ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

135

ಅಸಾಮಾನ್ಯ ದೃಷ್ಟಾಂತಗಳು. ಇದು ಕಲೆಯಲ್ಲಿ ಒಂದು ವಿಧಾನ. ವಾಸ್ತವವಾದವು ನಿಜಕ್ಕೂ ದುರ್ಬಲ, ಯಕ್ಷಗಾನವು ತನ್ನ ಗೀತ, ನೃತ್ಯ, ವಾದನ, ಮಾತು ಮತ್ತು ಒಟ್ಟು ರಂಗ ವಿಧಾನದಲ್ಲಿ ಸಮಗ್ರವಾದ ಒಂದು ಶೈಲಿಯನ್ನು, ರೂಪವನ್ನು ಶತಮಾನಗಳ ಕಾಲದ ಸಹಜ ಪ್ರಕ್ರಿಯೆಗಳಿಂದ ಬೆಳೆಸಿಕೊಂಡು ಬಂದಿದೆ. ಈ ಸಮಗ್ರತೆ, ಶೈಲಿಗಳು ಅದರ ಮುಖ್ಯವಾದ ಲಕ್ಷಣಗಳು Characteristic identities, ಹೆಗ್ಗುರುತುಗಳು.
ಶೈಲಿಯೆಬುದು ಯಾವಾಗಲೂ ಪರಸ್ಪರ ಸಂಬಂಧವುಳ್ಳ ಅಂಗೋಪಾಂಗಗಳಿಂದ ಕೂಡಿದೆ. ಈ ಅಂಗೋಪಾಂಗ ಸಾಂಗತ್ಯದ ಅರಿವಿಲ್ಲದೆ ಯಾವುದೇ ಒಂದನ್ನು ಮುಟ್ಟಿ, ಅದನ್ನು ಪರಿಷ್ಕರಿಸುತ್ತೇನೆ. 'ಕಾಲೋಚಿತ'ಗೊಳಿಸ ಹೋಗುತ್ತೇನೆ ಎಂದರೆ ಅಂಗಭಂಗಕ್ಕೆ ಕಾರಣವಾಗುತ್ತದೆ. ಒಂದು ಉದಾಹರಣೆಗಾಗಿ, ನಮ್ಮ ರಾಜವೇಷದ ಕಿರೀಟದ ಕರ್ಣಪಾತ್ರದ ಸ್ಥಾನದಲ್ಲಿ ಯಾವುದೋ ಬೇರೊಂದು ಶೈಲಿಯ, ನಾಟಕದ ಕಿರೀಟದ ಕರ್ಣಪಾತ್ರ ಸಿಕ್ಕಿಸಿದೆವನ್ನೋಣ. ಆಗ ಇಡಿಯ ಕಿರೀಟವೂ ಒಟ್ಟು ವೇಷವೂ ವಿಕಾರವಾಗಿ ಕಾಣುತ್ತದೆ. ಕಾಲೋಚಿತ ಸ್ಪಂದನವೂ ಸಮಗ್ರವಾಗಿರಬೇಕಷ್ಟೆ? ಮದ್ದಲೆ ಬದಲಿಗೆ ಬೇರಾವುದೋ ಒಂದು ಅಸಂಗತವಾದ ವಾದ್ಯವನ್ನು `ಸ್ಟಿಕ್‌ಡ್ರಂ ಎಂದಿಟ್ಟುಕೊಳ್ಳೋಣ - ಬಾರಿಸಿದರೆ, ವಿಸಂವಾದವಾಗುತ್ತದೆ. ಹಾಗೆಂದು ಮದ್ದಲೆಯ ಬದಲಿಗೆ, ಸರಿಯಾದ ಸಿದ್ಧತೆಯಿಂದ ಬಾರಿಸಿದರೆ, ಪಖವಾಜ್ ಹೊಂದಿಕೊಂಡೀತು. ಇದು ಪರಿಷ್ಕಾರದ ಒಟ್ಟು ತತ್ತ್ವಕ್ಕೊಂದು ಉದಾಹರಣೆ ಅಷ್ಟೆ.
ಕಾಲಕ್ಕೆ ತಕ್ಕಂತೆ ಶೈಲಿಗೂ, ಕಲೆಗೂ ಪರಿಷ್ಕಾರವು ಬೇಡವೆ? ನಾವೀನ್ಯ ಬೇಡವೆ? ಪ್ರಯೋಗಗಳು ಆಗಿಲ್ಲವೆ? ಅವು ನಿಷಿದ್ಧವೆ? ಜನರು ಬಯಸಿದ್ದನ್ನು ನಾವು ಕೊಡಬೇಡವೆ? ಮೊದಲಾದ ಪ್ರಶ್ನೆಗಳಿವೆ. ಆದರೆ ಇಂತಹ ಪ್ರಶ್ನೆ ಕೇಳಲು ಸುಲಭ. ಅದರ ವಿವೇಚನೆ ಸರಳವಲ್ಲ, ಸುಲಭವೂ ಅಲ್ಲ. ಇಲ್ಲ 'ಕಾಲಕ್ಕೆ ತಕ್ಕ', 'ಪರಿಷ್ಕಾರ', 'ಪ್ರಯೋಗ','ನಾವೀನ್ಯ' 'ಜನರು' ಎಂಬುದೆಲ್ಲ ಪಕ್ಕನೆ ಎಸೆದು ಬಿಡುವ ಅನುಕೂಲ ಪದಸಿಂಧು ಆಗಬಾರದು. ಬಾಯಿಮುಚ್ಚಿಸುವ ಉಪಕರಣಗಳೂ ಆಗಬಾರದು. ಕಲೆ ಬೆಳೆಯಬೇಕು, ಕಳೆಯಬಾರದು, ಕಲೆಯೆಂಬ ಹೆಸರಲ್ಲಿ ಕಳೆ ಬೆಳೆಸಿ 'ಇದು ಪ್ರಯೋಗ', 'ಇದು ಜನರಿಗಾಗಿ' ಅನ್ನುವುದು ಮಾತಿಗೊಂದು ಮಾತು ಎಂಬಂತಾಗುತ್ತದೆ. ಮೇಲಿನ ಎಲ್ಲ ಪ್ರಶ್ನೆಗಳಿಗೂ ಹೀಗೊಂದು ಪ್ರತಿಪ್ರಶ್ನೆ ಕೇಳಬಹುದು: ಕಲಾವಿದರಿಗೆ, ಕಲಾ ವ್ಯವಹಾರ ವ್ಯವಸಾಯಕ್ಕೆ ಕಲೆಯ ಕುರಿತು ಹೊಣೆಯಿಲ್ಲವೆ? ಮೊದಲ ಹೊಣೆ ಅವರದೆ ಅಲ್ಲವೆ?

ಡಾ. ಎಂ. ಪ್ರಭಾತರ ಜೋಶಿ