ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

3

ಸಂಗ್ರಾಮದಲ್ಲಿ ಆದ ಏರಿಳಿತಗಳು ಎಷ್ಟೊಂದು? 'ಪ್ರತಿಯೊಂದು ಸೋಲೂ ಗೆಲುವಿನತ್ತ ಸಾಗುವ ಸೋಪಾನ'. ಯಾರು ಹೇಳಿದ್ದು ಹೀಗೆಂದು? ಯಾರಾದರೇನು? ಒಳ್ಳೆಯ ಮಾತು.

"ಟಿಕೆಟ್! ಟಿಕೆಟ್!"

ತನ್ನಲ್ಲಿದೆ ಟಿಕೆಟು. ಎಷ್ಟೋ ವರ್ಷ ಹಿಂದೆ ಅಹಮ್ಮದಾಬಾದ್-ಮುಂಬಯಿ ದಾರಿಯಲ್ಲಿ.... ಈಗ ಯಾಕೆ ಅದರ ನೆನಪು? ಇವನೇ ಅಲ್ಲವಷ್ಟೆ? ಅವನೀಗ ನಿವೃತ್ತನಾಗಿ ತನ್ನ ಹುಟ್ಟೂರು ಸೇರಿರಬೇಕು. 'ದೊಂಗಲುನ್ನಾರು ಜಾಗ್ರತ!'__ ಇದನ್ನು 'ಟಿಕೆಟ್ ಕಲೆಕ್ಟರುನ್ನಾರು ಜಾಗ್ರತ!' ಎಂದು ಬದಲಾಯಿಸಿದರೆ? 'ಟಿಕೆಟ್ ಕಲೆಕ್ಟರ್'ಗಿಂತ 'ಟಿ.ಸಿ' ವಾಸಿ. 'ಟಿ.ಸಿ. ಲುನ್ನಾರು?' 'ಟಿ.ಸಿ, ಉನ್ನಾರು?' "ಟಿ.ಸಿ. ರುನ್ನಾರು?' ಯಾವುದೋ ಒಂದು. ಕನ್ನಡ ರಾಜ್ಯದಲ್ಲಿ ಓಡಾಡುವ ರೈಲು. ಕನ್ನಡದಲ್ಲಿಯೇ ಇರಬೇಕು-ಇಂಥ ಎಚ್ಚರಿಕೆ ಮಾತುಗಳೆಲ್ಲ....

ಟಿಕೆಟ್ ಇಲ್ಲದ ಪ್ರಯಾಣ ದಂಡನಾರ್ಹ. ದೇಶದ ಬೊಕ್ಕಸಕ್ಕೆ ಕನ್ನವಿಡುವವನು ಪಾಪಿ. ಈ ಡಬ್ಬಿಯಲ್ಲಿ? ತಾನು ಪ್ರಯಾಣ ಬೆಳೆಸುತ್ತಿರುವ ಇಲ್ಲಿ?

"ಮಡಾಮ್, ಟಿಕೆಟ್...." ತನ್ನಲ್ಲಿಗೆ ಬಂದ. ಧಡೂತಿ ಆಸಾಮಿ. ಎರಡು ದಶಕ ಹಿಂದೆ___ಮುಂದಕ್ಕೆ ಚಾಚದ ಹೊಟ್ಟೆ....ಯೌವನದ ಮೋಡಿಯೇ ಮೋಡಿ.

ಬಲಮಗ್ಗುಲಿಗೆ ಆತುಕೊಂಡಿದ್ದ ಹ್ಯಾಂಡ್‌ಬಾಗ್. ಅದರಿಂದ ಹೊರಬಂದ ಟಿಕೆಟ್, ಇವನು ತನ್ನನ್ನು ಈವರೆಗೆ ಕಂಡ ಭಾಗ್ಯವಂತನಲ್ಲ,

ಗಾಂಭೀರ್ಯ, ಮೌನ.

ಮೇಲಿನ ವರ್ಗದಲ್ಲಾದರೆ, 'ಎಕ್ಸ್ ಕ್ಯೂಸ್ ಮಿ' ಎಂಬ ಪೀಠಿಕೆಯ ಬಳಿಕ ಮಾತ್ರ 'ಟಿಕೆಟ್'ನ ಪ್ರಸ್ತಾಪ.

ಅಲ್ಲಿ 'ಥ್ಯಾಂಕ್ಯೂ'. ಇಲ್ಲಿ ಉಪೇಕ್ಷೆಯ ನೋಟ.

ನಸುನಕ್ಕನಲ್ಲ? ನಲ್ಲನಲ್ಲದ ನಲ್ಲ. ತನ್ನ ಹಿರಿಮೆಯನ್ನೊಪ್ಪಿಕೊಂಡು ಮೆಚ್ಚುಗೆಯ ತುಟಿ ಸಲಾಂ.

ಸೀಟಿನ ಕೆಳಗೆ ಮಲಗಿದ್ದ ಬಡಪಾಯಿ ಸಂಸಾರ. ರಾಜಠೀವಿಯಿಂದ ಕುಳಿತಿದ್ದ ಇಬ್ಬರು, "ಪಕ್ಕದ ಕಂಪಾರ್ಟ್‌ಮೆಂಟಿನಲ್ಲಿದಾರೆ", "Sorry, ಎಷ್ಟಾಗುತ್ತ ಕೊಡ್ತೀನಿ." ರಶೀದಿ ಪುಸ್ತಕ. ಅದರ ಬೆನ್ನಿನ ಮೇಲೆ ಅಂಕೆಸಂಖ್ಯೆ ಜಮಾ, ಟಿಕೆಟಿನ ಚಾರ್ಜ್ ಮತ್ತು ದಂಡ ತೆತ್ತುದಾಯಿತು. ಉಳಿದ ದೊಂಗರಿಗೆ "ನಡೀರೋ, ಬಾಗಿಲ ಹತ್ರ ನಿಂತ್ಕೊಳ್ಳಿ!"

"ಬಿಡಿ ಸೋಮಿ, ಬಡವಗು."

"ಎಲ್ಲಾ ಗೊತ್ತು."