಳ ವಿನಾಶವಾದುದು ಅನೇಕ ಪ್ರಬಲ ಶಕ್ತಿಗಳ ಪ್ರಭಾವದಿಂದ. ಹಿಟ್ಲರನ ಸೈನ್ಯಗಳು ಇಂದು ಕಾಲಿಗೆ ಬುದ್ಧಿ ಹೇಳಿ ವಿನಾಶದ ಕಡೆ ಓಡುತ್ತಿರಬಹುದು, ಆದರೆ ಅವರ ಬೃಹತ್ಸಂಯುಕ್ತ ರಾಷ್ಟ್ರ ಕಲ್ಪನೆ ಮಾತ್ರ ಇನ್ನೂ ಉಳಿದಿದೆ.

ಪ್ರಾಚೀನ ಧರ್ಮಸಂಸ್ಥಾಪಕರ ಉಜ್ವಲ ವಾಣಿಯಿಂದ “ಮಾನವತೆ ಇಂದು ಒಂದು ಯುಗಾಂತ್ಯದಲ್ಲಿದೆ ; ಮಾನವ ವ್ಯವಹಾರ ನಿರ್ವಹಣೆಯಲ್ಲಿ ಪ್ರತ್ಯೇಕ ವ್ಯಾಪಾರದ ಯುಗ ಮುಗಿಯಿತು, ರಾಜಕೀಯದಲ್ಲಿ ವಿಶಿಷ್ಟ ಪರಮಾಧಿಕಾರದ ಪ್ರತ್ಯೇಕ ಸಣ್ಣ ಸಣ್ಣ ರಾಜ್ಯಗಳ ಕಾಲ ಮುಗಿಯಿತು, ಲಾಭದಾಸೆಯ ಮಿತಿಯಿಲ್ಲದ ಪೈಪೋಟಿಯ ವ್ಯಾಪಾರ ಸಂಸ್ಥೆಗಳ ಆರ್ಥಿಕ ದೃಷ್ಟಿಯ ಕಾಲ ಆಯಿತು” ಎಂದು ಎಚ್.ಜಿ. ವೆಲ್ಸ್ ಪ್ರಪಂಚಕ್ಕೆ ಸಂದೇಶ ಸಾರಿದ್ದಾನೆ. ರಾಷ್ಟ್ರೀಯ ಪ್ರತ್ಯೇಕತೆ, ಸಂಯೋಜನಾ ರಹಿತ ವ್ಯಾಪಾರ ವ್ಯವಹಾರ ಪದ್ಧತಿಗಳೇ ಪ್ರಪಂಚದ ರೋಗಕ್ಕೆ ಕಾರಣ ಎಂದಿದ್ದಾನೆ. ಈ ರಾಷ್ಟ್ರೀಯ ಭಾವನೆಯ ರಾಜ್ಯಗಳು ಕೊನೆಗಾಣಬೇಕು. ಆತ್ಮನಾಶಮಾಡದ, ದಾಸ್ಯಕ್ಕೆ ಎಡೆಗೊಡದ ಸಮಷ್ಟಿ ಪದ್ದತಿ ನೆಲೆಗೊಳ್ಳಬೇಕು. ಧರ್ಮೋಪದೇಶಕರಿಗೆ ತಮ್ಮ ಕಾಲದಲ್ಲಿ ದೊರೆಯುವ ಸನ್ಮಾನ ಎಂದರೆ ಅಲಕ್ಷೆ, ಅನೇಕ ವೇಳೆ ಕಲ್ಲಿನೇಟು. ವೆಲ್ಸ್ ಮುಂತಾದವರ ಈ ಎಚ್ಚರಿಕೆ ಅಧಿಕಾರಮತ್ತರ ಮಧ್ಯೆ ಅರಣ್ಯರೋದನವೇ ಸರಿ. ಆದರೂ ಅಂತ್ಯದಲ್ಲಿ ಅದೇ ದಾರಿ ಹಿಡಿಯಬೇಕಾದ್ದು ಎಲ್ಲರಿಗೂ ಅನಿವಾರ್ಯ. ಈ ಪ್ರವರ್ತನೆಗಳಿಗೆ ಪ್ರೋತ್ಸಾಹ

38