ಸುಬ್ಬನದಾದ ಪುತ್ರಕಾಮೇಷ್ಠಿ-ಸೀತಾಕಲ್ಯಾಣ ಪ್ರಸಂಗವನ್ನು ಅವರು
ಪರಿಶೀಲಿಸಿಲ್ಲ.
ಆ ಕಾಲಕ್ಕಿನ್ನೂ ಅದು ಸುಬ್ಬನದೆಂದು ನಿರ್ಧಾರವಾಗಿರಲಿಲ್ಲ
ವೆಂದು ತೋರುವುದು. ಮೇಲಾಗಿ, “ಧಾತ್ರೀಗುತ್ತಲು ನಾಮ ಕಣ್ವಪುರದಿ-
ರಾಮಾಯಣಂ ಪಾಡಿದ” ಎಂಬ ಪ್ರಸಿದ್ದ ವೃತ್ತವು ಪಟ್ಟಾಭಿಷೇಕ ಪ್ರಸಂಗ
ದಲ್ಲಿರುವುದರಿಂದ ಸುಬ್ಬನ ರಾಮಾಯಣ ಪಟ್ಟಾಭಿಷೇಕದಿಂದಲೇ ಆರಂಭವೆಂದು
ಅವರು ಗುಣಿಸಿದ್ದಾರೆಂದು ತೋರುತ್ತದೆ.
ಮುಳಿಯರು ಪಂಚವಟಿ ಪ್ರಸಂಗದ ಮೊದಲ ಭಾಗ, ಸೀತಾಪಹಾರದ
ವರೆಗಿನ ಕೆಲವು ಅಂಶಗಳನ್ನು ತಮ್ಮ ಪರಿಗಣನೆಯಿಂದ ಸಂಪೂರ್ಣವಾಗಿ
ಬಿಟ್ಟಿರುವುದು ಸೋಜಿಗದ ಸಂಗತಿಯಾಗಿದೆ.ಏಕೆಂದರೆ, ಸುಬ್ಬನ ಪದ್ಯ
ರಚನಾ ಪ್ರತಿಭೆಯ ಉತ್ಕೃಷ್ಟವಾದ ದೃಷ್ಟಾಂತಗಳು ಈ ಭಾಗದಲ್ಲಿವೆ-ಶೂರ್ಪ
ನಖಿಯ ಪ್ರವೇಶ, ರಾಮ ಶೂರ್ಪನಖಿ ಸಂವಾದ, ರಾವಣ-ಜಟಾಯು
ಸಂವಾದ ಮೊದಲಾಗಿ,
ಹಾಗೆಯೇ, ಸುಬ್ಬನ ಪದ್ಯಗಳಲ್ಲಿ ಕೆಲವು ಪದ್ಯಗಳ ರಚನೆ, ಬಂಧಗಳು
ಯಕ್ಷಗಾನ ರಚನೆಗಳಲ್ಲಿ ಅನ್ಯತ್ರ ಕಾಣದ ಮಾದರಿಗಳು ಎಂಬ ವಿಚಾರವೂ,
ಛಂದಸ್ಸು, ಗಮಕ, ಹಾಡುಗಬ್ಬಗಳ ತಜ್ಞ ವಿದ್ವಾಂಸರಾದ ಮುಳಿಯರ
ಗಮನಕ್ಕೆ ಹೇಗೋ ಬಾರದೆ ಹೋಗಿದೆ.
ಮುಳಿಯರು ತಮ್ಮ ಕೃತಿಯಲ್ಲಿ ಯಕ್ಷಗಾನದ ಇತಿಹಾಸಕ್ಕೆ ಅತಿ ಮಹತ್ವ ಧ್ವನಿಸಿದ ದಾಖಲೆಗಳನ್ನು ಮೊತ್ತಮೊದಲಾಗಿ ಮಂಡಿಸಿದ್ದಾರೆ. ಒಂದು 'ದಯಮಾಡೊ ದಣಿದು ಬಂದಾತ ಎಂಬ ಹಾಡು. ಇದರಲ್ಲಿ ಸುಬ್ಬನು ಆನೆಗುಡ್ಡ ಕಾರಂತರ ಮೇಳದಲ್ಲಿ ತಿರುಗಾಟ ಮಾಡಿದ ಉಲ್ಲೇಖವಿದೆ. (ಲೇಸಪಾಲಿಸು ಕಾರಂತನ ಮೇಳದೊಳಗೆ ಷಣ್ಮಾಸ ಸಂಚರಿಸಿ ಊರಿಗೆ ಸಾರುವಂದದಿ || ಇತ್ಯಾದಿ. ಪುಟ 16). ಇನ್ನೊಂದು ಧರ್ಮಸ್ಥಳ ಮಂಜಯ್ಯ ಹೆಗ್ಗಡೆ ಅವರಿಗೆ ಮೈಸೂರು ಮುಮ್ಮಡಿ ಕೃಷ್ಣರಾಜ ಒಡೆಯರು ಬರೆದ ಪತ್ರ.