ಈ ಪುಟವನ್ನು ಪ್ರಕಟಿಸಲಾಗಿದೆ

12

ಮಿಂಚು

“ಇದೆ. ನೆನೆಸಿಕೊಂಡಾಗ ಸಂಕಟವಾಗುತ್ತೆ. ಬದುಕಿದ್ದರೆ ಈ ಹೊತ್ತಿಗೆ ಮೂವತ್ತೈದು ವರ್ಷ ಆಗ್ತಿತ್ತು-ಅಲ್ಲವಾ ?”
“ಹೌದು, ಪುಟ್ಟಾ. (ಬಂದ ಉಮ್ಮಳವನ್ನು ಹತೋಟಿಯಲ್ಲಿಡುತ್ತ) ನಿನ್ನ ಆರೋಗ್ಯ ಚೆನ್ನಾಗಿಯೇ ಇದ್ದಂತೆ ಕಾಣ್ತದೆ. ತೊಂದರೆಗಳೇನೂ ಇರ್ಲಿಲ್ವ ?”
“ದೇವರ ದಯದಿಂದ ಇಲ್ಲ, ಮೃದುಲಾಬೆನ್.”
“ಮಗುವನ್ನು ಪಡೆದು ಕಳೆದುಕೊಂಡ ನಾನು ನತದೃಷ್ಟೆ. ಅಂಥ ಸಂಕಟಕ್ಕೀಡಾಗದ ನೀನು ಭಾಗ್ಯಶಾಲಿ.”
ಮೃದುಲಾಬೆನ್ ಕುಳಿತ ಕಡೆಯಿಂದಲೆ ಗುಂಡಿಯೊತ್ತಿದಳು.
ದೂರದಿಂದ : “ಬಂದೆ, ಮಾಜಿ.”
ಕಾಣಿಸಿಕೊಂಡವಳು ಆ ಹುಡುಗಿಯೇ: ಅಂದವಾದ ಮೈಕಟ್ಟು. (ಮುದ್ದಿಸಿ ಬೆಳೆಸಿದಾಳೆ. ವಿವಿಧೋದ್ದೇಶಬಾಲಿಕೆಯೇ. ಸಂದೇಹವಿಲ್ಲ;)
“ಕಿಷ್ಕಿಂಧೆಯವರು ಕಾಫಿ ಜನ. ಮಾಡಿ ತಗೊಂಡ್ಬಾ. ಫಿಲ್ಟರ್ ಬಳಸು.”
ತಲೆಯಾಡಿಸಿ ಹುಡುಗಿ ಮಾಯವಾದಳು.
"ಇವಳು ಹತ್ತು ವರ್ಷದವಳಿದ್ದಾಗ ನನ್ನ ಹತ್ತಿರ ಬಿಟ್ಟು ಹೋದರು: ಅನಾಥೆ. ಈ ಐದು ವರ್ಷಗಳಿಂದ ಸಾಕ್ತಾ ಇದೀನಿ. ಆ ಸೋದರಳಿಯ ಬೋ-ಮಗ ಈ ಚಿಕ್ಕವಳ ಜತೆ ಆಟ ಶುರುಮಾಡ್ದ. ಅವನ ಮದುವೆ ಅವಸರದಲ್ಲಿ ಆದದ್ದಕ್ಕೆ ಅದೇ ಕಾರಣ.”
“ಬಾಯಿ ಬಿಚ್ಚದಿರಲಿ ಅಂತ ಫ್ಲ್ಯಾಟೂ ಕೊಟ್ಟಿರಿ.”
“ಗುರುವಿಗೆ ತಿರುಮಂತ್ರ ಹೇಳೋ ಜಾತಿ ನಿನ್ನದು.”
“ಎಲ್ಲಾ ನಿಮ್ಮ ಆಶೀರ್ವಾದ.”
ಹಿರಿಯವಳು ಸಣ್ಣನೆ ನಕ್ಕಳು. ಪ್ರಭೆ ಬೀರುವ ನವರತ್ನಗಳನ್ನು ಕೂಡಿಸಿದ್ದ ಅರ್ಧ ಡಜನ್ ಬಂಗಾರದ ಬಳೆಗಳಿದ್ದ ಬಲಮುಂಗೈ ಜೀವ ತಳೆಯಿತು, ಮುಂಗುರು ಳನ್ನು ಹಿಂದಕ್ಕೆ ತಳ್ಳಲು. ಎಡಗೈಯಲ್ಲಿತ್ತು, ಸ್ವರ್ಣಸಂಕೋಲೆಯ ಪುಟ್ಟ ವಾಚು. ಅದರತ್ತ ಅವಳು ದೃಷ್ಟಿ ಹಾಯಿಸಿದಳು.
“ನೀನು ಕಾಂಟಾಕ್ಟ್ ಲೆನ್ಸ್ ಅಂತ ಕೇಳಿದೀಯಾ ?”
“ಹುಡುಗೀರು ಹಾಕ್ಕೋತಾರಂತೆ.”
“ದೃಷ್ಟಿದೋಷ ಇರೋರು. ಮುಖ್ಯವಾಗಿ ಇದರ ಅಗತ್ಯ ನನ್ನಂಥವರಿಗೆ. ಹತ್ತಿರ ಬಾ.”
ಪುಟ್ಟವ್ವ ಅಕ್ಕನ ಬಳಿ ಸರಿದಳು. ಪ್ರಜ್ಞೆ ಬಂತು.
“ನನ್ನ ಪಾಪೆ ನೋಡು. ಏನಾದರೂ ಕಾಣಿಸ್ತಿದೆಯ ?”
“ನನ್ನ ಮೂತಿ.”