ಈ ಪುಟವನ್ನು ಪ್ರಕಟಿಸಲಾಗಿದೆ
38
ಮಾರುಮಾಲೆ

ಅಣ್ಣಾ ನೀವ್ ಮೂವರ | ರಣ್ಯದೊಳಿರುವಾಗ
ಬಣ್ಣವೆ ತನಗೆ ಊರು | ಪುಣ್ಯಪುರುಷನಿನ್ನ | ಪಾದವ
ಬಿಡೆನೆಂದು |
ಕಣ್ಣನೀರನು ತುಂಬಿದ ||
ನಿರ್ಮಲದಲಿ ಜೇಷ್ಟ ಸುತನಿರಲಾತನ | ತಮ್ಮಗೆ
ರಾಜ್ಯವುಂಟೇ ।।
ಸನ್ಮತವಲ್ಲದಿದ್ದರೆ ನಾನಯೋಧ್ಯೆಗೆ | ಜನ್ಮಾಂತರಕು
ಪೋಗೆನು||

-ಇವು ರಾಮನಿಗೆ ಭರತನು ದಶರಥನ ನಿಧನವಾರ್ತೆಯನ್ನು ತಿಳುಹಿಸಿ, ದುಃಖವೇಗ ಕಡಿಮೆ ಆದಮೇಲೆ, ತೊಡಗುವ ಪದ್ಯಗಳು. ಇದನ್ನು ಒಂದು ಮಿತವಾದ ಹದವಾದ ಭಾವದಿಂದ ಉದ್ವೇಗಕ್ಕೆಡೆಯಿಲ್ಲದೆಯೇ ಭರತನು ಅಭಿವ್ಯಕ್ತಿಸಬಹುದು. ಆಗ ಈ ನೋಟವನ್ನು ತಿಳಿದ ಭಾಗವತನೂ ಸಹ ಆ ಪದ್ಯಗಳನ್ನು ತದನುಕೂಲವಾಗಿಯೇ ಹಾಡಬೇಕಲ್ಲದೆ, ಭರತನ ಬಗೆಗೆ ನಾವು ತಿಳಿದಂತಹ 'ಮಾಮೂಲು' ಭಾವೋದ್ವೇಗದಿಂದಲ್ಲ. ಇಂತಹ ನೋಟದ ಸೂಚನೆ ಭಾಗವತನಿಗೆ ದೊರಕುವಂತೆ, ಭರತನ ಪಾತ್ರಧಾರಿ, ಆ ಪದ್ಯವನ್ನೆತ್ತಿ ಕೊಳ್ಳುವ ಮೊದಲಾಡುವ ಮಾತುಗಳಲ್ಲಿ, ಮತ್ತು ಈ ಪದ್ಯಗಳನ್ನು ಎತ್ತುಗಡೆ ಮಾಡುವ ವಿಧಾನದಲ್ಲಿ ಸೂಕ್ತವಾದ ಭೂಮಿಕೆಯನ್ನು ನಿರ್ಮಿಸಬೇಕು. ಅಥವಾ ಇಂತಹ, ವಿಶಿಷ್ಟ ಸಂದರ್ಭಗಳನ್ನು ಪೂರ್ವ ಸಮಾಲೋಚನೆಯಿಂದ ಸರಿಪಡಿಸಿಕೊಳ್ಳಬೇಕು.
ಸನ್ನಿವೇಶ ನಿರ್ಮಾಣಕ್ಕೆ ಸಂದರ್ಭಚಿತ್ರಣಕ್ಕೆ ಹಿಮ್ಮೇಳದ ಪಾತ್ರ ಎಷ್ಟು ಮಹತ್ವದ್ದು ಎಂಬುದು ರೇಡಿಯೋ ಯಕ್ಷಗಾನ, ಕ್ಯಾಸೆಟ್ ತಾಳಮದ್ದಳೆ ಗಳನ್ನು ಕೇಳುವಾಗ ತುಂಬ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಸಭೆಯಲ್ಲಿ ಜರಗುವ ತಾಳಮದ್ದಲೆಯಲ್ಲಿ ಇರುವಷ್ಟು ಕೂಡ 'ದೃಶ್ಯ' ಇಲ್ಲ. ಇವು ಶುದ್ಧವಾಗಿ ಶ್ರವ್ಯಗಳು. ಅರ್ಥಧಾರಿಯಾಗಲಿ, ಭಂಗಿ, ಹಾವಭಾವಗಳಾಗಲಿ ನಮಗೆ ಗೋಚರಿಸದು. ಪರಿವರ್ತನೆ ಇವೆಲ್ಲ ಅಲ್ಲಿ ಹಿಮ್ಮೇಳದಿಂದಲೇ ಆಗಬೇಕು. ಅವನ ನಿಲುವು, ದೃಶ್ಯಭಾವ, ಸಂದರ್ಭ ರೇಡಿಯೋದಲ್ಲಿ,