ಈ ಪುಟವನ್ನು ಪ್ರಕಟಿಸಲಾಗಿದೆ
109

ಮುಡಿ

ವೇದಿಕೆಯಿಲ್ಲದೆ, ತಾತ್ಕಾಲಿಕ ಅನೌಪಚಾರಿಕ ವ್ಯವಸ್ಥೆಯಾಗಿದ್ದ ತಾಳಮದ್ದಲೆಯು, ಆಹ್ವಾನಿತ ಕಲಾವಿದರು, ಪೂರ್ವ ನಿಶ್ಚಿತ ಪಾತ್ರ ವಿತರಣೆ, ಪತ್ಯೇಕ ರಂಗವೇದಿಕೆಗಳಿಂದ ಕೂಡಿದ ಸಂಘಟನೆಯಾಯಿತು. ಪಾತ್ರಗಳಿಗೊಬ್ಬರಂತೆ ಬೇರೆ ಬೇರೆ ಭಾಗವತರನ್ನಿರಿಸಿ, ಮಾತಿಲ್ಲದ, ಗೀತರೂಪಕ ತಾಳಮದ್ದಳೆಯನ್ನೂ ಪ್ರಯೋಗಿಸಲಾಗಿದೆ. ಇಡಿಯ ಪ್ರಸಂಗಗಳ ಸ್ಥಾನದಲ್ಲಿ ಆಯ್ದ ಭಾಗ (ತುಂಡು ಪ್ರಸಂಗಗಳ) ಬಳಕೆ ಸಹ ಪ್ರಾಯಃ 1950ರ ಬಳಿಕದ ಪ್ರಯೋಗ, ಗೀತರೂಪಕ ಅರ್ಥಾತ್ ಗಾನತಾಳಮದ್ದಳೆಯ ಪ್ರಯೋಗವನ್ನು ಮೊದಲು ಮಾಡಿದವರು ಪ್ರಾಯಃ ಡಾ. ಶಿವರಾಮ ಕಾರಂತರು
ತುಳು ಯಕ್ಷಗಾನ
ಕನ್ನಡದಲ್ಲೇ ಪ್ರಯುಕ್ತವಾಗುತ್ತಿದ್ದ ಕಲೆ, ಸಾಮಾಜಿಕ ಸಾಂಸ್ಕೃತಿ ಜಾಗೃತಿಯ ಪರಿಣಾಮವಾಗಿ ತುಳುವಿಗೂ ವಿಸ್ತರಿಸಿತು. ತುಳು ಭಾಷೆಯ ಮೊತ್ತಮೊದಲ ಪ್ರಸಂಗ ಬಾಯಾರು ಸಂಕಯ್ಯ ಭಾಗವತರ 'ಪಂಚವಟಿ' 1887ರಲ್ಲಿ ಬಂದರೂ ತುಳು ಯಕ್ಷಗಾನದ ವ್ಯಾಪಕ ಪ್ರಯೋಗಗಳು ಆರಂಭವಾದದ್ದು ಈ ಶತಮಾನದ ಉತ್ತರಾರ್ಧದಲ್ಲಿ. ಪಂದುಬೆಟ್ಟು ವೆಂಕಟ್ರಾವ್ ರಚಿತ 'ಕೋಟಿ ಚೆನ್ನಯ'ದ ಪ್ರಯೋಗದಿಂದ ಆರಂಭವಾದ ತುಳು ಯಕ್ಷಗಾನಕ್ಕೆ ಇರಾ -ಕರ್ನಾಟಕ ಮೇಳವು ಪ್ರವರ್ತಕ (ಸು. 1950) ಅಲ್ಲಿಂದೀಚೆಗೆ ತುಳು ಯಕ್ಷಗಾನ ವಿಪುಲವಾಗಿ ವಿಸ್ತರಿಸಿದೆ. ಕನ್ನಡ ಪದ್ಯ-ತುಳು ಅರ್ಥ, ತುಳು ಕನ್ನಡ ಮಿಶ್ರ, ಕೇವಲ ತುಳು ಹೀಗೆ ಬೇರೆ ಬೇರೆ ವಿಧಗಳಲ್ಲಿ ಪ್ರಸಂಗಗಳು ಬಂದಿದೆ. ನೂರಾರು ತುಳು ಪ್ರಸಂಗಗಳು ರಚಿತವಾಗಿವೆ. ತುಳು ಯಕ್ಷಗಾನವೆಂಬುದು ತೌಳವ ಜಾಗೃತಿಯ, ತುಳು ಭಾಷಾ ಉತ್ಥಾನದ ಫಲ ; ಸಾಂಸ್ಕೃತಿಕ ವಿಕೇಂದ್ರೀಕರಣದ ಒಂದು ರೂಪ. ಆದರೆ ಅದು ರಂಗರೂಪದಲ್ಲಿ ಯಕ್ಷಗಾನ ಶೈಲಿಯನ್ನು ವಿರೂಪಗೊಳಸಿದ್ದೂ ಸತ್ಯ.
ಹಿಂದಿ ಭಾಷೆಯಲ್ಲಿ ಆಟ, ತಾಳಮದ್ದಲೆಗಳು ಹಲವು ಆಗಿವೆ. ಹಿಂದಿ ಪ್ರಸಂಗ ರಚನೆಯನ್ನು ಮೊದಲಾಗಿ ಮಾಡಿದವರು ಬಹುಶಃ, ವಿಟ್ಲದ ವಿದ್ವಾನ್ ದಿ. ಅಂಗ್ರಿ ಶಂಕರ ಭಟ್ಟರು. ಖ್ಯಾತ ರಂಗನಿರ್ದೇಶಕ ಬಿ. ವಿ. ಕಾರಂತರ ನಿರ್ದೇಶನದಲ್ಲಿ ಹಿಂದಿ ಯಕ್ಷಗಾನವು ಪ್ರದರ್ಶನ ಕಂಡಿದೆ. ಇತ್ತೀಚೆಗೆ ಯಕ್ಷಮಂಜೂಷ ತಂಡವು ಉತ್ತರಭಾರತದಲ್ಲಿ ಹಿಂದಿ ಯಕ್ಷಗಾನ ಸರಣಿಯನ್ನು ಸಂಘಟಿಸಿ, ಪ್ರದರ್ಶಿಸಿ ಹಿಂದಿ ಯಕ್ಷಗಾನವನ್ನು ಮುಂದುವರಿಸಿದೆ. ಸಂಸ್ಕೃತ, ಮಲೆಯಾಳ, ಕೊಂಕಣಿ, ಇಂಗ್ಲೀಷ್, ಬ್ಯಾರಿ, ಹವ್ಯಕ, ಕರಾಡ, ಚಿತ್ಪಾವನಿ ಭಾಷೆಗಳಲ್ಲೂ ಯಕ್ಷಗಾನ ಪ್ರಯೋಗಗಳಾಗಿವೆ.

0 ಡಾ. ಎಂ. ಪ್ರಭಾಕರ ಜೋಶಿ