ಈ ಪುಟವನ್ನು ಪರಿಶೀಲಿಸಲಾಗಿದೆ

136 ಮಿಂಚು
ದಂಡಪಾಣಿಯನ್ನು ಸುತ್ತುವರಿದರು. ಪೊಲೀಸ್ ತುಕಡಿಯ ಮುಖ್ಯಸ್ಥ ಐಜಿಪಿ
ಬಳಿಗೆ ಬಂದು, “ಅವರ ಮೇಲೂ ಛಾರ್ಜ್ ಮಾಡಲಾ ?” ಎಂದು ಕೇಳಿದ, ಶಾಸಕರ
ಗುಂಪಿನತ್ತ ಬೊಟ್ಟು ಮಾಡಿ.
“ಶುದ್ದ ಕತ್ತೆ ! ಅವರು ಶಾಸಕರು ! ಅಷ್ಟೂ ಗೊತ್ತಾಗೋದಿಲ್ಲ ನಿನಗೆ ?”
ಓಡಿದವರನ್ನು ಸ್ವಲ್ಪ ದೂರ ಅಟ್ಟಿಸಿಕೊಂಡು ಹೋದರು. ಕೈಗೆ ಸಿಕ್ಕವರನ್ನು
ವ್ಯಾನುಗಳಲ್ಲಿ ತುಂಬಿದರು. ಪ್ರಜಾಪಕ್ಷದ ಶಾಸಕರು-ರಾಪ್ಪ ಪಕ್ಷದ ಕೆಲ ಶಾಸಕರು
ದಂಡಪಾಣಿಯನ್ನು ಕೂಡ ಸದನದತ್ತ ಎಳೆದರು. ಪೋಲೀಸರು ಅವನನ್ನು ವ್ಯಾನಿಗೆ
ತಳ್ಳಿದರು. ಐಜಿಪಿ ಗುಂಪಿನ ಬಳಿ ಬಂದು ದಂಡಪಾಣಿಗೂ ಉಳಿದವರಿಗೂ “Sorry "
ಹೇಳಿದರು.
- ಶರಟಿನ ಮೇಲೆ ರಕ್ತಧಾರೆ ಹರಿದಿದ್ದ ದಂಡಪಾಣಿ ಸದನದಲ್ಲಿ ನೆಲದ ಮೇಲೆ
ಸಭಾಪತಿಯ ಎದುರು ಕುಳಿತ, ಪ್ರಜಾಪಕ್ಷದವರೂ ಅವನ ಜತೆ ಸೇರಿದರು. ಹೊರಗೆ
ಆರಂಭಿಸಿದ್ದ ಭಾಷಣವನ್ನು ದಂಡಪಾಣಿ ಅಲ್ಲಿ ಮುಂದುವರಿಸಿದ. ಸಭಾಪತಿ ಶುರು
ವಾಗದೆ ಇದ್ದ ಕಲಾಪಗಳನ್ನು ಅರ್ಧಗಂಟೆ ಮುಂದಕ್ಕೆ ಹಾಕಿ, ತಮ್ಮ ಕೊಠಡಿಗೆ ತೆರಳಿ
ಐದು ಐದು ಐದು ಸೇದಿದರು.
ವಿಧಾನ ಮಂಡಲದಲ್ಲಿ ಇದ್ದ ಡಾಕ್ಟರು ಅಧಿಕೃತ ಆದೇಶ ಬಂದೊಡೆನೆ ಸದನ
ವನ್ನು ಹೊಕ್ಕು ದಂಡಪಾಣಿಯ ಹಣೆಗೊಂದು ಪಟ್ಟಿ ಕಟ್ಟಿದರು. ಅವನನ್ನು ಆತನ
ಆಸನಕ್ಕೆ ಯಾರೋ ಕೈಹಿಡಿದು ಕರೆದೊಯ್ದರು.
ಪ್ರಜಾಪಕ್ಷದ ಮುಖಂಡ ನಾಯಕರಿಗೀಗ ಎಲ್ಲಿಲ್ಲದ ಆವೇಶ ಬಂತು. ಪ್ರಶ್ನೆ
ತರವಿಲ್ಲ : ವಿದ್ಯಾ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಚರ್ಚೆ ಇಲ್ಲ. ಈಗ
ನಿಲುವಳಿ ಸೂಚನೆ ಒಂದೇ; ಸರ್ಕಾರವನ್ನು ಖಂಡಿಸುವ ನಿರ್ಣಯ ಮಂಡನೆ. ಇನ್ನೂ
ಒಂದೈವತ್ತು ಜನರಾದರೂ ತನ್ನ ಪಕ್ಷದಲ್ಲಿ ಈಗ ಇದ್ದಿದ್ದರೆ! ರಾಷ್ಟಪಕ್ಷದ ಅನೇಕ
ಶಾಸಕರು ತನ್ನತ್ತ ಬರುತ್ತಿದ್ದರು. ಸೌದಾಮಿನಿ ಸರಕಾರ ಉರುಳುತ್ತಿತ್ತು. ತಾನು
ಮುಖ್ಯಮಂತ್ರಿಯಾಗುತ್ತಿದ್ದೆ.
ಸಭಾಪತಿ ಬಂದರು.
ನಾಯಕ ತುದಿಗಾಲ ಮೇಲೆ ನಿಂತು ಉಚ್ಚ ಕಂಠದಲ್ಲಿ ಅರಚಿದರು :
“ಕಾರ್ಯಕಲಾಪಗಳ ಪಟ್ಟಿಯಲ್ಲಿರುವುದರ ಬದಲು ಒಂದು ಮಹತ್ವದ
ವಿಷಯ ಈಗ ಚರ್ಚೆ ನಡೆಯಬೇಕಾಗಿದೆ. ಸದನದ ಮುಂದುಗಡೆ ನಿಶ್ಯಸ್ತ ಜನರ
ಮೇಲೂ ಸಮತಾ ಶಾಸಕ ದಂಡಪಾಣಿಯವರ ಮೇಲೂ ಪೋಲೀಸರ ದೌರ್ಜನ್ಯ
ನಡೆದಿದೆ.”
ಸಭಾಪತಿ ದಂಡಪಾಣಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿ, ಒಂದಿಷ್ಟೂ ವಿಚಲಿತ
ರಾಗದೆ ನಾಯಕರತ್ತ ನೋಡಿ ಅಂದರು :
“ನಿಮ್ಮದು ನಿಲುವಳಿ ಸೂಚನೆಯೋ ? ಗಮನ ಸೆಳೆಯುವ ಸೂಚನೆಯೊ ?”