ಈ ಪುಟವನ್ನು ಪ್ರಕಟಿಸಲಾಗಿದೆ
40
ಮಾರುಮಾಲೆ

ಇದನ್ನು ಆಧರಿಸಿ, ದುರ್ಯೋಧನನ ಅಂದಿನ ವೈಭವ, 'ಅದನೆಲ್ಲ' ಇಂದಿನ ದುಸ್ಥಿತಿಗಳನ್ನು 'ಇದನೆಲ್ಲ' ನೀಡಲು ಅರ್ಥಧಾರಿಗೆ ದೊಡ್ಡ ಪ್ರೇರಣೆ ಯಾಯಿತು.27 ಈ ಪ್ರೇರಣೆಯನ್ನು ಅಂಗೀಕರಿಸುವ ಪ್ರತಿಭೆ ಅರ್ಥಧಾರಿಗೂ ಇರಬೇಕಾಗುತ್ತದೆ. ಇಂತಹ ಹಲವು ಪ್ರಯೋಗಗಳನ್ನು ಪ್ರಸ್ತುತ ಲೇಖಕನು ಮಾಡಿದುದುಂಟು.

ಹಿಮ್ಮೇಳದ ಕೆಲಸ, ಅದರ ಸಾಧ್ಯತೆ, ಶಕ್ತಿ, ಮಿತಿಗಳನ್ನು ತಿಳಿದು ಅದನ್ನು ಬೆಳೆಸಿಕೊಳ್ಳುವ, ಹಿಮ್ಮೇಳ-ಮುಮ್ಮೇಳಗಳ ಒಂದು ಎರಕವನ್ನು ಕಾಣಿಸುವ ಕೆಲಸ ಅರ್ಥಧಾರಿಯದು. ಹೀಗೆ ಮಾಡಬೇಕಾದರೆ, ಹಿಮ್ಮೇಳದಲ್ಲಿ ಸಾಮಾನ್ಯ ಪರಿಜ್ಞಾನ: ಪರಿಶ್ರಮಗಳು ಅರ್ಥಧಾರಿಗೆ ಇದ್ದರೆ ಸಾಧ್ಯ. ಅರ್ಥಧಾರಿ ಭಾಗವತನೋ ಮದ್ದಲೆಗಾರನೋ ಆಗಬೇಕೆಂದು ಬಯಸುವುದು ಸೂಕ್ತವಲ್ಲವಾದರೂ, ಸ್ವತಃ ಭಾಗವತಿಕೆ, ಮದ್ದಲೆವಾದನಗಳಲ್ಲಿ ಪರಿಶ್ರಮ ಇರುವ ಅರ್ಥಧಾರಿಗಳು ಹಿಮ್ಮೇಳದ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂಬುದಕ್ಕೆ ದೃಷ್ಟಾಂತಗಳಿವೆ.28 ಹಿಮ್ಮೇಳವನ್ನು ಸಕ್ರಿಯವಾಗಿ ದುಡಿಸಿ ಕೊಳ್ಳುವ, ಪಾಲ್ಗೊಳ್ಳಿಸುವ ಶಕ್ತಿ ಅರ್ಥಧಾರಿಯಲ್ಲಿರಬೇಕು. ಇದಕ್ಕೆ ಹಿಮ್ಮೇಳದ ಸೊಗಸನ್ನು ಸವಿಯುವ, ಅದರಲ್ಲಿ ಮರುಳಾಗಬಲ್ಲ, ಅದರ ನಯ ನಾಜೂಕುಗಳನ್ನು ಅಗೆಯಬಲ್ಲ ಸಾಮರ್ಥ್ಯ ಇರಬೇಕು.

ತಾಳಮದ್ದಲೆಯ ಮಾತುಗಾರಿಕೆ (ಆಟದ ಮಾತುಗಾರಿಕೆಯೂ ಹಾಗೆಯೆ) ಒಂದು ವಿಶಿಷ್ಟ ನಾದದ ಆವರಣವನ್ನು ನಿರ್ಮಿಸುತ್ತದೆ. ನಾವು ಸಾಮಾನ್ಯ ವಾಗಿ ಮಾತಾಡುವ ಅಥವಾ ಭಾಷಣ ಮಾಡುವ ಕ್ರಮಕ್ಕಿಂತ ಭಿನ್ನವಾದ, ಒಂದು ಪ್ರಮಾಣದ 'ಕೃತಕ' ಸ್ವರಭಾರವನ್ನೂ ಹೊಂದಿಕೊಂಡಿರುತ್ತದೆ. ಅದು 'ಲೋಕಧರ್ಮಿ' ಯಾಗದೆ ನಾಟ್ಯಧರ್ಮಿಯಾಗುವುದು ಈ ಕೃತಕತೆಯ ಸ್ವರಭಾರದಿಂದಲೂ ಹೌದು. ಅರ್ಥಗಾರಿಕೆ ಶ್ರುತಿ ಬದ್ಧವಾಗಿರಬೇಕು, ಎಂಬುದು ಯಕ್ಷಗಾನ ರಂಗದಲ್ಲಿ ಬಹುಕಾಲದಲ್ಲಿ ಅಂಗೀಕೃತವಾದ ಒಂದು ತತ್ವ, ಇಲ್ಲಿ ಶ್ರುತಿಬದ್ಧವಾಗಿ ಮಾತನಾಡುವುದು ಎಂದರೇನು? ಎಂಬುದು ವಿಚಾರಾರ್ಹ. ಹಾಡುಗಾರಿಕೆಯಂತೆ, ಮಾತುಗಾರಿಕೆ ಇಡಿಯಾಗಿ, ಒಂದು