ಸ್ಥಾನದ ಹೃದಯ ಎಂದಿದ್ದಾರೆ. ಅಲ್ಲಿ ಪ್ರಾಚೀನ ಕಾಲದ ಮತ್ತು ಮಧ್ಯಮ ಯುಗದ ನಾಗರಿಕತೆಯ ಅನೇಕ ಸ್ಥಾನ ಮತ್ತು ಕೇಂದ್ರಗಳಿವೆ. ಅನೇಕ ಜನಾಂಗಗಳ ಸಂಸ್ಕೃತಿಗಳಿಗೆ ಅದು ಪುಟವಿಕ್ಕಿದ ಮೂಸೆಯಾಗಿದೆ ; ೧೮೫೭ ರ ಕ್ರಾಂತಿ ಹುಟ್ಟಿ ಹರಡಿದ್ದು ಮತ್ತು ನಂದಿ ಹೋದದ್ದು ಅದೇ ಪ್ರಾಂತ್ಯದಲ್ಲಿ. ಇತರರಿಗಿಂತ ಸ್ವಲ್ಪ ಅನುಕೂಲಸ್ಥನೂ, ಸ್ವತಂತ್ರ ಮನೋಭಾವದ ಕೆಚ್ಚೆದೆಯ ಕಟ್ಟಾಳೂ, ಶುದ್ಧ ನೇಗಿಲಯೋಗಿಯೂ ಆದ ಉತ್ತರ ಮತ್ತು ಪಶ್ಚಿಮ ಜಿಲ್ಲೆ ಗಳ ದೃಢಾಂಗಿಯಾದ ಜಾತ್ ರೈತನನ್ನು ನೋಡಿದ್ದು ಇದೇ ಪ್ರಾಂತ್ಯದಲ್ಲಿ, ಮತಾಂತರ ಹೊಂದಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರೂ ತನ್ನ ಜನ ಮತ್ತು ವಂಶದ ಗೌರವದಿಂದ ಹೆಮ್ಮೆ ಪಡುವ ರಜಪೂತ ರೈತರು ಮತ್ತು ಜಮೀನುದಾರರು ; ನಿಪುಣರೂ ಚತುರರೂ ಆದ ಹಿಂದೂ ಮುಸ್ಲಿ೦ ಶಿಲ್ಪಿಗಳು ; ಗೃಹಕೈಗಾರಿಕೆಗಳ ಕೆಲಸಗಾರರು ; ಒಳ್ಳೆಯ ದಿನಗಳ ಆಶೆಯ ಧೈರ್ಯ ಸಹ ಇಲ್ಲದಿದ್ದರೂ ಆ ಆಶೆ ಮತ್ತು ನಂಬಿಕೆಯಿಂದ ತುಂಬಿ ತಲೆ ತಲಾಂತರಗಳ ದಬ್ಬಾಳಿಕೆ ಮತ್ತು ಬಡತನದ ಬೇಗೆಯಿಂದ ಬೆಂದ ಅಯೋಧ್ಯೆ ಮತ್ತು ಪೂರ್ವ ಜಿಲ್ಲೆಗಳ ರೈತರು ಮತ್ತು ಗೇಣಿದಾರರು ;-ಇವರುಗಳ ಪರಿಚಯ ಮಾಡಿಕೊಂಡೆ.
೧೯೩೦ ರಿಂದ ೪೦ ರ ಮಧ್ಯೆ ಸೆರೆಮನೆಯಿಂದ ಹೊರಗಿದ್ದ ವೇಳೆ ಅದರಲ್ಲೂ ೧೯೩೬-೩೭ ರ ಚುನಾವಣೆಗಳ ಪ್ರಚಾರ ಕಾಲದಲ್ಲಿ ಭಾರತದ ಆದ್ಯಂತ ನಗರಗಳಲ್ಲಿ, ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಸಂಚಾರಮಾಡಿದೆ. ಬಂಗಾಳದ ಹಳ್ಳಿಗಾಡು ಒಂದನ್ನು ನೋಡಿಲ್ಲ ; ಅದು ಬಿಟ್ಟು ಉಳಿದೆಲ್ಲ ಪ್ರಾಂತ್ಯಗಳನ್ನೂ ಸುತ್ತಿದೆ. ಮೂಲೆ ಮೂಲೆಗಳ ಹಳ್ಳಿಗಳನ್ನೂ ಮುಟ್ಟಿದೆ. ರಾಜಕೀಯ ಆರ್ಥಿಕ ಸಮಸ್ಯೆಗಳ ವಿಷಯ ಮಾತನಾಡಿದೆ ; ನನ್ನ ಭಾಷಣಗಳ ತುಂಬ ರಾಜಕೀಯ ಮತ್ತು ಚುನಾವಣೆಗಳ ವಿಷಯಗಳೇ ತುಂಬಿದ್ದವು. ಆದರೆ ಈ ಎಲ್ಲ ಕಾಲದಲ್ಲಿ ನನ್ನ ಮನಸ್ಸಿನ ಒ೦ದು ಮೂಲೆಯಲ್ಲಿ, ಹೃದಯಾಂತರಾಳದಲ್ಲಿ ಗಾಢವಾದ, ಸ್ಪಷ್ಟವಾದ ಬೇರೊಂದು ವಿಷಯವಿತ್ತು. ಚುನಾವಣೆಗಳು, ದೈನಂದಿನ ಉದ್ರಿಕ ಸಮಸ್ಯೆಗಳು ಯಾವುದೂ ಅದಕ್ಕೆ ಬೇಕಿರಲಿಲ್ಲ. ಆದರೆ ನಾನೇ ಇನ್ನೊ೦ದು ದೊಡ್ಡ ಉದ್ರೇಕಕ್ಕೆ ಒಳಗಾಗಿದ್ದೆ. ನಾನೇ ಒಂದು ಸಂಶೋಧನೆಯ ಮಹಾಯಾತ್ರೆಗಾಗಿ ಹೊರಟಿದ್ದೆ, ಭಾರತ ಮತ್ತು ಭಾರತದ ಜನ ನನ್ನೆದುರು ಹಬ್ಬಿತ್ತು. ಅಪಾರ ಸೊಬಗು ಮತ್ತು ರೂಪು ಲಾವಣ್ಯಗಳಿ೦ದ ತೇಜಸ್ವಿ ಯಾದ ಭಾರತ ನನ್ನನ್ನು ಮುಗ್ಧನನ್ನಾಗಿ ಮಾಡಿತು. ನಾನು ನೋಡಿದಷ್ಟೂ, ನನಗೇ ಆಗಲಿ ಅಥವ ಇನ್ಯಾರಿಗೇ ಆಗಲಿ ಅದರ ಗರ್ಭದಲ್ಲಡಗಿರುವ ಭಾವನೆಗಳನ್ನು ಗ್ರಹಿಸಲು ಎಷ್ಟು ಕಷ್ಟ ವಿತೆ ಎಂಬ ಅರಿವು ಆಗುತ್ತ ಬಂದಿತು. ನನ್ನ ಬುದ್ದಿ ಶಕ್ತಿಗೆ ನಿಲುಕದೆ ಇದ್ದುದು ಅದರ ದೇಶವಿಸ್ತಾರವಲ್ಲ; ರೂಪ ಭಿನ್ನತೆಯೂ ಅಲ್ಲ; ಆದರೆ ಒಂದೊಂದು ವೇಳೆ ಕಂಡೂ ಕಾಣದಂತೆ ಕಣ್ಮರೆಯಾಗಿ ಕಾಣುವ ನನ್ನ ಅಳತೆಗೆ ಮಾರಿದ ಯಾವುದೋ ಆತ್ಮದ ಆಳ, ಚಿತ್ರಶಿಲ್ಪಿಯೊಬ್ಬನು ತನ್ನ ಕಲ್ಪನಾಚಿತ್ರಗಳನ್ನು ಒಂದೇ ಹಾಳೆಯ ಮೇಲೆ, ಮೇಲಿಂದ ಮೇಲೆ ಪದರು ಪದರಾಗಿ, ಯಾವ ಮೇಲಿನ ಮಡಿಕೆಯ ಕೆಳಗಿನ ಯಾವ ಮಡಿಕೆಯನ್ನೂ ಅಳಿಸದಂತೆ ಅಥವ ಪೂರ್ಣ ಮುಚ್ಚದಂತ ಬರೆದ ಒಂದು ಪುರಾತನ ಚಿತ್ರ ಪ್ರತಿಯಂತೆ ಅದು ಕಾಣಿಸುತ್ತಿತ್ತು. ನಮಗೆ ಅದರ ಅರಿವಿಲ್ಲದಿದ್ದರೂ ನಮ್ಮ ಚೇತನ ಅಥವ ಸುಷುಪ್ತ ಜೀವನದಲ್ಲಿ ಈ ಎಲ್ಲ ಮಡಿಕೆಗಳೂ ಅಡಗಿವೆ. ಭಾರತದ ಜಟಲವೂ, ರಹಸ್ಯಗರ್ಭಿತವೂ ಆದ ವ್ಯಕ್ತಿತ್ವದಲ್ಲಿ ಅವುಗಳೆಲ್ಲ ಸೇರಿವೆ, ಕಂಡೂ ಕಾಣದಂತೆ, ಒಂದೊಂದು ವೇಳೆ ಅಣಕಿಸುವಂತೆ ನಗುವ ಆ ಒಗಟೆಯ ಮುಖವನ್ನು ಆಸೇತು ಹಿಮಾಚಲ ಪರ್ಯಂತ ಕಾಣಬಹುದು. ಹೊರಗೆ ನಮ್ಮ ಜನರಲ್ಲಿ ಭಿನ್ನ ಭಾವಗಳು ಅಸಂಖ್ಯಾತ ಭೇದಗಳು ಕಂಡರೂ, ನಮ್ಮ ರಾಜಕೀಯ ಗತಿ ಅಥವ ದುರದೃಷ್ಟ ಏನೇ ಇದ್ದರೂ ಯುಗಾಂತರಗಳಿಂದ ನಮ್ಮಲ್ಲಿ ಒಂದು ಏಕೀ ಭಾವನೆಯನ್ನು ತುಂಬಿ ಒಮ್ಮುಖವಾಗಿ ನಡೆಸಿಕೊಂಡು ಬಂದಿರುವ ಐಕ್ಯತೆಯ ಮುದ್ರೆ ಎಲ್ಲೆಲ್ಲೂ ಅದ್ದುತವಾಗಿ ಎದ್ದು ಕಾಣುತ್ತಿತ್ತು. ಭಾರತದ ಈ ಐಕ್ಯತೆ ನನಗೆ ಇನ್ನು ಕೇವಲ ಮಾನಸಿಕ ಕಲ್ಪನೆಯಾಗಿ ಉಳಿಯಲಿಲ್ಲ. ಒಂದು ಭಾವೋದ್ವೇಗದ ಅನುಭವ ನನ್ನನ್ನು ಆವರಿಸಿತು. ರಾಜಕೀಯ ವಿಭಜನೆ, ದುರ್ಘಟನೆ, ವಿಪ್ಲವ ಯಾವುದೂ ಈ ಭಾರತದ ಐಕ್ಯತೆಯನ್ನು ಒಡೆಯಲು ಸಾಧ್ಯವಾಗಲಿಲ್ಲ.