ಈ ಪುಟವನ್ನು ಪ್ರಕಟಿಸಲಾಗಿದೆ










ಯಕ್ಷಗಾನದಲ್ಲಿ ಭಾಷಾಪ್ರಯೋಗ


ಯಕ್ಷಗಾನವೆಂಬ ರಂಗ ಪ್ರಕಾರದಲ್ಲಿ, ಪ್ರಸಂಗ ಕಾವ್ಯ ಮತ್ತು ಅದನ್ನಾಧರಿಸಿ ನಡೆಯುವ ಪ್ರದರ್ಶನಗಳಲ್ಲಿ ಭಾಷೆಯ ಬಳಕೆಯನ್ನು ಸಂಕ್ಷೇಪವಾಗಿ ಪರಿಶೀಲಿಸುವುದು ಈ ಬರಹದ ಉದ್ದೇಶ. ಇಲ್ಲಿ ಪ್ರಸಂಗವೆಂಬ ಹಾಡುಗಳ ಕಥನಕಾವ್ಯವು ಕವಿಕೃತವಾಗಿದ್ದು, 'ಸ್ಥಿರ'. ಅದನ್ನು ಆಧರಿಸಿ ಪಾತ್ರಧಾರಿಗಳು ಆಡುವ ಮಾತು (ಅರ್ಥಗಾರಿಕೆ) ಎಂಬುದು ರಂಗದಲ್ಲಿ ರಚನೆಯಾಗುವ ಆಶುಭಾಷಣ, ಚರ. ಇದು ಕಾಲ, ದೇಶ, ವ್ಯಕ್ತಿಗನುಸರಿಸಿ ಅನಂತ ವೈವಿಧ್ಯಮಯ.
ಯಕ್ಷಗಾನ ಪ್ರಸಂಗಗಳ ಭಾಷೆ ಒಂದು ಬಗೆಯ ನಡುಗನ್ನಡ, ಪ್ರಸಿದ್ಧ ಕನ್ನಡ ಕಾವ್ಯಗಳನ್ನು ಸರಳೀಕರಿಸಿ, ಹಾಡುಗಳ ಸರಣಿಯಲ್ಲಿ ಕಥನವಾಗಿ ಬರೆದಿರುವುದರಿಂದ, ಅವುಗಳಲ್ಲಿ ಪ್ರೌಢಭಾಷಾ ಪ್ರಯೋಗಗಳನ್ನು ಬಳಸಿಲ್ಲ. ಸರಳತೆಯೇ ಅವುಗಳ ಉದ್ದೇಶ ಮತ್ತು ಜೀವಾಳ. ಆಧುನಿಕ ಯುಗದವರೆಗೂ ಪ್ರಸಂಗಗಳ ಭಾಷಾ ಸ್ವರೂಪ ಹೆಚ್ಚು ಬದಲಾಗಿಲ್ಲ. ಛಂದಸ್ಸಿಗೆ ಹೊಂದಿ, ದ್ವಿತೀಯಾಕ್ಷರ ಪ್ರಾಸ, ಕೆಲವೆಡೆ ಅಂತ್ಯಪ್ರಾಸಗಳನ್ನಿಟ್ಟು ವಿವಿಧ ಬಂಧಗಳಲ್ಲಿ ಪ್ರಸಂಗಗಳು ರಚಿತವಾಗಿವೆ. ಸುಮಾರಾಗಿ ದಾಸರ ಹಾಡುಗಳ, ಜಾನಪದ ಹಾಡುಗಳ ಭಾಷೆಯ ಮಟ್ಟದಲ್ಲೇ ಇರುವ ಪ್ರಸಂಗಗಳ ಕನ್ನಡವು, ಸರಳತೆಯಿಂದ ದುರ್ಬಲವಾಗಿದೆ ಎನ್ನುವಂತಿಲ್ಲ. ಬದಲಾಗಿ 'ಪ್ರೌಢಭಾಷೆ'ಯನ್ನು ಬಳಸಿ ಪ್ರಸಂಗ ರಚನೆ ಮಾಡಿದ ಕರ್ತೃಗಳ ಪ್ರಯತ್ನ ಅತ್ತ

ಭಾಷಾದೃಷ್ಟಿಯಲ್ಲೂ, ಇತ್ತ ಪ್ರಸಂಗ ದೃಷ್ಟಿಯಲ್ಲೂ ವಿಫಲವಾಗಿದೆ.

• ಡಾ. ಎಂ. ಪ್ರಭಾಕರ ಜೋಶಿ