ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

115

ಪ್ರಮುಖ, ಯಶಸ್ವಿ ಪ್ರಸಂಗಗಳೆಲ್ಲದರ ಮುಖ್ಯ ಲಕ್ಷಣ ಸ್ವಭಾವೋಕ್ತಿ, ಈ ಅಲಂಕಾರದ ಯಶಸ್ಸು ಕಷ್ಟದ್ದು. ಅದನ್ನು ಯಕ್ಷಗಾನ ಕವಿಗಳು ಸಲೀಸಾಗಿ ಸಾಧಿಸಿದ್ದಾರೆ. - ಪಾರ್ತಿ ಸುಬ್ಬ, ಕವಿ, ವಿಷ್ಣು, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ವೆಂಕಟ ಮೊದಲಾದ ಕವಿಗಳ ರಚನೆಗಳಲ್ಲಿ ಇದನ್ನು ಕಾಣುತ್ತೇವೆ. 'ಯಾರಿಗಿಷ್ಟುಪಚಾರ?' ನಿನ್ನ ಸೇವಕರ್ವೇರ್ಮೆಲಾಯ್ತೆ ಪೂರ್ಣ ಕಾರುಣ್ಯ, 'ದೊರೆತನ ಸುಡಲಿನ್ನು' 'ಕೌರವರಿಗೆ ನಾನೆ ದುರ್ಜನಳಾದೆನೆ'. 'ಇನ್ನು ನಡೆಸಿಕೊಳ್ಳಲು ಬೇಕು ಬಂದಿರೇನೈ' – ಮೊದಲಾದ ಸರಳವಾದ ಮಾತುಗಳಿಂದ ಅಸಾಧಾರಣ ಪರಿಣಾಮವನ್ನವರು ಸಾಧಿಸಿದ್ದಾರೆ.
ಆಟ, ತಾಳಮದ್ದಲೆಗಳ ಅರ್ಥಗಾರಿಕೆ ಎಂಬ ವಾಚಿಕಾಭಿನಯದ ಭಾಷೆಯು ಹೊಸಗನ್ನಡ, ಆದರೆ ಅದು ತುಸು ಹಳತನವುಳ್ಳ, 'ಗಂಭೀರ' 'ಕೃತಕ' ರೀತಿಯಲ್ಲಿ, ಶೈಲೀಕೃತ ಕ್ರಮದ್ದಾಗಿರಬೇಕೆಂಬುದು ನಿರೀಕ್ಷಿತ, ಗ್ರಹೀತ ವಿಧಾನ. ಅದು ಗ್ರಾಂಥಿಕವಾದರೂ, ವಸ್ತುತಃ ಗ್ರಾಂಥಿಕ ಮತ್ತು ಆಡುನುಡಿಯ ವಿಚಿತ್ರ ಮಿಶ್ರಣವದು. ಅದೇ ಅರ್ಥಭಾಷೆಯ ಸ್ವಾರಸ್ಯ.
ಇಲ್ಲಿ, ದಕ್ಷಿಣ ಕನ್ನಡದ ಭಾಷಿಕ ವೈಶಿಷ್ಟವೊಂದನ್ನು ಗಮನಿಸಬೇಕು. ಇಲ್ಲಿ ಬಹುಸಂಖ್ಯರಿಗೆ ಕನ್ನಡವು ಕಲಿತು ಆಡುವ ಭಾಷೆ. ಇಲ್ಲಿಯ ಸಾಮಾನ್ಯ, ಮಾನಕ ಆಡುಗನ್ನಡವು 'ಗ್ರಾಂಥಿಕ'ದಂತೆಯೆ ಇದೆ. ಇದು ಯಕ್ಷಗಾನದ ಅಪೇಕ್ಷಿತ ಭಾಷಾರೂಪಕ್ಕೆ ಸಹಜವಾಗಿ ಅನುಕೂಲವಾಗಿ ಪರಿಣಮಿಸಿದೆ. ಅರ್ಥಗಾರಿಕೆಯ ಭಾಷೆ ಹಲವು ಬಾರಿ, ಸವಕಲು ಸ್ಥಗಿತ ಅನಿಸಿದರೂ, ಅದು ಹಾಗಿಲ್ಲ. ಸಮರ್ಥರಾದ ಪಾತ್ರಧಾರಿಗಳು ಅದರಲ್ಲಿ ಸತತವಾದ ಭಾಷಿಕ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ. ಕನ್ನಡ ವಾಙ್ಮಯದ ಉನ್ನತ ಸಿದ್ಧಿಗಳಲ್ಲಿ ಯಕ್ಷಗಾನದ ಅರ್ಥಗಾರಿಕೆಯು ಒಂದು ದೊಡ್ಡ ಮಜಲು, ಶೇಣಿ ಗೋಪಾಲಕೃಷ್ಣ ಭಟ್ಟರಂತಹ ಮಾತುಗಾರರ ಮಾತಿನಲ್ಲಿ, ಭಾಷೆಯ ಶಿಷ್ಟ - ಜಾನಪದ, ಗ್ರಾಂಥಿಕ - ಸಾಮಾನ್ಯ, ಸರಳ -ಪ್ರೌಢವೆಂಬ ಭೇದಗಳೆಲ್ಲ ಅಳಿದು, ಅದೊಂದು ಅದ್ಭುತ ಭಾಷಾ ಪಾಕವಾಗಿರುವುದನ್ನು ಕಾಣಬಹುದು. ಅಂತೆಯೆ, ಒಟ್ಟು ಅರ್ಥಗಾರಿಕೆಯ ಭಾಷೆಯಲ್ಲಿ ಘನಗಂಭೀರ ಶಬ್ದಾಲಂಕಾರ ಅರ್ಥಾಲಂಕಾರಗಳು, ಜೊತೆಗೆ ಗಾದೆ, ಆಡುನುಡಿ, ಕೂಡಿನುಡಿ, ಪಡೆ ನುಡಿಗಳೂ, ಸಂಸ್ಕೃತ ಶ್ಲೋಕದೊಂದಿಗೆ, ಕುಮಾರವ್ಯಾಸ, ಡಿವಿಜಿ, ಅಡಿಗರ ಕವನಗಳೂ ಅದರೊತ್ತಿಗೆ ತೀರ ಜಾನಪದ, ದಿನಬಳಕೆಯ ಮಾತೆನ್ನಬಹುದಾದುವೂ ಹೊಸಬೆಳಕು ಪಡೆದು ಅದರಲ್ಲಿ ಒಂದಾಗುವುದನ್ನು ಕಾಣುತ್ತೇವೆ. ದೀರ್ಘ ವಾಕ್ಯಗಳೊಂದಿಗೆ, ತೀರ ಚಿಕ್ಕ ವಾಕ್ಯಗಳೂ, ವಿವಿಧ ಕಾಕು ಹುಂಕಾರಗಳೂ ಪೋಣಿಸಿದಂತೆ ಬರುತ್ತವೆ. ವಾಕ್ಯರಚನೆ, ಭಾಷೆ, ನಾಟಕೀಯತೆಗಳ ನೆಲೆಯಲ್ಲಿ ಅರ್ಥಗಾರಿಕೆಯ ಅಧ್ಯಯನವು, ಅಸಾಧಾರಣ ರಹಸ್ಯಗಳನ್ನು ಹೊರಗೆಡಹ ಬಲ್ಲುದು. ಯಕ್ಷಗಾನದ ಭಾಷೆಯು

ಡಾ. ಎಂ. ಪ್ರಭಾಕರ ಜೋಶಿ