ಈ ಪುಟವನ್ನು ಪ್ರಕಟಿಸಲಾಗಿದೆ
ಅಮೃತರ 'ಯಕ್ಷಾಂದೋಳ'ದ
ಮಹತ್ತ್ವದ ಚರ್ಚೆಗಳು

ಯಕ್ಷಗಾನ ಪ್ರಸಂಗಕರ್ತ, ಪ್ರಯೋಗಶೀಲ ಸಂಯೋಜಕ ಮತ್ತು ವಿಮರ್ಶಕರಾಗಿ ಈ ಕಲೆಯೊಂದಿಗೆ ದೀರ್ಘಕಾಲದ ಆತ್ಮೀಯ ಸಂಪರ್ಕವನ್ನಿರಿಸಿಕೊಂಡು ಕೆಲಸ ಮಾಡುತ್ತ ಬಂದಿರುವ ಪ್ರೊ| ಅಮೃತ ಸೋಮೇಶ್ವರರ ಯಕ್ಷಗಾನ ಸಂಬಂಧಿಯಾದ ಬರಹಗಳ ಸಂಕಲನ 'ಯಕ್ಷಾಂದೋಳ'ವು, ಯಕ್ಷಗಾನ ಕಲೆಯ ಕುರಿತು ಅಧ್ಯಯನಪೂರ್ಣ ಚಿಂತನೆಗಳಿಂದ ಕೂಡಿದ, ಚರ್ಚೆಗಳನ್ನು ಪ್ರೇರಿಸುವ ಒಂದು ಕೃತಿಯಾಗಿದ್ದು, ಈ ಬಗೆಯ ಸಾಹಿತ್ಯಕ್ಕೆ ಒಂದು ದೊಡ್ಡ ಸೇರ್ಪಡೆಯಾಗಿದೆ.
ಯಕ್ಷಗಾನ ಶಬ್ದದ ಮತ್ತು ಕಲೆಯ ಮೂಲ, ವಿಕಾಸಗಳ ಯಕ್ಷಪ್ರಶ್ನೆಯನ್ನು ಎತ್ತಿಕೊಂಡು ಯಕ್ಷಿ, ಯಕ್ಷ, ಯಕ್ಷಪೂಜೆ, ಜಕ್ಕ, ಜಕ್ಕುಲು ಮೊದಲಾದುವುಗಳ ಜಾಡು ಹಿಡಿದು, ದಕ್ಷಿಣ ಭಾರತದ ವಿವಿಧ ರಂಗಭೂಮಿಗಳನ್ನು, ಆಚರಣ ವಿಧಾನಗಳನ್ನು ಸ್ಪರ್ಶಿಸಿ ಇವೆಲ್ಲವೂ ಏಕಮೂಲದಿಂದ ವಿಸ್ತಾರಗೊಂಡ ಪ್ರಕಾರಗಳೆಂದು ಗುರುತಿಸಿ ವಿಸ್ತಾರವಾದ ಬಯಲಾಟದ ಸಂಸಾರದ ಒಂದು ಸ್ಕೂಲ ಚಿತ್ರವನ್ನು ಅಮೃತರು ರೇಖಿಸಿದ್ದಾರೆ. ಇದೊಂದು ಸಂಶೋಧನಾ ದಿಕ್ಕೂಚಿ ಲೇಖನವಾಗಿದ್ದು, ಸೋದರ ಕಲೆಗಳ ಪರಿವೇಶದಲ್ಲಿ ಯಕ್ಷಗಾನವನ್ನು ಪರಿಶೀಲಿಸುತ್ತದೆ.

ಡಾ. ಎಂ. ಪ್ರಭಾಕರ ಜೋಶಿ