ಈ ಪುಟವನ್ನು ಪ್ರಕಟಿಸಲಾಗಿದೆ
136
ಮುಡಿ

ನಾವೀನ್ಯ - ಪರಿಷ್ಕಾರ - ಪ್ರಯೋಗವೆಂಬ ತ್ರಿವಿಧ ಸುಧಾರಣೆಗಳು ಎಲ್ಲ ಕಲೆಗಳಿಗೂ ಅಗತ್ಯವೇ. ಅವು ಆಗಿವೆ, ಆಗುತ್ತಿವೆ. ಆದರೆ, ವಿಕಾರ ಯಾವುದು, ವಿಕಾಸ ಯಾವುದು ಎಂಬುದಕ್ಕೆ ಖಚಿತ ವಿಮರ್ಶಾ ಮಾನದಂಡಗಳಿವೆ. ಸುಮಾರು ಒಂದು ಸಾವಿರ ವರ್ಷಗಳ ಕಾಲ ಬೆಳೆದು ಬೆಳೆದು ಒಂದು ಸಾವಯವ ಸುಂದರ ರೂಪಕ್ಕೆ ಬಂದ ಕಲೆ, ಬರಿಯ ಐವತ್ತು ವರ್ಷಗಳಲ್ಲಿ ಭಿನ್ನ ಭಿನ್ನವಾಗಿ, ಕೀಳಾಗಿ ಹೋದುದನ್ನು ಕಂಡಾಗ, ಪರಿಷ್ಕಾರವೆಂಬುದರ ಗಾಂಭೀರ್ಯ, ಆಳ, ಅರಿವಾಗಿ ಅದರ ಕುರಿತು ಭಯವಾಗುತ್ತದೆ.
ಎಲ್ಲದರಲ್ಲಿ ಎಲ್ಲವೂ ಸಾಧ್ಯವಿಲ್ಲ. ಅಗತ್ಯವೂ ಇಲ್ಲ. ವಸ್ತು ಮತ್ತು ಆಶಯ ನಾವೀನ್ಯಕ್ಕೂ ವಿಧಾನಗಳಿವೆ. ಹೊಸತನ್ನು ಧ್ವನಿಸುವುದು ಬೇರೆ, ಕಲಾರೂಪಕ್ಕೆ ಸಲ್ಲದ ಹಾಗೆ ಹಸಿಯಾಗಿ ದುರ್ಬಲ ಅನುಕೃತಿ ರೂಪದಿಂದ ಮಾಡುವುದು ಬೇರೆ. ಯಕ್ಷಗಾನ ಮಾಧ್ಯಮಕ್ಕೆ ಯೇಸುಕ್ರಿಸ್ತನ ವೇಷವನ್ನು ಅಳವಡಿಸುವಾಗ, ಆ ಪಾತ್ರವನ್ನು ಐತಿಹಾಸಿಕವಾಗಿ 'ಬಡ ಜೋಸೆಫ್‌ನ ಮಗ'ನಾಗಿ ಚಿತ್ರಿಸಿದರೆ, ಅದು ಯಕ್ಷಗಾನ ರೂಪದ ಪ್ರದರ್ಶನದ ನಾಯಕ ಪಾತ್ರವಾಗುವುದಿಲ್ಲ. ಆತನು ಋಷಿ, ದೇವಪುತ್ರ, ಮಹಾತ್ಮ ಎಂಬುದನ್ನು ಪರಿಭಾವಿಸಿ ಒಂದು 'ಅವಾಸ್ತವ' ಸಾಂಕೇತಿಕ ದೈವಿಕ ರೂಪವನ್ನು ಕೊಡಬೇಕಾಗುತ್ತದೆ. ಸೂಕ್ತವಾದ ಆಭರಣಗಳು, ಕಿರಣ ಅಥವಾ ಜರಿ ಶಿಖೆಯಂತಹ ಶಿರೋಭೂಷಣವೂ ಅಗತ್ಯವಾಗುತ್ತದೆ. (ಪ್ರೊ। ಎಂ. ಎಲ್. ಸಾಮಗರು ಇಂತಹ ಒಂದು ಕರಡು ರಚನೆಯನ್ನು ಮಾಡಿದ್ದರು.)
ಇಂದಿನ ಒಂದು ರಾಜಕೀಯ ಹಗರಣವನ್ನು ಪ್ರಸಂಗವಾಗಿಸಿದರೆ ಅದು ಅಣಕವೆನಿಸುತ್ತದೆ. 'ನಮ್ಮೂರಿಗೆ ಬಸ್ಸು ಬಾರದಿರುವ ವಿಚಾರಕ್ಕೆ ಪ್ರತಿಭಟನೆ' ಮಾಡಲು, ಕಲಾ ರೂಪದಲ್ಲಿ ಅಸಾಧ್ಯ. ಹಾಗೆಂದು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಅಗತ್ಯ, ಮೌಲ್ಯ ಪ್ರಜ್ಞೆಗಳ ಎಚ್ಚರವನ್ನು ಸಾಂಪ್ರದಾಯಿಕ ಕತೆಯೊಳಗಿಂದಲೆ ಧ್ವನಿಸಿ, ಚಿಂತನವನ್ನು ರೂಪಿಸಬಹುದು.
ನವೀನ ವಸ್ತು ಎಂದು ಹೇಳುವಾಗ, ಪೌರಾಣಿಕವೇ ಆಗಬೇಕೆಂದೂ ಅರ್ಥವಲ್ಲ. "ಯಕ್ಷಗಾನೋಚಿತ" ವಸ್ತು ಆಗಬೇಕು. ಪೌರಾಣಿಕವಲ್ಲದ ರತ್ನಾವತಿ, ವಸಂತ ಸೇನಾ, ಗಂಧರ್ವ ಕನ್ಯ ಇವು ಈ ಕಲೆಗೆ ಹೊಂದಿಕೊಳ್ಳುವುದು ಅವುಗಳಲ್ಲಿರುವ ಯಕ್ಷಗಾನ ಮಾಧ್ಯಮಕ್ಕೆ ಒಪ್ಪುವ ವಿನ್ಯಾಸದಿಂದಾಗಿ, 'ಭಾರತೀಯ'ಗೊಳಿಸಿದ, ಷೇಕ್ಸ್‌ಪಿಯರ್

ಕತೆಯನ್ನು, ಅನ್ಯದೇಶೀಯ ಪುರಾಣಗಳನ್ನು ನಮ್ಮ ಸಾಂಪ್ರದಾಯಿಕ ಕಲೆಗಳು ಯಶಸ್ವಿಯಾಗಿ

• ಡಾ. ಎಂ. ಪ್ರಭಾಕರ ಜೋಶಿ