ಈ ಪುಟವನ್ನು ಪ್ರಕಟಿಸಲಾಗಿದೆ

154

ಮುಡಿ

ಕವಿಯ ದೃಷ್ಟಿನಾವೀನ್ಯವು ಅವರ ಸ್ತುತಿ, ಮಂಗಲ ಪದ್ಯಗಳಲ್ಲಿ ಕಂಡು ಬರುತ್ತದೆ. ಅವರ ಸುತ್ತಿಗಳು ಬೆಳಕಿಗೆ, ಶ್ರೇಯಕ್ಕೆ, ಅರಿವಿಗೆ, ಜೀವನಕ್ಕೆ, ಯುಗಧರ್ಮಕ್ಕೆ ಸಂದಿವೆ. ಸೌಂದರ್ಯಕ್ಕೆ, ಲಯದ ತತ್ವಕ್ಕೆ, ನಲ್ಮೆಗೆ, ಚೈತನ್ಯಕ್ಕೆ ಮಂಗಲ ಪದ್ಯಗಳನ್ನು ರಚಿಸಲಾಗಿದೆ. ರಂಗದ ಸನ್ನಿವೇಶಗಳ ಪ್ರದರ್ಶನ, ಯಕ್ಷಗಾನದ ವೇಷ ವೈವಿಧ್ಯದ ಬಳಕೆ, ನರ್ತನಾನುಕೂಲತೆಗಳ ರಂಗದೃಷ್ಟಿಯನ್ನು ಅಚ್ಚುಕಟ್ಟಾಗಿ ಅಳವಡಿಸಲಾಗಿದೆ. ಅರ್ಥದಾರಿಗೆ ಅರ್ಥ ಹೇಳಲು ಅನುಕೂಲವಾಗುವಂತೆ ಪದ್ಯಗಳ ವಿಷಯ ಮಂಡನೆ ಇದೆ. ಹಲವು ಪದ್ಯಗಳ 'ಅರ್ಥ ಪ್ರಸವ ಕ್ಷಮತೆ'ಉತ್ಕೃಷ್ಟವಾಗಿದೆ. (ಉದಾ: ವಿಶ್ವರೂಪಾಚಾರ್ಯನ ದೃಶ್ಯಗಳು.)
ಒತ್ತೊತ್ತಾಗಿರುವ ಅತಿ ದೀರ್ಘವಾದ ಕಥೆಯಿಂದಾಗಿ, ಮಾರ್ವಿಕ ಸನ್ನಿವೇಶ ವಿಸ್ತಾರಕ್ಕೆ ಕೊರತೆಯಾಗಿದೆ. ಅಮೃತರ ಕಥಾ ಸರಣಿ ಸರಳ ರೇಖಾತ್ಮಕವಾದುದರಿಂದ ತಿರುವುಗಳು, ಸುಳಿಗಳು, ರಂಜಕತೆಗಳಿಗೆ ಅವಕಾಶ ಕಡಿಮೆ. ಪ್ರತಿನಾಯಕ ಪಾತ್ರಗಳನ್ನು ಪ್ರಧಾನ ಸ್ಥಾನಕ್ಕೆ ತಂದುದರಿಂದ, ನಾಯಕ ಪಾತ್ರಗಳನ್ನು ಏನು ಮಾಡುವುದೆಂಬ ಗೊಂದಲ ಅವರನ್ನು ಕಾಡಿದೆ. ಪಾತ್ರಗಳಿಗಾಗಿಯೇ ಕೆಲವು ಸನ್ನಿವೇಶಗಳ ರಚನೆ ಬಂದುದರಿಂದ ಕೆಲವೆಡೆ ಕೃತಕತೆ ತಲೆ ಹಾಕಿದೆ. ಅಮೃತರು ಕ್ರಾಂತಿಕಾರಿಯಲ್ಲ, ಸುಧಾರಕ ದೃಷ್ಟಿಯವರು. ಹಾಗಾಗಿ, ಕೊನೆಗೆ ಅವರು ಕ್ರಾಂತಿಯ ಸಾಧ್ಯತೆ ತೋರಿ ಕೊನೆಗೆ ಪೌರಾಣಿಕತೆಗೇ ಶರಣಾಗುತ್ತಾರೆ. (ಉ : ತ್ರಿಪುರ ಮಥನದ ಚಾರ್ವಾಕ ಪ್ರಕರಣ.)
ಈ ಕೃತಿ ಸಂಪುಟಕ್ಕೆ ಡಾ| ಪುರುಷೋತ್ತಮ ಬಿಳಿಮಲೆ ಅವರು ಬರೆದಿರುವ ಮುನ್ನುಡಿಯು ಪ್ರಸಂಗ ಸಾಹಿತ್ಯ ಅಧ್ಯಯನಕ್ಕೆ ಒಂದು ಮಾದರಿ ಪ್ರವೇಶಿಕೆಯಾಗಿದ್ದು, ವಿಶ್ಲೇಷಣಾತ್ಮಕ ನೋಟಗಳ ಮೂಲಕ ಸಂಪುಟಕ್ಕೆ ಗೌರವವನ್ನು ತಂದಿದೆ.
ಸಮನ್ವಯ ದೃಷ್ಟಿ, ಗಂಭೀರ ದೃಷ್ಟಿಕೋನ, ಪರಂಪರೆಯ ಪರಿಜ್ಞಾನ, ಹೊಸ ಆಶಯದ ಕನಸು, ಅಸಾಧಾರಣ ಭಾಷಾ ಸೌಂದರ್ಯಗಳಿಂದ ಅಮೃತರು ಆಧುನಿಕ ಯುಗದ ಅತ್ಯಂತ ಮಹತ್ವದ ಯಕ್ಷಗಾನ ಕವಿ. ಅವರ ಸಂಪುಟದ ಪ್ರಕಟನೆ ಯಕ್ಷಗಾನ ಸಾಹಿತ್ಯದ ಒಂದು ಮುಖ್ಯ ಘಟನೆ. ಅವರ ಯಕ್ಷಗಾನ ಕಾವ್ಯರಚನೆಯ ಮುಂದಿನ ಹಂತ ದೊಡ್ಡ ನಿರೀಕ್ಷೆಗಳನ್ನು ನಿರ್ಮಿಸುತ್ತದೆ.

0 ಡಾ. ಎಂ. ಪ್ರಭಾಕರ ಜೋಶಿ